“ಮನುಷ್ಯ ಜೀವನ ಪವಿತ್ರ ಪಾವನ. ಅದನ್ನು ಅರಿತು ಬಾಳುವುದರಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಇವೆ. ದೊಡ್ಡ ಮಾತುಗಳನ್ನಾಡುವುದರಿಂದ ಮನುಷ್ಯ ದೊಡ್ಡವನಾಗುವುದಿಲ್ಲ; ದೊಡ್ಡ ಮನಸ್ಸು, ಉತ್ತಮ ಗುಣ–ನಡತೆ ಇರುವವನೇ ನಿಜವಾದ ದೊಡ್ಡಸ್ತಿಕೆಗೆ ಪಾತ್ರನು,” ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದಲ್ಲಿ ನಡೆದ ಶ್ರೀ ಗುರು ಉದಯ ಮಹಾಂತೇಶ್ವರರ ಜಾತ್ರಾ ಮಹೋತ್ಸವ ಹಾಗೂ ಸೋಮೇಶ್ವರ ಶಿವಾಚಾರ್ಯ ಗುರು ಪಟ್ಟಾಧಿಕಾರ ದ್ವಾದಶ ವರ್ಧಂತಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
“ಜೀವನ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ, ನಾವು ಇನ್ನವರಿಗೆ ಏನು ಕೊಟ್ಟಿದ್ದೇವೆ ಎನ್ನುವುದೇ ಮುಖ್ಯ. ಸ್ವಾಭಿಮಾನ ಕೊರತೆಯಿಂದ ಅನೇಕರು ನೋವುಗಳನ್ನು ಅನುಭವಿಸುತ್ತಿದ್ದಾರೆ. ದೇಶಾಭಿಮಾನ ಮತ್ತು ಧರ್ಮಾಭಿಮಾನ ಪ್ರತಿಯೊಬ್ಬರಲ್ಲೂ ಬೆಳೆದು ಬರಬೇಕು,” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಾಗಠಾಣ ಹಿರೇಮಠದ ಪರಮಪೂಜ್ಯ ಶ್ರೀ ಸೋಮೇಶ್ವರ ಶಿವಾಚಾರ್ಯರು ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.