“ಕೊಪ್ಪಳ|ಬಲ್ದೊಟಾ ಕಾರ್ಖಾನೆ ವಿಸ್ತರಣೆಗೆ ತೀವ್ರ ವಿರೋಧ: ಚಳುವಳಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬೆಂಬಲ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಇಲ್ಲಿನ ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿಯಾಗಿ ನಡೆಸುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿ ಹೋರಾಟಕ್ಕೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ( ಎಐಎಂಎಸ್ ಎಸ್) ಬೆಂಬಲ ವ್ಯಕ್ತಪಡಿಸಿದೆ.
ಈ ವೇಳೆ ಎಐಎಂಎಸ್ ಎಸ್ ನ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ, “ಕಾರ್ಖಾನೆಗಳ ವಿಸ್ತರಣೆ ಸ್ಥಳೀಯರ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಲಿದೆ. ಈಗಾಗಲೇ ಇರುವ ಘಟಕಗಳಿಂದ ಹೊರಬರುತ್ತಿರುವ ಹಾನಿಕಾರಕ ಧೂಳು ಹಾಗೂ ಕಲ್ಮಶದಿಂದ ಜನರು ಚರ್ಮರೋಗ, ಹೃದಯ, ಶ್ವಾಸಕೋಶ ಸಂಬಂಧಿತ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಹೋರಾಟಕ್ಕೆ ಬೆಂಬಲಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಧರಣಿ-ಸತ್ಯಾಗ್ರಹ ಸ್ಥಳಕ್ಕೆ ಬಂದು ಬೇಡಿಕೆಗಳನ್ನು ಆಲಿಸಿ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಮಿತಿಯ ಅಧ್ಯಕ್ಷೆ ಮಂಜುಳಾ ಮಜ್ಜಿಗೆ ಮಾತನಾಡಿ,“ಕೊಪ್ಪಳ-ಭಾಗ್ಯನಗರ ಪ್ರದೇಶದ 1.5 ಲಕ್ಷ ಜನರ ಆರೋಗ್ಯ ರಕ್ಷಣೆಗೆ ಹಾಗೂ 20 ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರ ಪುನರ್ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಪ್ಪಳಕ್ಕೆ ಬಲ್ದೋಟ ಕಂಪನಿ (BSPL) ಬರಬಾರದು. ಬಸಾಪುರ ಕೆರೆಯನ್ನು ಸಾರ್ವಜನಿಕರಲ್ಲಿ ಮತ್ತೆ ಮುಕ್ತಗೊಳಿಸಬೇಕು. ತುಂಗಭದ್ರ ಜಲಾಶಯವನ್ನು ಮಾಲಿನ್ಯದಿಂದ ರಕ್ಷಿಸುವುದು ಅವಶ್ಯಕ,” ಎಂದು ಬೇಡಿಕೆ ಮುಂದಿರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸಮಿತಿಯ ಸಂಚಾಲಕ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಡಿ.ಎಚ್ .ಪೂಜಾರ ಮತ್ತು ಸಂಘಟನೆಯ ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಶಾರದಾ ಗಡ್ಡಿ, ಹುಸೇನ್ ಬೀ, ಸುಭಾನ್ ನೀಲರಗಿ, ಸೇರಿದಂತೆ ಹಲವಾರು ಜನ ಹೋರಾಟಗಾರರು ಉಪಸ್ಥಿತರಿದ್ದರು.