“ಶಹಾಪುರ| ಸಹಕಾರ ಕ್ಷೇತ್ರದಿಂದ ಮಹಿಳೆಯರ ಆರ್ಥಿಕ ಬಲವರ್ಧನೆ ಸಾಧ್ಯ: ವಿಶ್ವನಾಥರೆಡ್ಡಿ ದರ್ಶನಾಪೂರ ಅಭಿಮತ “
• ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ:
“ಸಹಕಾರ ಕ್ಷೇತ್ರದಿಂದ ಮಹಿಳೆಯರ ಆರ್ಥಿಕ ಬಲವರ್ಧನೆ ಸಾಧ್ಯ: ವಿಶ್ವನಾಥರೆಡ್ಡಿ ದರ್ಶನಾಪೂರ ಅಭಿಮತ “: “ಸಹಕಾರ ಕ್ಷೇತ್ರವು ಮಹಿಳೆಯರಿಗೆ ಆರ್ಥಿಕ ಬಲವರ್ಧನೆಯ ಶಾಶ್ವತ ಮಾರ್ಗ. ಸಂಘಟನೆ, ಉಳಿತಾಯ ಮತ್ತು ಸಬಲೀಕರಣ—ಈ ಮೂರು ಅಂಶಗಳನ್ನು ಸಹಕಾರ ವ್ಯವಸ್ಥೆ ಗಟ್ಟಿಗೊಳಿಸುತ್ತದೆ” ಎಂದು ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪೂರ ಅವರು ಹೇಳಿದ್ದಾರೆ.
ನಗರದ ಕಾಳಿಕದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಚೈತನ್ಯ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಹಕಾರವೆಂದರೆ ಒಗ್ಗಟ್ಟಿನ ಶಕ್ತಿ. ಸಾಮಾನ್ಯ ಉದ್ದೇಶಕ್ಕಾಗಿ ಒಟ್ಟಾಗಿ ಶ್ರಮಿಸುವ ಪರಸ್ಪರ ಸಹಾಯದ ವ್ಯವಸ್ಥೆ. ಆರ್ಥಿಕ ಸ್ಥೈರ್ಯಕ್ಕೆ, ಉದ್ಯಮಶೀಲತೆಗೆ ಮತ್ತು ಸಾಮಾಜಿಕ ಬದಲಾವಣೆಗೆ ಸಹಕಾರವೇ ಮೂಲಾಧಾರ” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಪಿತಾಮಹರ ಭಾವಚಿತ್ರಕ್ಕೆ ಎಂ. ನಾರಾಯಣ, ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟದ ಉಪಾಧ್ಯಕ್ಷರು, ಪುಷ್ಪಾರ್ಚನೆ ಸಲ್ಲಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ ಪಿ.ಗೂಗಲ ಅವರು, “ಸಹಕಾರ ಸಂಘಗಳು ಹಿಂದುಳಿದ ವರ್ಗಗಳ ಆರ್ಥಿಕ ಪುನರುತ್ಥಾನಕ್ಕೆ ಸೇವೆ ಸಲ್ಲಿಸಲು ಪರಿಣಾಮಕಾರಿ ವೇದಿಕೆ” ಎಂದು ಅಭಿಪ್ರಾಯಪಟ್ಟರು.
ಸಹಕಾರ ಸಪ್ತಾಹದ ಉಪನ್ಯಾಸಕರಾದ ಸುಜಾತ ಕುಂಬಾರ ಅವರು ‘ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ’ ವಿಷಯವಾಗಿ ಉಪನ್ಯಾಸ ನೀಡಿದರು.
ಚೈತನ್ಯ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರಾಜಶ್ರೀ ಪ್ರೇಮನಾಥ ಶೆಟ್ಟಿ, ಸದಸ್ಯರಾದ ನಿರ್ಮಾಲ ಉಪ್ಪಿನ, ಸರಸ್ವತಿ ಬಿರಾದಾರ, ಜಯಶ್ರೀ ಮತ್ನಾಳ, ಅನಿತಾ ಇಟಗಿ, ಚಂದ್ರಕಲಾ ಉಪ್ಪಿನ, ಪಾವರ್ತಿ ಪಾಟೀಲ್, ಸುಜಾತ ಅಲಬನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೇಖಾ ಗಾಯ್ಕವಾಡ್ ನಿರೂಪಿಸಿದರು. ಸುಜಾತ ಹಿರೇಮಠ ವಂದನೆ ಸಲ್ಲಿಸಿದರು. ಸಮಾರಂಭಕ್ಕೆ ನೂರಾರು ಮಹಿಳೆಯರು ಹಾಜರಾಗಿದ್ದರು.