🚨 LOCAL EXPRESS : “ಶಹಾಪುರ |ಸುಳ್ಳು ಎಸ್‌ಟಿ ಪ್ರಮಾಣ ಪತ್ರ ನೀಡಿದರೆ ಉಗ್ರ ಹೋರಾಟ : ವಾಲ್ಮೀಕಿ ಸಮಾಜ ಖಡಕ್ ಎಚ್ಚರಿಕೆ”

By admin

🚨 LOCAL EXPRESS : “ಶಹಾಪುರ |ಸುಳ್ಳು ಎಸ್‌ಟಿ ಪ್ರಮಾಣ ಪತ್ರ ನೀಡಿದರೆ ಉಗ್ರ ಹೋರಾಟ : ವಾಲ್ಮೀಕಿ ಸಮಾಜ ಖಡಕ್ ಎಚ್ಚರಿಕೆ”

• ಸೆಕ್ಯುಲರ್‌ ವಾಯ್ಸ ನ್ಯೂಸ್‌ ಶಹಾಪುರ :

ಕೋಲಿ–ಕಬ್ಬಲಿಗ ಸಮಾಜದ ತಳವಾರ ಹಾಗೂ ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಿರುವುದಾಗಿ ಯಾವುದೇ ಪರಿಷ್ಕೃತ ಆದೇಶವನ್ನು ಸರಕಾರ ಹೊರಡಿಸಿಲ್ಲ; ಕೇವಲ ಹಿಂದಿನ ಆದೇಶಗಳ ಸ್ಪಷ್ಟೀಕರಣ ಮಾತ್ರ ನೀಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಅವರು ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24-12-2025ರಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೀಡಿರುವುದು ಹೊಸ ಆದೇಶವಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ತಳವಾರ ಜಾತಿಗೆ ಯಾವುದೇ ಕಾರಣಕ್ಕೂ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಬಾರದು ಎಂಬುದನ್ನೇ ಸ್ಪಷ್ಟಪಡಿಸಲಾಗಿದೆ ಎಂದರು.

ಈ ಸ್ಪಷ್ಟೀಕರಣವನ್ನು ಪರಿಷ್ಕೃತ ಆದೇಶವೆಂದು ಬಿಂಬಿಸಿ ಕೋಲಿ–ಕಬ್ಬಲಿಗ ಸಮಾಜವನ್ನು ರಾಜಕೀಯ ಮುಖಂಡರು ದಾರಿ ತಪ್ಪಿಸುತ್ತಿರುವುದು ಖಂಡನೀಯ. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಚಳಿಗಾಲ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ, ನಾಯಕ ವಾಲ್ಮೀಕಿ ಜನಾಂಗದ ತಳವಾರ–ಪರಿವಾರ ಜಾತಿಗಳಿಗೆ ಮಾತ್ರ ಎಸ್‌ಟಿ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದುಳಿದ ವರ್ಗದ ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಅವಕಾಶವಿಲ್ಲ ಎಂದು ಸಿಎಂ ಹೇಳಿರುವುದನ್ನು ಮರೆಮಾಚಲಾಗುತ್ತಿದೆ ಎಂದು ದೂರಿದರು.

ನಕಲಿ ಎಸ್‌ಟಿ ಜಾತಿ ಪ್ರಮಾಣ ಪತ್ರಗಳನ್ನು ಕೂಡಲೇ ರದ್ದುಪಡಿಸದಿದ್ದರೆ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಶಾಸಕರ ಮನೆಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ಉಗ್ರ ಹೋರಾಟಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಹಿಂದ ಘಟಕದ ಜಿಲ್ಲಾಧ್ಯಕ್ಷ ಹನುಮೇಗೌಡ ಮರಕಲ್, ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ತಾಲೂಕು ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ,   ಅಹಿಂದ ಘಟಕ ಜಿಲ್ಲಾಧ್ಯಕ್ಷ, ಹನುಮೇಗೌಡ ಮರಕಲ್ ,ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ದೇವು ಗಂಗನಾಳ, ತಾಲೂಕು ಕಾರ್ಯದರ್ಶಿ ಹಣಮಂತ ದೊರೆ ಟೋಕಾಪುರ ಸೇರಿದಂತೆ  ರಾಘವೇಂದ್ರ ಯಕ್ಷಂತಿ ಹಳಿಸಗರ, ಅಶೋಖ ಟಣೆಕೆದಾರ, ಸುಭಾಷ ರಾಂಪೂರ, ಅಂಬರೇಶ ಇಟಗಿ, ರಮೇಶ ಗುರಿಕಾರ ಕಕ್ಕಸಗೇರಾ,ತಿರುಪತಿ, ಯಕ್ಷಂತಿ ಹಳಿಸಗರ,ಗೋಪಾಲ ದೊರೆ ಬೋಮ್ಮನಹಳ್ಳಿ, ಮಲ್ಲು ದೊರೆ ಅಳ್ಳಳ್ಳಿ,ಬಲಭೀಮ ನಾಯಕ,ಹೊನ್ನಪ್ಪ ದೊರೆ ಬೋಮನಹಳ್ಳಿ,ಶರಣಪ್ಪ ಜಾಕನಳ್ಳಿ, ಅಶೋಕ ಗಾಂಜಿ ಹಳಿಸಗರ – ನಗರ ಘಟಕಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
—————————————————

“ಸುಳ್ಳು ಜಾತಿ ಪ್ರಮಾಣ ಪತ್ರಗಳಿಗೆ ಅವಕಾಶ ಇಲ್ಲ”

ಸ್ಪಷ್ಟೀಕರಣದ ನೆಪದಲ್ಲಿ ಜಿಲ್ಲೆಗಳಲ್ಲಿ ಮತ್ತೆ ಸುಳ್ಳು ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಿದರೆ ವಾಲ್ಮೀಕಿ ನಾಯಕ ಸಮಾಜ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ಸರಕಾರದ ಯಾವುದೇ ಹೊಸ ಆದೇಶ ಅಥವಾ ಸುತ್ತೋಲೆ ಬಂದಿಲ್ಲ. ಅಧಿಕಾರಿಗಳು ವದಂತಿಗಳಿಗೆ ಕಿವಿಗೊಡಬಾರದು ಹಾಗೂ ನಕಲಿ ಪ್ರಮಾಣ ಪತ್ರಗಳನ್ನು ತಕ್ಷಣವೇ ರದ್ದುಪಡಿಸಬೇಕು.

-ಗೌಡಪ್ಪಗೌಡ ಆಲ್ದಾಳ, ಜಿಲ್ಲಾಧ್ಯಕ್ಷ ವಾಲ್ಮೀಕಿ ಸಮಾಜ

————————————————

“ನ್ಯಾಯಾಲಯದ ಆದೇಶ ಪಾಲನೆ ಕಡ್ಡಾಯ”

ಉಚ್ಚ ನ್ಯಾಯಾಲಯ ಈಗಾಗಲೇ ಸುಳ್ಳು ಜಾತಿ ಪ್ರಮಾಣ ಪತ್ರಗಳ ಕುರಿತು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅದರಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಾಗಲಿದೆ. ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಮಾಜ ಒಪ್ಪುವುದಿಲ್ಲ.

– ಶ್ರವಣಕುಮಾರ ನಾಯಕ, ರಾಜ್ಯಾಧ್ಯಕ್ಷ, ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ.