ಹನ್ನೆರಡನೇ ಶತಮಾನವೇ ವಿಶ್ವಕ್ಕೆ ಸುವರ್ಣ ಯುಗ. ಬಸವಣ್ಣನವರು ಕನ್ನಡನಾಡಲ್ಲಿ ಸೃಷ್ಟಿಸಿದ ಕ್ರಾಂತಿ ಇಂದಿಗೂ ಅವಿಸ್ಮರಣೀಯ,” ಎಂದು ಶರಣ ಚಿಂತಕ ಲಕ್ಷ್ಮಣ ಲಾಳಸೇರಿ ಅಭಿಪ್ರಾಯಪಟ್ಟರು.
ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಹಾಗೂ ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ್ದ 127ನೇ ತಿಂಗಳ ಬಸವ ಬೆಳಕು ಕಾರ್ಯಕ್ರಮದಲ್ಲಿ ಶ್ರವಣ ಮತ್ತು ಸಿದ್ಧಾರೂಢ ಆನೇಗುಂದಿ ಅವರ ಸ್ಮರಣೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ತಾರತಮ್ಯಗಳನ್ನು ಶರಣರು ಧಿಕ್ಕರಿಸಿ ಸತ್ಯದ ದಾರಿಯಲ್ಲಿ ಜನರನ್ನು ನಡೆಸಿದರು ಎಂದು ಅವರು ತಿಳಿಸಿದರು. “ಮೇಲು–ಕೀಳು, ಹೆಣ್ಣು–ಗಂಡು ವ್ಯತ್ಯಾಸಗಳನ್ನೆಲ್ಲ ಶರಣರು ನೇರವಾಗಿ ಪ್ರಶ್ನಿಸಿದರು. ಆದರೆ ಇಂದಿನ ಯುವಜನತೆ ಜ್ಞಾನದ ಬದಲು ಜಿಹಾದ್, ಗೋಸಂರಕ್ಷಣೆ ಇಂತಹ ವಿಷಯಗಳನ್ನು ಧರ್ಮವೆಂದು ಭ್ರಮಿಸುತ್ತಿದ್ದಾರೆ. ಯಾರನ್ನಾದರೂ ಕೊಲ್ಲುವುದು, ಅವಮಾನಿಸುವುದು ಯಾವ ಧರ್ಮಕ್ಕಾಗಲೀ ಮಾನ್ಯವಲ್ಲ,” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಮೌಢ್ಯ, ಜಾತಿ–ಧರ್ಮದ ಹೆಸರಿನಲ್ಲಿ ಶೋಷಣೆ ನಡೆಸುವ ರಾಜಕಾರಣಿ ಹಾಗೂ ಧಾರ್ಮಿಕ ನಾಯಕರನ್ನು ಅವರು ತೀವ್ರವಾಗಿ ಖಂಡಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, “ಸದು ವಿನಯವೆ ಸದಾ ಶಿವನ ಒಲುಮೆ ಎಂಬ ವಚನಗಳನ್ನು ಮರೆತು, ಕೆಲವೊಬ್ಬ ಮಠಾಧೀಶರು ಅನಗತ್ಯ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ” ಎಂದು ಟೀಕಿಸಿದರು. “ಆಶೀರ್ವಾದ ಅಥವಾ ಶಾಪಗಳಿಂದ ಜೀವನ ರೂಪುಗೊಳ್ಳದು, ಶರಣ ವಚನಗಳೇ ಬದುಕಿನ ನಿಜವಾದ ಕೀಲುಗಳು. ಎಲ್ಲ ಧರ್ಮಕ್ಕಿಂತಲೂ ಮನುಷ್ಯ ಧರ್ಮವೇ ಶ್ರೇಷ್ಠ” ಎಂದು ಅವರು ತಿಳಿಸಿದರು.
ಸಭೆಯ ಉದ್ಘಾಟನೆಯನ್ನು ಮಾಜಿ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ ನೆರವೇರಿಸಿದರು. ವಚನ ಪ್ರಾರ್ಥನೆಗೆ ಶರಾವತಿ ಸತ್ಯಂಪೇಟೆ ಹಾಗೂ ಕಾವೇರಿ ಲಾಳಸೇರಿ ನೇತೃತ್ವ ವಹಿಸಿದರು. ಡಾ. ಎಸ್.ಎಸ್. ನಾಯಕ್ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಅಮೋಘ ಸತ್ಯಂಪೇಟೆ ವಂದಿಸಿದರು. ಖಾಸಾ ಮಠದ ಶಾಂತವೀರ ಮಹಾಸ್ವಾಮೀಜಿ ಸಭಾಧ್ಯಕ್ಷರಾಗಿದ್ದರು. ವೇದಿಕೆಯ ಮೇಲೆ ಶೋಭಾ ಬಸವರಾಜ, ಶರಣಮ್ಮ ಸಿದ್ಧಾರೂಢ ಆನೇಗುಂದಿ, ಗುಂಡಪ್ಪ ಕಲಬುರ್ಗಿ ಸೇರಿದಂತೆ ಹಲವರು ಇದ್ದರು.