LOCAL EXPRESS: “ಕೊಪ್ಪಳ|ಸಂವಿಧಾನವೇ ರಾಷ್ಟ್ರದ ದಾರಿದೀಪ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ ಸಿ. ಅಭಿಮತ”

By admin

LOCAL EXPRESS: “ಕೊಪ್ಪಳ| ಸಂವಿಧಾನವೇ ರಾಷ್ಟ್ರದ ದಾರಿದೀಪ : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ ಸಿ. ಅಭಿಮತ”

• ಸೆಕ್ಯಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಒದಗಿಸುತ್ತಿರುವ ಸಂವಿಧಾನವು ರಾಷ್ಟ್ರದ ಬುನಾದಿಯಾಗಿದ್ದು, ಯುವಪೀಳಿಗೆ ಇದನ್ನು ಅರ್ಥೈಸಿ ಅನುಸರಿಸುವುದು ಅತ್ಯಂತ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ  ಚಂದ್ರಶೇಖರ್ ಸಿ. ಅವರು ಅಭಿಪ್ರಾಯಪಟ್ಟರು.

 ಅವರು ಕೊಪ್ಪಳ ವಿಶ್ವವಿದ್ಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ  ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಕೊಪ್ಪಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಅವರು ಮುಂದುವರೆದು, “ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನ. ನ್ಯಾಯಾಂಗಕ್ಕೆ ಸ್ವತಂತ್ರವಾದ ಸ್ಥಾನಮಾನ ನೀಡಿ, ಸರ್ಕಾರ ಅಥವಾ ಶಾಸನಾಂಗ ಸಂವಿಧಾನ ಉಲ್ಲಂಘಿಸಿದರೆ ಅದನ್ನು ರದ್ದುಪಡಿಸುವ ಅಧಿಕಾರವನ್ನೇ ನ್ಯಾಯಾಂಗಕ್ಕೆ ನೀಡಲಾಗಿದೆ” ಎಂದು ಹೇಳಿದರು.

“ರಾಷ್ಟ್ರಕ್ಕೂ, ನಾಗರಿಕರ ಬದುಕಿಗೂ ಮಾರ್ಗದರ್ಶಕವೇ ಸಂವಿಧಾನ. ಹಕ್ಕು–ಕರ್ತವ್ಯಗಳು, ಕಾನೂನು ರಚನೆ—ಇವೆಲ್ಲವೂ ಜೀವನದ ಅವಿಭಾಜ್ಯ ಅಂಗ. 1927ರಲ್ಲಿ ಅಂಬೇಡ್ಕರ್ ಮಹಿಳಾ ಸಮಾನತೆಗಾಗಿ ಮನಸುಮೂರ್ತಿ ಸುಟ್ಟು ತಿಟ್ಟಿದ ಘಟನೆ ಇದಕ್ಕೆ ದೊಡ್ಡ ಉದಾಹರಣೆ. ಹಿಂದೂ ಕೋಡ್ ಬಿಲ್‌ಗೆ ವಿರೋಧ ವ್ಯಕ್ತವಾದಾಗಲೂ ಅವರು ಹಿಂದೆ ಸರಿಯಲಿಲ್ಲ. ಸಂವಿಧಾನದ ಮೂಲಕ ಸಾಮಾಜಿಕ ವ್ಯವಸ್ಥೆ ಬಲಪಡಿಸುವುದು ಆ ಕಾಲದ ಅವಶ್ಯಕತೆ,” ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ನಿಕಾಯದ ಡೀನ್ ಪ್ರೊ. ವಿ. ಸುದೇಶ ಅವರು ಮಾತನಾಡಿ, ಭಾರತವು ಜಾಗತಿಕ ಮಟ್ಟದಲ್ಲಿ ಶಾಂತಿಯುತ ಮತ್ತು ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿರುವುದಕ್ಕೆ ಶಕ್ತಿಯಾದ ಸಂವಿಧಾನವೇ ಕಾರಣ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಅವರು, ಧರ್ಮದ ಮೊದಲು ಸಂವಿಧಾನ ಪಾಲನೆಯೇ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಒತ್ತಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅವರು, ಅವಕಾಶವಂಚಿತ ಸಮುದಾಯಗಳಿಗೆ ಸಂವಿಧಾನವೇ ಧ್ವನಿ ನೀಡಿದೆ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವಿಸ್ತರಿಸಿದೆ ಎಂದು ಹೇಳಿದರು.

ಈ ವೇಳೆ ಸಂವಿಧಾನ ಪೀಠಿಕೆ ವಾಚನ, ಪ್ರಮಾಣವಚನ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ವಿ.ವಿ. ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೆಟಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಡಾ. ಸುಧಾಕರ , ಡಾ. ಬಸವರಾಜ ಎಸ್ ಗಡಾದ, ಡಾ. ಸೃಷ್ಠಿ ಜಾವಳಕರ್, ಶ್ರೀಕಾಂತ ಕೆ.ಬಿ ,ಡಾ: ಅಯ್ಯಪ್ಪ, ಡಾ. ಹುಲಿಗೆಮ್ಮ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ಸಮೂಹ ಭಾಗವಹಿಸಿದರು.