“ಸುರುಪುರ| ಬಿಗ್‌ಬಾಸ್‌ನಲ್ಲಿ ಮಿಂಚಿದ ಮಲ್ಲಮ್ಮಗೆ : ಸ್ವಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಭವ್ಯ ಸ್ವಾಗತ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಸುರಪುರ:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್–12ರಲ್ಲಿ ಸ್ಪರ್ಧಿಯಾಗಿ ಕಂಗೊಳಿಸಿದ್ದ ಮಲ್ಲಮ್ಮ ಬಾವಿ ಅವರಿಗೆ ಸುರಪುರ ತಾಲೂಕಿನ ಸ್ವಗ್ರಾಮ ಕನ್ನೆಳ್ಳಿಯಲ್ಲಿ ಗ್ರಾಮಸ್ಥರಿಂದ ಭಾನುವಾರ ಅದ್ದೂರಿ ಸ್ವಾಗತ ಸಿಕ್ಕಿತು.
ಮಲ್ಲಮ್ಮ ಬಾವಿ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿಕೊಂಡು ಬಂದರು. ಶಾಲಾ ಮಕ್ಕಳ ಲೇಜಿಮ್–ಕೋಲಾಟ ತಂಡ, ಮಂಜಲಾಪುರ ಡೊಳ್ಳು ಕುಣಿತ ತಂಡದ ಸಡಗರ–ಸಿಂಗರದ ಮಧ್ಯೆ ನಟ ಮನೋಜ್ ಕುಮಾರ್ ಹಾಗೂ ಕಲಾವಿದೆ ಪಲ್ಲವಿ ಲಕ್ಷ್ಮೀಕಾಂತಗೌಡ ಅವರೂ ಜೊತೆಯಿದ್ದರು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಶರಣು ಬಿ. ಗದ್ದುಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. “ಮಲ್ಲಮ್ಮ ಬಾವಿಯವರ ಆಟ–ವೈಖರಿಯಿಂದ ಕನ್ನೆಳ್ಳಿ ಗ್ರಾಮ ಕರ್ನಾಟಕದ ಮಟ್ಟಿಗೆ ಪರಿಚಿತವಾಗಿದೆ. ಅನಕ್ಷರಸ್ಥ ಹಳ್ಳಿಯ ಮಹಿಳೆಯೂ ತನ್ನ ಧೈರ್ಯದಿಂದ ರಾಷ್ಟ್ರದಾದ್ಯಂತ ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಮಲ್ಲಮ್ಮ ಉದಾಹರಣೆ,” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಮ್ಮ ಬಾವಿಯವರು, “ಮಕ್ಕಳು ಗುರಿ–ನಿಯತ್ತು ಕಾಪಾಡಿಕೊಂಡು ಕಠಿಣ ಪರಿಶ್ರಮ ಮಾಡಿದರೆ ತಮ್ಮ ಕ್ಷೇತ್ರದಲ್ಲಿ ನಿಶ್ಚಯವಾಗಿಯೂ ಸಾಧನೆ ಸಾಧ್ಯ. ನಮ್ಮೂರಿನವರು ನೀಡುತ್ತಿರುವ ಸನ್ಮಾನ ನನ್ನ ಬದುಕಿನ ಮರೆಯಲಾಗದ ಕ್ಷಣ,” ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ವೀರೇಶ ಗವಾಯಿ, ಮಹಾಂತೇಶ ಹೆಗ್ಗಣದೊಡ್ಡಿ, ಬಾಗೇಶ ಸಿಂದಗಿ, ದಾಸಪ್ಪ ದೊರನಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ದೇವದುರ್ಗ ಮಲದಕಲ್ ಬಸವರಾಜ ಪೂಜ್ಯರು, ನಗನೂರು ಸೂಗೂರೇಶ್ವರ ಮಠದ ಸೂಗೂರೇಶ್ವರ ಪೂಜ್ಯರು, ಬಂಡೆಪ್ಪನಳ್ಳಿ ಪೂಜ್ಯರು, ಹೆಗ್ಗಣದೊಡ್ಡಿ ಧರ್ಮರ ಮಠದ ಪೂಜ್ಯರು ಹಾಗೂ ಶಹಾಪುರ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಶರಣು ಗದ್ದುಗೆ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಮಲ್ಲಯ್ಯಸ್ವಾಮಿ ಹಿರೇಮಠ, ಪಂಚಯ್ಯ ಮಠಪತಿ, ದೊಡ್ಡಪ್ಪಗೌಡ ಪೋಲಿಸ್ ಪಾಟೀಲ್, ಗೋವಿಂದರಾಜ ದೇವರು, ಹನುಮಂತರಾಯ ಮಾಸ್ಟರ್ ಹೆಬ್ಬಾಳ್ಕರ್, ಸುರಪುರ ಪಿಎಸ್‌ಐ ಸಿದ್ದಣ್ಣ ಯಡ್ರಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ನಿರೂಪಿಸಿದರು. ಮಲ್ಲು ಚಾನಕೋಟಿ ಸ್ವಾಗತಿಸಿ, ಮಂಜುನಾಥ ಟೇಲರ್ ವಂದನಾ ಸಲ್ಲಿಸಿದರು.