🌍💞  POSITIVE NEWS :”ಹಾಸನ|ಇಂಗ್ಲೆಂಡ್ ವರ–ಬೇಲೂರಿನ ವಧು: ಪ್ರೀತಿಗೆ ಮುದ್ರೆ! ಸಪ್ತಪದಿ ತುಳಿದು ಹೊಸ ಬದುಕಿಗೆ ಕಾಲಿಟ್ಟ ನವದಂಪತಿಗಳು”

By admin

🌍💞POSITIVE NEWS :“ಹಾಸನ|ಇಂಗ್ಲೆಂಡ್ ವರ–ಬೇಲೂರಿನ ವಧು: ಪ್ರೀತಿಗೆ ಮುದ್ರೆ! ಸಪ್ತಪದಿ ತುಳಿದು ಹೊಸ ಬದುಕಿಗೆ ಕಾಲಿಟ್ಟ ನವದಂಪತಿಗಳು”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಹಾಸನ: 

ಪ್ರೀತಿಗೆ ಭಾಷೆ, ದೇಶ, ಸಂಸ್ಕೃತಿಯ ಅಡೆತಡೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಅಪರೂಪದ ವಿವಾಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಭಾನುವಾರ ಜರುಗಿತು. ಇಂಗ್ಲೆಂಡಿನ ಯುವಕ ಜಾಯ್ ಹಾಗೂ ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮದ ಯುವತಿ ಹೇಮಶ್ರಿ ಪರಸ್ಪರ ಪ್ರೀತಿಸಿ, ಕುಟುಂಬಗಳ ಒಪ್ಪಿಗೆಯೊಂದಿಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಳೆದ ಕೆಲವು ವರ್ಷಗಳಿಂದ ಹೇಮಶ್ರಿ ಇಂಗ್ಲೆಂಡಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಆಕೆ ಕೆಲಸ ಮಾಡುತ್ತಿದ್ದ ಅದೇ ಸಂಸ್ಥೆಯಲ್ಲಿ ಜಾಯ್ ಸಹ ಕಾರ್ಯನಿರ್ವಹಿಸುತ್ತಿದ್ದರು. ಸಹೋದ್ಯೋಗಿಗಳಾಗಿ ಆರಂಭವಾದ ಪರಿಚಯ ಸ್ನೇಹವಾಗಿ, ನಂತರ ಪರಸ್ಪರ ಅರಿವು ಮತ್ತು ನಂಬಿಕೆಯೊಂದಿಗೆ ಪ್ರೀತಿಯಾಗಿ ಬೆಳೆಯಿತು. ತಮ್ಮ ಸಂಬಂಧವನ್ನು ಕುಟುಂಬಗಳಿಗೆ ತಿಳಿಸಿದ ಬಳಿಕ ಎರಡೂ ಕಡೆಯವರ ಸಹಮತ ದೊರೆತಿದ್ದು, ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲು ತೀರ್ಮಾನಿಸಲಾಯಿತು.

ಭಾನುವಾರ ಐತಿಹಾಸಿಕ ಬೇಲೂರಿನಲ್ಲಿ ನವದಂಪತಿಗಳ ವಿವಾಹ ಸಮಾರಂಭ ಅತ್ಯಂತ ಸಂಭ್ರಮದಿಂದ ನಡೆಯಿತು. ಹಿಂದೂ ಸಂಪ್ರದಾಯದಂತೆ ಗಣಪತಿ ಪೂಜೆ, ಹೋಮ–ಹವನ, ಮಂಗಳಾಷ್ಟಕ, ಸಪ್ತಪದಿ ಸೇರಿದಂತೆ ಎಲ್ಲಾ ವಿಧಿವಿಧಾನಗಳು ನೆರವೇರಿದವು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಜಾಯ್ ಅವರು, ಸಂಪ್ರದಾಯಬದ್ಧ ವಸ್ತ್ರಧಾರಣೆಯಲ್ಲಿ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದು, ಅತಿಥಿಗಳ ಗಮನ ಸೆಳೆಯಿತು.

ವಧು ಹೇಮಶ್ರಿ ಪರಂಪರಾಗತ ವಾಗಿ ವೇಷಭೂಷಣದಲ್ಲಿ ಮಿಂಚಿದರೆ, ವರ ಜಾಯ್ ಕೂಡ ಭಾರತೀಯ ಸಂಸ್ಕೃತಿಗೆ ಗೌರವ ಸೂಚಿಸುವಂತೆ ಉಡುಪಿನಲ್ಲಿ ಕಾಣಿಸಿಕೊಂಡರು. ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬಗಳ ಹಿರಿಯರು, ಬಂಧು–ಬಳಗ ಹಾಗೂ ಸ್ನೇಹಿತರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

ಈ ಅಪರೂಪದ ವಿವಾಹ ಸ್ಥಳೀಯರಲ್ಲಿ ವಿಶೇಷ ಕುತೂಹಲ ಹಾಗೂ ಸಂತಸಕ್ಕೆ ಕಾರಣವಾಗಿದ್ದು, ಪ್ರೀತಿ ಮತ್ತು ಸಂಸ್ಕೃತಿಯ ಸೌಹಾರ್ದತೆಯ ಸಂಕೇತವಾಗಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.