🛑ACCIDENT NEWS :”ಕೊಪ್ಪಳ| ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ : ಚಾಲಕ ಸಾವು,15ಕ್ಕೂ ಹೆಚ್ಚು ಹುಲಿಗೆಮ್ಮ ಭಕ್ತರಿಗೆ ಗಾಯ”

By admin

🛑ACCIDENT NEWS :“ಕೊಪ್ಪಳ| ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ :  ಚಾಲಕ ಸಾವು, 15ಕ್ಕೂ ಹೆಚ್ಚು ಹುಲಿಗೆಮ್ಮ ಭಕ್ತರಿಗೆ  ಗಾಯ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಇಲ್ಲಿನ ಹುಲಿಗೆಮ್ಮ ದರ್ಶನಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್‌ಗೆ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.

ಮುನಿರಾಬಾದ್–ಟಿ.ಬಿ. ಡ್ಯಾಂ ನಡುವಿನ ತುಂಗಭದ್ರಾ ನದಿಗೆ ನಿರ್ಮಿಸಿರುವ ಎರಡನೇ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್ 50) ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಕೆಂಚಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ಭಕ್ತರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮುನಿರಾಬಾದ್ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇಂದು ಮಂಗಳವಾರವಾದ್ದರಿಂದ ಹರಪನಹಳ್ಳಿ ತಾಲೂಕಿನ ಹೊನ್ನೆನಹಳ್ಳಿಯಿಂದ ಹುಲಿಗೆಮ್ಮ ದರ್ಶನಕ್ಕೆ ಭಕ್ತರು ಟ್ರ್ಯಾಕ್ಟರ್‌ನಲ್ಲಿ ಹುಲಿಗಿಗೆ ತೆರಳುತ್ತಿದ್ದರು. ಟ್ರ್ಯಾಕ್ಟರ್‌ನಲ್ಲಿ 20ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಬೆಂಗಳೂರಿನಿಂದ ಅಫಜಲಪುರಕ್ಕೆ ತೆರಳುತ್ತಿದ್ದ ಖಾಸಗಿ ವಿ ಆರ್ ಎಲ್ ಬಸ್ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತದಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.