🛑SPECIAL ARTICLE :”ಭೂಮಿತಾಯಿಗೆ ರೈತರ ನೈವೇದ್ಯ : ಉತ್ತರ ಕರ್ನಾಟಕದಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ”

By admin

🟢 SPECIAL ARTICLE :”ಭೂಮಿತಾಯಿಗೆ ರೈತರ ನೈವೇದ್ಯ : ಉತ್ತರ ಕರ್ನಾಟಕದಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಿಶೇಷ: 

ಉತ್ತರ ಕರ್ನಾಟಕದಲ್ಲಿ ಎಳ್ಳು ಅಮಾವಾಸ್ಯೆ ಹಬ್ಬವು ರೈತರ ಜೀವನದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಈ ದಿನ ರೈತರು ತಮ್ಮ ಭೂಮಿತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯವನ್ನು ಆಚರಿಸುತ್ತಾರೆ. ಹೊಲಗಳಲ್ಲಿ ಕುಳಿತು, ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ–ಸಾಂಬಾರು ಸೇರಿದಂತೆ ವಿವಿಧ ಪದಾರ್ಥಗಳನ್ನು ಉಂಡೆ ಮಾಡಿ “ಚೆರಗ ಚೆಲ್ಲುವ” ಮೂಲಕ ಭೂಮಿತಾಯಿಗೆ ಸಮರ್ಪಣೆ ಮಾಡುವುದು ಈ ಹಬ್ಬದ ಪ್ರಮುಖ ವಿಶೇಷತೆ.ಹಬ್ಬವು ರೈತರ ಕುಟುಂಬಗಳಿಗೆ ಸಂತೋಷ, ಒಗ್ಗಟ್ಟು ಮತ್ತು ಪರಸ್ಪರ ಸಹಭಾವದ ಸಂಕೇತವಾಗಿದೆ. ಬಂಧುಮಿತ್ರರು ಹಾಗೂ ಕುಟುಂಬದ ಸದಸ್ಯರೊಂದಿಗೆ ಕುಳಿತು ಸಹಭೋಜನ ಮಾಡುವುದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗುತ್ತದೆ. ಕೆಲವರು ಈ ಅಮಾವಾಸ್ಯೆಯನ್ನು ಮಾರ್ಗಶಿರ ಅಮಾವಾಸ್ಯೆ, ಎಳ್ಳು ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯುತ್ತಾರೆ. ರೈತರಲ್ಲಿ ಈ ಹಬ್ಬವು ಭೂಮಿತಾಯಿಗೆ ಗೌರವ ಸೂಚಿಸುವ ಹಾಗೂ ಉತ್ತಮ ಫಸಲು ಪಡೆಯಲು ಮಾಡುವ ಪ್ರಸಿದ್ಧ ಸಂಪ್ರದಾಯವಾಗಿದೆ.

ವೈಜ್ಞಾನಿಕ ದೃಷ್ಟಿಯಿಂದ ಈ ಹಬ್ಬವು ಬೆಳೆಗಳಿಗೆ ಸಹಾಯಕವಾಗಿದೆ. ಈ ಸಮಯದಲ್ಲಿ ಜೋಳದ ಮಧ್ಯೆ ಹುಳುಗಳು ಬೆಳೆ ಹಾನಿ ಮಾಡುವ ಅಪಾಯವಿರುವುದರಿಂದ, “ಚೆರಗ ಚೆಲ್ಲುವ” ಪದ್ಧತಿಯಲ್ಲಿ ಹಕ್ಕಿಗಳು ಆಹಾರ ತಿನ್ನಲು ಹೊಲಕ್ಕೆ ಇಳಿದು ಹುಳಗಳನ್ನು ನಾಶ ಮಾಡುತ್ತವೆ. ಇದರಿಂದ ಪೈರು, ಜೋಳ ಮತ್ತು ಕಡಲೆ ಬೆಳೆ ಸುರಕ್ಷಿತವಾಗಿ ಬೆಳೆಯುತ್ತವೆ. ರೈತರಲ್ಲಿ ಶತಮಾನಗಳಿಂದ ಈ ಆಚರಣೆ ನಡೆಯುತ್ತಿದ್ದು, ಪಾರಂಪರ್ಯವೂ ಮತ್ತು ವೈಜ್ಞಾನಿಕ ಜ್ಞಾನವೂ ಸಹ ಒಂದೇ ವೇಳೆ ಪ್ರತಿಬಿಂಬಿಸುತ್ತವೆ.

ಹಬ್ಬದ ವೇಳೆ ರೈತರು ಹೊಲದಲ್ಲಿ ಕುಳಿತು, ಭೂಮಿತಾಯಿಗೆ ನೈವೇದ್ಯ ಸಲ್ಲಿಸಿ ನಂತರ ಕುಟುಂಬದೊಂದಿಗೆ ವಿವಿಧ ಸಾಂಪ್ರದಾಯಿಕ ಪದಾರ್ಥಗಳನ್ನು ಸವಿಯುತ್ತಾರೆ. ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಹೂರಣದ ಹೋಳಿಗೆ, ಪಾಯಸ, ಕೊಸಂಬರಿ, ಜೋಳದ ರೊಟ್ಟಿ, ಗಟ್ಟಿ ಮೊಸರು, ಚಿತ್ರಾನ್ನ, ಸಾಂಬಾರ್, ಮಿರ್ಚಿ ಬಜ್ಜಿ ಮುಂತಾದ ಪದಾರ್ಥಗಳು ಹಬ್ಬದ ವೈಭವವನ್ನು ಹೆಚ್ಚಿಸುತ್ತವೆ. ಭೂಮಿತಾಯಿಗೆ ಅರ್ಪಿಸುವ ಆಹಾರವು ಬೆಳೆಗಳಿಗೆ ಆಹಾರ ಎಂಬ ಭಾವನೆ ಹಾಗೂ ಕುಟುಂಬಗಳಲ್ಲಿ ಸಂತೋಷ ತರುತ್ತದೆ.

ಎಳ್ಳು ಅಮಾವಾಸ್ಯೆ ಹಬ್ಬವು ರೈತರ ಜೀವನದಲ್ಲಿ ಸಂಪ್ರದಾಯ, ನೈಸರ್ಗಿಕ ಸಮೃದ್ಧಿ ಮತ್ತು ಭಕ್ತಿಯ ಸಂಕೇತವಾಗಿದೆ. ಬೆಳೆಯಾದ ಹೊಲಗಳು, ನಗುವಿನಿಂದ ತುಂಬಿದ ಮುಖಗಳು, ಸಹಭೋಜನದ ಉತ್ಸವ, ಹಸಿರು ಹೊಲಗಳ ನಡುವೆ ಈ ಹಬ್ಬವು ನಾಡಿನ ಪ್ರತಿಯೊಂದು ಭಾಗದಲ್ಲಿಯೂ ಆಚರಿಸಲಾಗುತ್ತದೆ. ಭೂಮಿತಾಯಿಗೆ ಅರ್ಪಣೆ ಸಲ್ಲಿಸುವ ಈ ಸಂಪ್ರದಾಯವು ವಂಶಪಾರಂಪರ್ಯವಾಗಿ ಮುಂದುವರಿದಿದ್ದು, ರೈತರ ಬದುಕಿನಲ್ಲಿ ಸಂತೋಷ, ಒಗ್ಗಟ್ಟು ಮತ್ತು ಶ್ರದ್ಧೆ ತುಂಬಿ ನಡೆದುಕೊಳ್ಳುತ್ತಿದೆ.

                           ✍️ಕಾವ್ಯ ಎಸ್. ಮಠದ, ಕೊಪ್ಪಳ