🔥 SPOT NEWS :“ಕನಕಗಿರಿ |ಹುಲ್ಲಿನ ಬಣವಿಗೆ ಆಕಸ್ಮಿಕ ಬೆಂಕಿ : ರೈತನ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಹುಲ್ಲು ಭಸ್ಮ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕನಕಗಿರಿ:
ತಾಲೂಕಿನ ಕರಡೋಣಿ ಗ್ರಾಮದ ರೈತ ಯಂಕಪ್ಪ ಲಕ್ಷ್ಮಪ್ಪ ಅವರ ಹೊಲದಲ್ಲಿ ಸಂಗ್ರಹಿಸಿ ಇಡಲಾಗಿದ್ದ ಹುಲ್ಲಿನ ಬಣವಿಗೆ ಶುಕ್ರವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಹುಲ್ಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಮಧ್ಯಾಹ್ನ ಸುಮಾರು 12.30 ಗಂಟೆ ವೇಳೆಗೆ ಬಣವೆಯಿಂದ ಹೊಗೆ ಎದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಬಣವೆ ಮಾಲಕರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡ ಪರಿಣಾಮ ಬಣವೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಲಕರ್ಣಿ ಕುಮಾರ್ ಹಾಗೂ ಗ್ರಾಮ ಸಹಾಯಕ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.