🟢DISTRICT  NEWS : “ಯಲಬುರ್ಗಾ | ನಮ್ಮ ಸರ್ಕಾರ ಬಡವರ ಪರ, ಅಭಿವೃದ್ಧಿಯೇ ಧ್ಯೇಯ – ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿಕೆ”

By admin

🟢DISTRICT  NEWS : “ಯಲಬುರ್ಗಾ | ನಮ್ಮ ಸರ್ಕಾರ ಬಡವರ ಪರ, ಅಭಿವೃದ್ಧಿಯೇ ಧ್ಯೇಯ – ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿಕೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಯಲಬುರ್ಗಾ: 

ನಮ್ಮ ರಾಜ್ಯ ಸರ್ಕಾರ ಬಡವರ ಪರ ಸರ್ಕಾರವಾಗಿದ್ದು, ಅವರ ಸಮಗ್ರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.

ಶುಕ್ರವಾರ ಯಲಬುರ್ಗಾ ಪಟ್ಟಣದಲ್ಲಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜು ಪ್ರಾರಂಭೋತ್ಸವ ಹಾಗೂ ಅಡಿಗಲ್ಲು ಸಮಾರಂಭ, ತಾಲೂಕು ಪಂಚಾಯತ್ ಆಡಳಿತ ಭವನ, ಶಿಕ್ಷಕರ ತರಬೇತಿ ಕೇಂದ್ರ (ಬಿ.ಇ.ಓ) ಕಚೇರಿ, ಯಲಬುರ್ಗಾ–ಕುಕನೂರು ಪಟ್ಟಣ ಪಂಚಾಯತ್ ಮಲ ಕೆಸರು ಸಂಸ್ಕರಣಾ ಘಟಕ (ಎಫ್.ಎಸ್.ಟಿ.ಪಿ) ಮತ್ತು ಬಾಲ ಭವನ–ಅಂಗನವಾಡಿ ತರಬೇತಿ ಕೇಂದ್ರ (ಸಿ.ಡಿ.ಪಿ.ಓ) ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರವು ಜನಪರ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ರಾಜ್ಯದ ಜಿಡಿಪಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಬಡವರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದರು.

ಯಲಬುರ್ಗಾ ಕ್ಷೇತ್ರವು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಮತಕ್ಷೇತ್ರವಾಗಿದ್ದು, ನರ್ಸಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಶೇ.100 ಉದ್ಯೋಗಾವಕಾಶ ಇದೆ. ಇದರಿಂದ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗಲಿದೆ. ತಳಕಲಿನಲ್ಲಿ ಮಲ್ಟಿಸ್ಕಿಲ್ ಕೇಂದ್ರ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಸಮಾನ ಮಹತ್ವ ನೀಡುತ್ತಿದೆ. ಸರ್ಕಾರಿ ನರ್ಸಿಂಗ್ ಕಾಲೇಜು ಆರಂಭದಿಂದ ವಿದ್ಯಾರ್ಥಿಗಳ ಡೊನೇಷನ್ ಭಾರ ಕಡಿಮೆಯಾಗಿದೆ ಎಂದು ಹೇಳಿದರು.

ಯಲಬುರ್ಗಾ ಕ್ಷೇತ್ರಕ್ಕೆ 12 ಕೆಪಿಎಸ್ ಶಾಲೆಗಳು ಮಂಜೂರಾಗಿದ್ದು, ಮುಂದೆ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುವುದು. 57 ಕೋಟಿ ರೂ. ವೆಚ್ಚದ ಕೌಶಲ್ಯ ಕೇಂದ್ರದಿಂದ ಪ್ರತಿವರ್ಷ 2–2.5 ಸಾವಿರ ಯುವಕರಿಗೆ ತರಬೇತಿ ದೊರೆಯಲಿದೆ ಎಂದರು. ಜೊತೆಗೆ ಕೆರೆ ತುಂಬಿಸುವ ಯೋಜನೆಗೆ 272 ಕೋಟಿ ರೂ. ಮಂಜೂರಾಗಿದ್ದು, ಕೃಷ್ಣ ನದಿಯಿಂದ 19 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅವರು ಮಾತನಾಡಿ, ಯಲಬುರ್ಗಾ ಸರ್ಕಾರಿ ನರ್ಸಿಂಗ್ ಕಾಲೇಜಿಗೆ 10 ಎಕರೆ ಭೂಮಿ ಹಾಗೂ 9.85 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ವೆಚ್ಚವನ್ನು ಕೆಕೆಆರ್‌ಡಿಬಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ಹಲವಾರು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.