🚨 EXCLUSIVE NEWS :” ಯಾದಗಿರಿ| ಶಾಲಾ ಪ್ರವಾಸದಲ್ಲಿ ಅತಿಥಿ ಶಿಕ್ಷಕನ ಅಸಭ್ಯ ವರ್ತನೆ : ವಿದ್ಯಾರ್ಥಿನಿಯರ ಎದುರೇ ಅರೆಬೆತ್ತಲಾಗಿ ನೀರಿನಲ್ಲಿ ಆಟ; ಪೋಷಕರ ಆಕ್ರೋಶ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶೈಕ್ಷಣಿಕ ಪ್ರವಾಸದ ವೇಳೆ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಎದುರೇ ಅಸಭ್ಯವಾಗಿ ವರ್ತಿಸಿರುವ ಗಂಭೀರ ಘಟನೆ ಈಚೆಗೆ ಬೆಳಕಿಗೆ ಬಂದಿದೆ.
ಶಾಲೆಯ 9 ಮತ್ತು 10ನೇ ತರಗತಿಯ ಒಟ್ಟು 93 ವಿದ್ಯಾರ್ಥಿನಿಯರು ಪ್ರವಾಸಕ್ಕೆ ತೆರಳಿದ್ದರು. ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ಇಂತಹ ಪ್ರವಾಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕಿಯರು ಹಾಜರಿರಬೇಕಾದರೂ, ಇಲ್ಲಿ ಕೇವಲ ಒಬ್ಬರು ಮಹಿಳಾ ಶಿಕ್ಷಕಿ ಹಾಗೂ ಐವರು ಪುರುಷ ಶಿಕ್ಷಕರು ಮಾತ್ರ ವಿದ್ಯಾರ್ಥಿನಿಯರೊಂದಿಗೆ ತೆರಳಿದ್ದದ್ದು ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರವಾಸದ ಸಂದರ್ಭದಲ್ಲಿ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಎದುರೇ ಅರೆಬೆತ್ತಲಾಗಿ ನೀರಿನಲ್ಲಿ ಆಟವಾಡಿದ್ದು, ಇದು ಬಾಲಕಿಯರಲ್ಲಿ ಅಸಹಜತೆ ಮತ್ತು ಭಯ ಮೂಡಿಸಿದೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆಣ್ಣು ಮಕ್ಕಳ ಸುರಕ್ಷತೆಯನ್ನು ಲೆಕ್ಕಿಸದೆ ವರ್ತಿಸಿದ ಶಿಕ್ಷಕರ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತವಾಗಿದೆ.
ಘಟನೆಯು ಬಹಿರಂಗವಾಗುತ್ತಿದ್ದಂತೆ ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶಾಲಾ ಶಿಕ್ಷಕರ ನಿರ್ಲಕ್ಷ್ಯಕ್ಕೂ ಸಾರ್ವಜನಿಕರು ಕಿಡಿಕಾರಿದ್ದಾರೆ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಕನಿಷ್ಠ ಶಿಷ್ಟಾಚಾರ ಮತ್ತು ಜವಾಬ್ದಾರಿ ವಹಿಸದ ಶಿಕ್ಷಕರು ಹಾಗೂ ಪ್ರವಾಸದ ವ್ಯವಸ್ಥೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಘಟನೆಯು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಶಾಲಾ ಪ್ರವಾಸಗಳ ವೇಳೆ ಕಟ್ಟುನಿಟ್ಟಿನ ನಿಯಮ ಪಾಲನೆ ಹಾಗೂ ವಿದ್ಯಾರ್ಥಿನಿಯರ ರಕ್ಷಣೆಗೆ ಸ್ಪಷ್ಟ ಮಾರ್ಗಸೂಚಿ ಜಾರಿಗೊಳಿಸುವ ಅಗತ್ಯವಿದೆ ಎಂಬ ಒತ್ತಾಯ ಹೆಚ್ಚಾಗಿದೆ.