🟢LOCAL EXPRESS : “ಕುಕನೂರು| ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿ ಶಂಕುಸ್ಥಾಪನೆ.! ಸಾರ್ವಜನಿಕರಿಗೆ ಅನುಕೂಲ : ಶಾಸಕ ರಾಯರೆಡ್ಡಿ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ,ಕುಕನೂರ:
ಕುಕನೂರು (ಕೊಪ್ಪಳ): ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಕನೂರು ಪಟ್ಟಣದಲ್ಲಿ ಶನಿವಾರ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿತು.
ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಉದ್ಘಾಟಿಸಿದರು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನೂತನ ಕಚೇರಿ ನಿರ್ಮಾಣದಿಂದ ಕುಕನೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ದೋಷ ಪರಿಹಾರ, ಬಿಲ್ಲಿಂಗ್ ಸೇರಿದಂತೆ ಎಲ್ಲಾ ಸೇವೆಗಳು ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಲಭ್ಯವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಈ ಭಾಗಕ್ಕೆ ಕಚೇರಿ ಸ್ಥಾಪನೆಯಾಗಬೇಕಾಗಿತ್ತು. ಆದರೆ ನಂತರದ ಐದು ವರ್ಷಗಳಲ್ಲಿ ಚುನಾವಣಾ ರಾಜಕೀಯ ಮತ್ತು ಆಡಳಿತಾತ್ಮಕ ಅಡಚಣೆಗಳಿಂದ ಯಾವುದೇ ಹೊಸ ಕಚೇರಿ ನಿರ್ಮಾಣವಾಗಲಿಲ್ಲ. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡು ವ್ಯವಸ್ಥೆಯೇ ಹದಗೆಟ್ಟ ಸ್ಥಿತಿ ನಿರ್ಮಾಣವಾಗಿತ್ತು ಎಂದು ಅಸಮಾಧಾನ ವಕ್ತಪಡಿಸಿದರು.
ವಿದ್ಯುತ್ ಉತ್ಪಾದನೆ ಕುರಿತು ಮಾತನಾಡಿದ ಅವರು, ರಾಯಚೂರು ಹಾಗೂ ಬಳ್ಳಾರಿ ಪ್ರದೇಶಗಳಲ್ಲಿ ಥರ್ಮಲ್ ವಿದ್ಯುತ್ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. KPCL ಮೂಲಕ ಥರ್ಮಲ್, ಜಲ, ಸೌರ ಹಾಗೂ ಗಾಳಿ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ 2,500 ಮೆಗಾವ್ಯಾಟ್ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 24×7 ವಿದ್ಯುತ್ ಸರಬರಾಜು ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದ ಅವರು, ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ 1 ಕೋಟಿ 69 ಲಕ್ಷ ಕುಟುಂಬಗಳಿಗೆ ಲಭ್ಯವಿದ್ದು, 36 ಲಕ್ಷ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಸರ್ಕಾರವು ಸುಮಾರು 60 ಸಾವಿರ ಕೋಟಿ ರೂ. ಸಬ್ಸಿಡಿ ನೀಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕುಕನೂರು ತಾಲೂಕಿನಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡಲಾಗಿದ್ದು, 12 KPS ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಒದಗಿಸಲಾಗಿದೆ ಎಂದರು.
ಇದೇ ವೇಳೆ, ಮತಕ್ಷೇತ್ರದಲ್ಲಿ ಜನವರಿ 8ರಿಂದ 140 ಹಳ್ಳಿಗಳ ಪ್ರವಾಸ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕ ಸಮಸ್ಯೆಗಳ ಗುರುತಿಸುವಿಕೆ ಹಾಗೂ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸಂಗಮೇಶ ಗುತ್ತಿ, ಪ. ಪಂ. ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರ ಆರ್ ಬೆರಳಿನ, ಕೆಎಂಎಫ್ ನಿರ್ದೇಶಕ ಹಂಪಯ್ಯ ಹಿರೇಮಠ, ಪ್ರಮುಖರಾದ ನಾರಾಯಣಪ್ಪ ಹರಪನಹಳ್ಳಿ, ಯಂಕಣ್ಣ ಯರಾಶಿ, ಹನುಮಂತ ಗೌಡ ಚಂಡೂರು, ಕೇರಿ ಬಸಪ್ಪ ನಿಡಗುಂದಿ, ಮಂಜುನಾಥ ಕಡೆಮನಿ, ಈರಪ್ಪ ಕುಡಗುಂಟಿ, ಜೆಸ್ಕಾಂ ಮುಖ್ಯ ಇಂಜಿನಿಯರ್ ಮೌನೇಶ್ ಪತ್ತಾರ್, ನಿರ್ವಾಹಕ ಇಂಜಿನಿಯರ್ ಮೋಟ್ಲಾ ನಾಯಕ್ ಎಂ., ಎಇಇ ನಾಗರಾಜ್, ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.