🛑BREAKING NEWS :“ಕೊಪ್ಪಳ| ಹುಲಿಗಿಯಲ್ಲಿ ಮುಳ್ಳುಕಂಟಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ: ಸಾರ್ವಜನಿಕರ ಕಾಳಜಿಯಿಂದ ಜೀವ ಉಳಿವು”
• ಸೆಕ್ಯುಲರ್ ವಾಯ್ಸ್ ನ್ಯೂಸ ಕೊಪ್ಪಳ:
ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟಿಯಲ್ಲಿ ಮಂಗಳವಾರ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಸಮಯಪ್ರಜ್ಞೆ ಮತ್ತು ಕಾಳಜಿಯಿಂದ ಮಗು ಬದುಕುಳಿದಿದೆ.
ಮುಳ್ಳಿನ ಕಂಟಿಯಿಂದ ಶಿಶು ಅಳುವ ಸದ್ದು ಕೇಳಿಬಂದಾಗ ಅಲ್ಲಿದ್ದ ಸಾರ್ವಜನಿಕರು ಹೋಂಗಾರ್ಡ್ ಸಿಬ್ಬಂದಿಯ ಗಮನಕ್ಕೆ ತಂದಿದ್ದು, ತಕ್ಷಣ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಶುವನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾಕೇಂದ್ರದಲ್ಲಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ, ಇಷ್ಟೊಂದು ಜನಸಂದಣಿಯ ನಡುವೆ ಪೋಷಕರು ಶಿಶುವನ್ನು ಮುಳ್ಳುಕಂಟಿಯಲ್ಲಿ ಬಿಟ್ಟು ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಗು ಜನಿಸಿ ಕೆಲವೇ ಗಂಟೆಗಳಾಗಿದ್ದು, ಕರಳು ಬಳ್ಳಿ ಸಹ ಶಿಶುವಿನೊಂದಿಗೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಶಿಶುವನ್ನು ಎತ್ತಿಕೊಂಡು ಸಮಾಧಾನಪಡಿಸಲು ಪ್ರಯತ್ನಿಸಿದ್ದು, ಅಮ್ಮನ ಎದೆಹಾಲು ಇಲ್ಲದೆ ಹಸಿವಿನಿಂದ ಮಗು ಒದ್ದಾಡುತ್ತಿರುವುದು ಕಂಡುಬಂದಿತು. ಶಿಶುವಿನ ತೂಕ ಸುಮಾರು 2.4 ಕೆ.ಜಿ. ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೋಂಗಾರ್ಡ್ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯಪ್ರಜ್ಞೆಯಿಂದ ಶಿಶುವಿನ ಪ್ರಾಣ ಉಳಿದಿದೆ.
ಮುಳ್ಳುಕಂಟಿಯಲ್ಲಿ ಬಿದ್ದಿದ್ದರಿಂದ ಶಿಶುವಿಗೆ ಹುಳುಗಳು ಕಚ್ಚಿ ನಂಜಾಗಿರುವ ಸಾಧ್ಯತೆ ಇದ್ದು, ತಜ್ಞ ವೈದ್ಯರು ನಿಗಾ ವಹಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.