ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ವಿಜಯರಾಜ ಎಸ್. ಪೂಜಾರ ಅವರಿಂದ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಶೇ.12ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದು, ರೂ 5 ಲಕ್ಷ ಹಣ ಸ್ವೀಕರಿಸುವಾಗಲೇ ಧಾರವಾಡ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ನಿನ್ನೆ ಶನಿವಾರ ಶಿರಹಟ್ಡಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ರೂ 11 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರನಿಂದ ರೂ 5 ಲಕ್ಷ ಕಮಿಷನ್ ಪಡೆಯುವ ಸಂದರ್ಭದಲ್ಲಿಯೇ ಲೋಕಾಯುಕ್ತ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಅವರ ನೇತ್ರತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಯಿತು.
ಫೆ. 18 ರಂದು ಗದಗ ತಾಲೂಕಿನ ಚಿಂಚಲಿ ಗ್ರಾಮದ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರರಾದ ವಿಜಯರಾಜ ಎಸ್ ಪೂಜಾರ ಎಂಬುವವರು ಗದಗ ಲೋಕಾಯುಕ್ತ ಠಾಣೆಗೆ ದೂರನ್ನು ಸಲ್ಲಿಸಿದ್ದು, ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳನ್ನು ಮಾಡುತ್ತಿದ್ದು, 2025 ರ ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಲಕ್ಷ್ಮೀಶ್ವರ ತಾಲೂಕ ಸಂಕದಾಳ ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಎರಡು ಕಾಮಗಾರಿಗಳನ್ನು ಮಾಡಲು ಆದೇಶ ಪಡೆದಿರುತ್ತಾರೆ.
ಈ ಕಾಮಗಾರಿ ಮಾಡಲು ಎಂಎಲ್ಎ ಚಂದ್ರು ಲಮಾಣಿ ತಕರಾರು ಮಾಡಿದ್ದು, ಶಾಸಕರು, ಅವರ ಪಿ.ಎ ಮಂಜುನಾಥ ವಾಲ್ಮೀಕಿ ಮತ್ತು ಶಾಸಕರ ಸಂಬಂಧಿ ಗುರು ಲಮಾಣಿ ಇವರು ಗುತ್ತಿಗೆದಾರರಿಗೆ ಎರಡೂ ಕಾಮಗಾರಿಗಳನ್ನು ತಮ್ಮ ಗಮನಕ್ಕೆ ತರದೇ ಮಾಡುತ್ತಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಈ ಕ್ಷೇತ್ರದ ಶಾಸಕರಿಗೆ ಶೇ. 12 ಕಮೀಷನ್ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇವೆ. ಇಲ್ಲದಿದ್ದರೆ ಗುಂಡಿಗಳನ್ನು ಕಳುಹಿಸಿ ಬುದ್ದಿ ಕಲಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಎರಡು ಕಾಮಗಾರಿಗಳಿಗೆ ಒಟ್ಟು ರೂ 11 ಲಕ್ಷ ಲಂಚವನ್ನು ಕಮೀಷನ್ ರೂಪದಲ್ಲಿ ಕೊಡಲು ಒತ್ತಾಯ ಮಾಡಿರುತ್ತಾರೆ. ವಿಜಯರಾಜ್ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗುತ್ತಿಗೆದಾರನ ದೂರಿನನ್ವಯ ನಿನ್ನೆ ಶನಿವಾರದಂದು ಮದ್ಯಾಹ್ನ 02-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಿಂದ ಮೇಲ್ಕಂಡ ಮೂರು ಜನ ಆಪಾದಿತರು ಲಂಚದ ಹಣವಾಗಿ 5 ಲಕ್ಷ ರೂಗಳನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಲೋಕಾಯುಕ್ತ ಪೋಲೀಸ್‌ರು ಸತತ 11 ಗಂಟೆಗಳ ಕಾಲ ಚಂದ್ರು ಲಮಾಣಿ ಅವರ ಬಾಲಜಿ ಆಸ್ಪತ್ರೆಯಲ್ಲಿ ಖಡತಗಳನ್ನು ಪರಿಶೀಲಿಸಿಲಿಸಿ ರವಿವಾರ ಬೆಳಿಗಿನ ಜಾವ 1-30 ಸುಮಾರಿಗೆ ಬಂಧಿಸಲಾಯಿತು.
ಈ ಸಂದರ್ಭದಲ್ಲಿ ಎ.ಡಿ.ಜಿ.ಪಿ ಮನೀಷ ಕರ್ಬಿಕರ್, ಐ.ಜಿ.ಪಿ ಸುಬ್ರಹ್ಮಣೇಶ್ವರ ರಾವ್, ಎಸ್.ಟಿ.ಸಿದ್ದಲಿಂಗಪ್ಪ, ಎಸ್.ಪಿ ಕರ್ನಾಟಕ ಲೋಕಾಯುಕ್ತ ಧಾರವಾಡರವರ ಮಾರ್ಗದರ್ಶನದಲ್ಲಿ ಗದಗ, ಧಾರವಾಡ ಲೋಕಾಯುಕ್ತ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂಧಿಯವರು ಈ ದಾಳಿಯಲ್ಲಿ ಭಾಗವಹಿಸಿದ್ದರು.