🔴 CRIME NEWS :”ವಿಜಯನಗರ | ಕಮಲಾಪುರದಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಪತ್ತೆ: 6 ಟನ್ 851 ಕೆಜಿ ವಶ”

By admin

CRIME NEWS :“ವಿಜಯನಗರ | ಕಮಲಾಪುರದಲ್ಲಿ ಪಡಿತರ ಅಕ್ಕಿ ಅಕ್ರಮ ಸಂಗ್ರಹ ಪತ್ತೆ: 6 ಟನ್ 851 ಕೆಜಿ ವಶ”

• ಸೆಕ್ಯುಲರ್ ವಾಯ್ಸ್ ನ್ಯೂಸ್ ಹೊಸಪೇಟೆ :

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಹೋಬಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಪಡಿತರ ಅಕ್ಕಿ ಗೋಡೌನ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 6 ಟನ್ 851 ಕೆಜಿ ಅಕ್ಕಿ ಹಾಗೂ ಒಂದು ಬುಲೇರೋ ವಾಹನವನ್ನು ಶನಿವಾರ ರಾತ್ರಿ ವಶಪಡಿಸಿಕೊಂಡರು.

ಹೊಸಪೇಟೆ ಉಪ ವಿಭಾಗಾಧಿಕಾರಿ ವಿವೇಕಾನಂದ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಕಮಲಾಪುರದ ಹಳ್ಳಿಕೇರಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ಭಾತ್ಮಿ ಜಾಗದಲ್ಲಿ ಅಂದಾಜು ₹1.57 ಲಕ್ಷ ಮೌಲ್ಯದ ಪಡಿತರ ಅಕ್ಕಿ ಸಂಗ್ರಹಿಸಿಡಲಾಗಿರುವುದು ಪತ್ತೆಯಾಯಿತು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ದಾಳಿ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಫೆ.20ರಂದು ಕಮಲಾಪುರ ಸರ್ಕಾರಿ ಆಸ್ಪತ್ರೆ ಸಮೀಪದ ಹಳ್ಳಿಕೇರಿ ಕೆರೆ ಹತ್ತಿರ ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ವಾಹನವನ್ನು ಅಧಿಕಾರಿಗಳು ತಡೆದರು. ಕೆಎ-35-ಸಿ-0062 ಸಂಖ್ಯೆಯ ಮಹಿಂದ್ರ ಬುಲೇರೋ ವಾಹನದಲ್ಲಿ 68.51 ಕ್ವಿಂಟಾಲ್ ಪಡಿತರ ಅಕ್ಕಿ ಲೋಡ್ ಮಾಡಿಕೊಂಡು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ಕಿ ಮತ್ತು ವಾಹನವನ್ನು ವಶಕ್ಕೆ ಪಡೆದು, ಪ್ರಕರಣವನ್ನು ಕಮಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.