🚨LOCAL NEWS :“ಗದಗ | ನಿಷೇಧಿತ ಪದ್ಧತಿ ಜೀವಂತ: ಮ್ಯಾನ್‌ಹೋಲ್ ಸ್ವಚ್ಛತೆಗೆ ಪೌರ ಕಾರ್ಮಿಕ ಬಳಕೆ.!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಡೆಸ್ಕ್
ಮಾನವ ಶ್ರಮ ಬಳಸಿ ಮಲ ಹೊರುವ ಹಾಗೂ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವುದನ್ನು ಸಂಪೂರ್ಣ ನಿಷೇಧಿಸಿದ್ದರೂ, ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿಯ ಹಾತಲಗೇರಿ ನಾಕಾದಲ್ಲಿ ಪೌರ ಕಾರ್ಮಿಕರಿಂದ ಬರೀ ಕೈಯಲ್ಲಿ ಮ್ಯಾನ್‌ಹೋಲ್ ಸ್ವಚ್ಛತೆ ಮಾಡಿಸಿರುವ ಘಟನೆ ನಡೆದಿದೆ. ಇದು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನಿಷೇಧ ಕಾಯ್ದೆ–2013 ಹಾಗೂ ಸುಪ್ರೀಂಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಕಾಯ್ದೆ–2013ರ ಕಲಂ 5 ಮತ್ತು 7ರ ಪ್ರಕಾರ ಮಾನವ ಶ್ರಮ ಬಳಸಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಂತ್ರೋಪಕರಣಗಳ ಮೂಲಕವೇ ಸ್ವಚ್ಛತೆ ನಡೆಸಬೇಕೆಂದು ನ್ಯಾಯಾಲಯ ಹಾಗೂ ಸರಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕನನ್ನು ಮ್ಯಾನ್‌ಹೋಲ್ ಸ್ವಚ್ಛಗೊಳಿಸಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ, ಕಾರ್ಮಿಕರ ಜೀವದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಕೆಲಸಕ್ಕೆ ತೊಡಗಿಸಿರುವುದು ಸಂವಿಧಾನದ ಕಲಂ 21ರಡಿ ನೀಡಿರುವ ಜೀವನ ಮತ್ತು ಗೌರವಯುತ ಬದುಕಿನ ಹಕ್ಕಿನ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸೆಕ್ಯುಲರ್ ವಾಯ್ಸ್ ಡಿಜಿಟಲ್ ಮಾಧ್ಯಮದೊಂದಿಗೆ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷಾ ಸಮಿತಿ ಜಿಲ್ಲಾ ಸಂಯೋಜಕ ರಮೇಶ್ ಕೊಳ್ಳೂರು ಮಾತನಾಡಿ, “ಜಿಲ್ಲೆಯಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಅನಿಷ್ಟ ಪದ್ಧತಿ ಇನ್ನೂ ಮುಂದುವರಿದಿದೆ. ಇದು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಕಾಯ್ದೆ–2013ರ ಸ್ಪಷ್ಟ ಉಲ್ಲಂಘನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಯಂತ್ರಮೂಲಕ ಸ್ವಚ್ಛತೆ ಶಾಶ್ವತಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

