🛑DISTRICT NEWS : “ಯಾದಗಿರಿ | ಇಬ್ರಾಹಿಂಪುರದಲ್ಲಿ ಶಿರಡಿ ಸಾಯಿಬಾಬಾ 4ನೇ ಜಾತ್ರಾ ಮಹೋತ್ಸವಕ್ಕೆ ಭವ್ಯ ಚಾಲನೆ: ಹಸೆಮಣೆ ಏರಿದ ಹತ್ತು ಜೋಡಿಗಳು”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ಶಹಾಪುರ ತಾಲೂಕಿನ ಇಬ್ರಾಹಿಂಪುರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 4ನೇ ಜಾತ್ರಾ ಮಹೋತ್ಸವವು ಶನಿವಾರ ಭಕ್ತಿಭಾವ, ಧಾರ್ಮಿಕ ಸಂಭ್ರಮ ಮತ್ತು ಸಾಮಾಜಿಕ ಸಂದೇಶಗಳೊಂದಿಗೆ ಅದ್ಧೂರಿಯಾಗಿ ಆರಂಭಗೊಂಡಿತು. ನಾಡಿನ ವಿವಿಧ ಮಠಗಳ ಹರಗುರುಗಳು, ಸಾಹಿತಿಗಳು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಸಾಯಿಬಾಬಾ ಭಕ್ತರ ಸಮ್ಮುಖದಲ್ಲಿ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಶಿರಡಿ ಸಾಯಿಬಾಬಾ ಅವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಆಶ್ರಮದ ರೂವಾರಿಗಳಾದ ಮಹಾರಾಜ್ ದಿಗ್ಗಿ ಮತ್ತು ಸಿದ್ದಪಾಜಿ ದಿಗ್ಗಿ ಅವರು ಕುಟುಂಬಸ್ಥರೊಂದಿಗೆ ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಹತ್ತು ಜೋಡಿಗಳ ಸಾಮೂಹಿಕ ವಿವಾಹ ಸಕಲ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ನೆರವೇರಿತು. ಹಸೆಮಣೆ ಏರಿದ ಜೋಡಿಗಳಿಗೆ ಗಣ್ಯರಿಂದ ಆಶೀರ್ವಾದ ಹಾಗೂ ಶುಭಾಶಯಗಳ ಮಹಾಪೂರ ಹರಿದುಬಂತು.
ನಂತರ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕಡಕೋಳ ಮಡಿವಾಳೇಶ್ವರ ಮಹಾ ಮಠದ ಪೀಠಾಧಿಪತಿ ಡಾ. ರುದ್ರಮುನಿ ಶಿವಾಚಾರ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಧರ್ಮ ಕಾರ್ಯಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಹಾರಾಜ್ ದಿಗ್ಗಿ ಅವರು ಸಾಯಿಬಾಬಾ ಜಾತ್ರೆ ಆಯೋಜಿಸುವ ಮೂಲಕ ಶ್ರೇಷ್ಠ ಧರ್ಮ ಕಾರ್ಯ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಮಾತನಾಡಿ, ಸರ್ವಧರ್ಮಗಳ ಸಕಾರಮೂರ್ತಿಯಾದ ಶಿರಡಿ ಸಾಯಿಬಾಬಾ ಅವರ ಜಾತ್ರೆ ಜಾತ್ಯತೀತ ಮೌಲ್ಯಗಳನ್ನು ಜೀವಂತವಾಗಿಟ್ಟಿದೆ ಎಂದು ಹೇಳಿದರು. ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ್ ಅವರು ದಿಗ್ಗಿ ಮಹಾರಾಜ್ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ದಿಗ್ಗಿ ಮಹಾರಾಜ್ ಅವರ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗುರುಮಠಕಲ್, ಸರೂರು–ಅಗತೀರ್ಥ, ಚಿಗರಹಳ್ಳಿ, ಹೋತಪೇಠ, ದೊರನಹಳ್ಳಿ, ಮಹಲ್ ರೋಜ್, ಜುಬೇರಿ ಗೋಗಿ, ಚಟ್ನಳ್ಳಿ, ಮಾಲಹಳ್ಳಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಸಾಹಿತಿ ಡಾ. ಸಿದ್ದರಾಮ ಹೊನ್ಕಲ್, ಹೋರಾಟಗಾರ ಉಮೇಶ ಮುದ್ನಾಳ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಬಿಜೆಪಿ ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಕಾಂಗ್ರೆಸ್ ಮುಖಂಡರಾದ ನೀಲಕಂಠ ಬಡಿಗೇರ, ಶ್ರೀಶೈಲ್ ಹೊಸಮನಿ, ಮಲ್ಲಿಕಾರ್ಜುನ, ಡಾ. ರವೀಂದ್ರನಾಥ ಹೊಸಮನಿ, ಸಾಯಬಣ್ಣ ಪುರ್ಲೆ, ಪತ್ರಕರ್ತ ಪ್ರಕಾಶ ದೊರೆ, ಭೀಮಾಶಂಕರ ನಾಯಕ, ಶ್ರೀಶೈಲ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹಾಂತೇಶ ಹೂಲಕೊಟಿ ತಂಡದ ಸಂಗೀತ ಕಾರ್ಯಕ್ರಮ, ಡಿ. ಜಾನ್ ಸಂಸ್ಥೆಯ ಶಾಲಾ ಮಕ್ಕಳ ಭರತನಾಟ್ಯ ಹಾಗೂ ಬಸವಣ್ಣನವರ ವಚನ ಗಾಯನ ವಿಶೇಷ ಗಮನ ಸೆಳೆದವು. ಲಿಂಗೈಕ್ಯ ಕಾಗಿನೆಲೆ ಸಿದ್ದರಾಮನಂದಪೂರಿ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಜ.18ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ನಟ ಡಾಲಿ ಧನಂಜಯ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.