🟢LOCAL EXPRESS : “ಬಳ್ಳಾರಿ|ಪಿಯು ಕಾಲೇಜು, ಸ್ವಯಂ ಉದ್ಯೋಗ, ಬಸ್ ಸೌಲಭ್ಯಕ್ಕಾಗಿ : ಶಾಸಕ ಗಣೇಶ್ ಅವರಿಗೆ ನಾಯಕತ್ವ ಗುಂಪುಗಳ ಮಹಿಳೆಯರ ಮನವಿ”

Contents
🟢LOCAL EXPRESS : “ಬಳ್ಳಾರಿ|ಪಿಯು ಕಾಲೇಜು, ಸ್ವಯಂ ಉದ್ಯೋಗ, ಬಸ್ ಸೌಲಭ್ಯಕ್ಕಾಗಿ : ಶಾಸಕ ಗಣೇಶ್ ಅವರಿಗೆ ನಾಯಕತ್ವ ಗುಂಪುಗಳ ಮಹಿಳೆಯರ ಮನವಿ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಕಂಪ್ಲಿ: ಕಂಪ್ಲಿ (ಬಳ್ಳಾರಿ) : ‘ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು, ಹಳ್ಳಿಗಳಲ್ಲಿ ಪಿಯು ಕಾಲೇಜು ಆರಂಭಿಸುವುದು, ವಾರ್ಡುಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಹಾಗೂ ಕೆಲ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ, ಸಾವಿತ್ರಿಬಾಯಿ ಫುಲೆ – ಫಾತಿಮಾ ಶೇಖ್ ಸಮುದಾಯ ಸೇವಾ ಟ್ರಸ್ಟ್ (ರಿ.) ನೇತೃತ್ವದಲ್ಲಿ ನಾಯಕತ್ವದ ಗುಂಪುಗಳ ಮಹಿಳೆಯರು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು’.‘ಈ ವೇಳೆ ಸಾವಿತ್ರಿಬಾಯಿ ಫುಲೆ – ಫಾತಿಮಾ ಶೇಖ್ ಸಮುದಾಯ ಸೇವಾ ಟ್ರಸ್ಟ್ (ರಿ.) ಟ್ರಸ್ಟ್‌ನ ಅಧ್ಯಕ್ಷೆ ಬಿ. ಅಮೀನಾ ಅವರು ಮಾತನಾಡಿ, ಕಂಪ್ಲಿ ಹಾಗೂ ಕುರುಗೋಡು ತಾಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿ 10ನೇ ತರಗತಿಯ ನಂತರ ಪಿಯು ಕಾಲೇಜುಗಳ ಕೊರತೆಯಿಂದ ಅನೇಕ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದಾಗಿ ಗಮನ ಸೆಳೆದರು. ಜೊತೆಗೆ ಸಾರಿಗೆ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಉಲ್ಲೇಖಿಸಿ, ಈ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಮನವಿ ಮಾಡಿದರು’.‘ಸಭೆಯಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಾರ್ಮೆಂಟ್ಸ್ ಘಟಕಗಳು, ಹೊಲಿಗೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳು, ಆಹಾರ ಸಂಸ್ಕರಣ ಘಟಕಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಉದ್ಯೋಗ ಸೃಷ್ಟಿಸುವಂತೆ ಬೇಡಿಕೆ ಇಡಲಾಯಿತು. ಹಳ್ಳಿಗಳು ಹಾಗೂ ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವ ಕುರಿತ ಸಮಸ್ಯೆಗಳನ್ನೂ ಶಾಸಕರ ಗಮನಕ್ಕೆ ತರಲಾಯಿತು’.‘ಮನವಿ ಸ್ವೀಕರಿಸಿದ ಶಾಸಕ ಗಣೇಶ್ ಅವರು, ಮಹಿಳೆಯರ ಕೌಶಲ್ಯಾಭಿವೃದ್ಧಿ ಹಾಗೂ ಸ್ವಯಂ ಉದ್ಯೋಗಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು.‘ಈ ಸಂದರ್ಭದಲ್ಲಿ ನಾಯಕತ್ವ ಗುಂಪುಗಳ ಮಹಿಳಾ ನಾಯಕಿಯರಾದ ಪ್ರಭು ಕ್ಯಾಂಪ್‌ನ ರಾಜೇಶ್ವರಿ, ದೇವಸಮುದ್ರ ಗ್ರಾಮದ ಹುಲಿಗೆಮ್ಮ, 23ನೇ ವಾರ್ಡ್ ಜಾನು ರಸ್ತೆಯ ರೇಷ್ಮಾ, ಎರಡನೇ ವಾರ್ಡ್ ಆದೋನಿ ಮೊಹಲ್ಲದ ಮುನ್ನಿ, ಎಂಡಿ ಕ್ಯಾಂಪ್‌ನ 22ನೇ ವಾರ್ಡಿನ ಕಾಸಿಂಬಿ, 11ನೇ ವಾರ್ಡಿನ ಹುಲಿಗೆಮ್ಮ, 21ನೇ ವಾರ್ಡಿನ ರೇಷ್ಮಾ, ಮೊದಲನೇ ವಾರ್ಡ್ ಕೋಟೆಯ ಹಸಿನ ಸೇರಿದಂತೆ ಐದು ನಾಯಕತ್ವದ ಗುಂಪುಗಳ 38 ಮಹಿಳೆಯರು ಹಾಗೂ ತರಬೇತಿ ಕೇಂದ್ರದ ಮಹಿಳೆಯರು ಉಪಸ್ಥಿತರಿದ್ದರು.
