◼️LOCAL NEWS : “ಯಾದಗಿರಿ |ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಶ್ರೀಗಳು ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನಕ್ಕೆ ಸಂತಾಪ”

By admin

  ◼️LOCAL NEWS : “ಯಾದಗಿರಿ |ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಶ್ರೀಗಳು ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನಕ್ಕೆ ಸಂತಾಪ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಡಗೇರಾ :

ಕಲಬುರ್ಗಿ ವಿಭಾಗೀಯ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠಾಧ್ಯಕ್ಷರಾದ ಪರಮಪೂಜ್ಯ ಸಿದ್ದರಾಮನಂದ ಪುರಿ ಮಹಾಸ್ವಾಮಿಗಳು ಹಾಗೂ ಬಾಲ್ಕಿಯ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ–ಭೀಮಾ ಸಂಗಮದ ಪರಮಪೂಜ್ಯ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಿಂಥಣಿ ಕನಕ ಗುರುಪೀಠದ ಶ್ರೀಗಳು ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಸಂತರು. ಅವರು ಕೇವಲ ಒಂದೇ ಸಮಾಜಕ್ಕೆ ಸೀಮಿತರಾಗದೆ, ಎಲ್ಲ ವರ್ಗದ ಜನರನ್ನು ಸಮಾನ ಪ್ರೀತಿಯಿಂದ ನೋಡುತ್ತಿದ್ದರು. ಶಿಕ್ಷಣ, ಕಲೆ, ಸಾಹಿತ್ಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರುಣೇಶ್ವರ ಶ್ರೀಗಳು ಕಂಬನಿ ಮಿಡಿದರು.

ಭಾಲ್ಕಿಯ ಶತಾಯುಷಿ ಭೀಮಣ್ಣ ಖಂಡ್ರೆ ಅವರು ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಮುಂಚೂಣಿ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ ಪಾಲಿಗೆ ಬೆಳಕಾಗಿದ್ದು, ಶಿಕ್ಷಣ ಕ್ರಾಂತಿಗೆ ಕಾರಣರಾದರು ಎಂದು ಶ್ರೀಗಳು ಸ್ಮರಿಸಿದರು.

ಇಬ್ಬರು ಮಹನೀಯರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಾರ್ಥಿಸಿದರು.