🔴CRIME NEWS : “ಮಂಡ್ಯ| ಪಕ್ಕದ ಮನೆಯವನ ಕಿರುಕುಳ: ತಾಯಿ–ಮಗಳು ಆತ್ಮಹತ್ಯೆ”

By admin

CRIME NEWS : “ಮಂಡ್ಯ| ಪಕ್ಕದ ಮನೆಯವನ ಕಿರುಕುಳ: ತಾಯಿ–ಮಗಳು ಆತ್ಮಹತ್ಯೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಮಂಡ್ಯ:

ಪಕ್ಕದ ಮನೆಯ ವ್ಯಕ್ತಿಯ ನಿರಂತರ ಬೆದರಿಕೆ ಹಾಗೂ ಕಿರುಕುಳಕ್ಕೆ ಬೇಸತ್ತು ತಾಯಿ ಮತ್ತು ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಶಕುಂತಲಾದೇವಿ (46) ಹಾಗೂ ಅವರ ಪುತ್ರಿ ಪ್ರಿಯಾಂಕ (19) ಎಂದು ಗುರುತಿಸಲಾಗಿದೆ.

ಪ್ರಿಯಾಂಕಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು. ಮದುವೆ ಸಿದ್ಧತೆಗಳ ನಡುವೆಯೇ ತಾಯಿ–ಮಗಳು ಈ ತೀವ್ರ ನಿರ್ಧಾರ ಕೈಗೊಂಡಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಪಕ್ಕದ ಮನೆಯ ವ್ಯಕ್ತಿಯೊಬ್ಬರು ತಾಯಿ–ಮಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಶಕುಂತಲಾದೇವಿ ಹಾಗೂ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ತಾಯಿ ಹಾಗೂ ತಂಗಿಯ ಶವಗಳ ಮುಂದೆ ಕುಸಿದ ಮಗನ ಆಕ್ರಂದನ ಮನಕಲಕುವಂತಿತ್ತು. “ಅವ್ವಾ… ಏಳವ್ವಾ…” ಎಂದು ಅಳುತ್ತಾ ಕರೆದಾಡಿದ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದವರ ಕಣ್ಣೀರು ತಡೆಯಲಾಗಲಿಲ್ಲ.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಕಿರುಕುಳದ ಆರೋಪದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.