🔴LOCAL EXPRESS: “ಗಂಗಾವತಿ| ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಕ್ರಮಕ್ಕೆ ಖಾದರ್ ಭಾಷಾ  ಆಗ್ರಹ”

By admin

  🔴LOCAL EXPRESS : “ಗಂಗಾವತಿ| ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಕ್ರಮಕ್ಕೆ ಖಾದರ್ ಭಾಷಾ  ಆಗ್ರಹ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ 

ಕನ್ನಡದ ಖ್ಯಾತ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಖಾದರ್ ಭಾಷಾ  ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ‘ಕಾಟನ್ ಪೇಟೆಗೇಟ್’ ಎಂಬ ಕನ್ನಡ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕರ್ನಾಟಕ ರತ್ನ ದಿವಂಗತ ಡಾ. ಪುನೀತ್ ರಾಜಕುಮಾರ್ ಹಾಗೂ ಕನ್ನಡದ ಕಲಾವಿದರು ಮತ್ತು ನಿರ್ದೇಶಕರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಪುನೀತ್ ರಾಜಕುಮಾರ್ ನಾಯಕತ್ವದಲ್ಲಿ ನಿರ್ಮಾಣವಾಗಬೇಕಿದ್ದ ‘ಮಯೂರ’ ಚಿತ್ರವು ನಿರ್ದೇಶಕರ ನಿಧನದಿಂದ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿಯೇ, “ಈಗ ಪುನೀತ್ ರಾಜಕುಮಾರ್ ಸತ್ತಿಹೋಗಿದ್ದಾರೆ” ಎಂಬ ಅಸಂಬದ್ಧ ಹಾಗೂ ಅಸಹ್ಯಕರ ಹೇಳಿಕೆ ನೀಡಿರುವುದು ಕೋಟ್ಯಾಂತರ ಅಭಿಮಾನಿಗಳ ಮನಸ್ಸಿಗೆ ನೋವು ತಂದಿದೆ ಎಂದು ಆರೋಪಿಸಿದರು.

ಈ ರೀತಿಯ ಹೇಳಿಕೆಗಳು ದಿವಂಗತ ಮಹಾನ್ ಕಲಾವಿದರ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ಎನ್.ಆರ್. ರಮೇಶ್ ಅವರ ನಿರ್ದೇಶನದಂತೆ ಗಂಗಾವತಿ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಿಗೆ ಮನವಿ ಸಲ್ಲಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಖಾದರ್ ಭಾಷಾ ಹಾಗೂ ಗಂಗಾವತಿ ತಾಲ್ಲೂಕು ಅಧ್ಯಕ್ಷ ಪುನೀತ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಮಂಜುನಾಥ್ ಸಾಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.