DISTRIC NEWS :“ಗದಗ | ಎಸ್‌ಐಆರ್ ಅಲ್ಲ ಎಫ್‌ಐಆರ್ ಅಗಿದೆ; ಮತಪಟ್ಟಿಯಿಂದ 20 ಕೋಟಿ ಜನರ ಹೆಸರು ಕಡಿತ: ಚಿಂತಕ ಶಿವಸುಂದರ ಆರೋಪ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ :
‘ಕೇಂದ್ರ ಸರಕಾರ ತಂದಿರುವ ಎಸ್ಐಆರ್‌ನಲ್ಲಿ ಪದದಲ್ಲೇ ಪ್ರಭುತ್ವದ ಹುನ್ನಾರವಿದೆ. ಇದು ‘ಎಸ್ಐಆರ್ ಅಲ್ಲ ಎಫ್ಐಆರ್’ ಮತಪಟ್ಟಿಯಿಂದ ಸುಮಾರು 20 ಕೋಟಿಗೂ ಹೆಚ್ಚು ಜನರ ಹೆಸರು ಖಂಡಿತ ಮಾಡಲಾಗುತ್ತದೆ ಹಾಗೂ ಅಷ್ಟು ಜನರು ಮತದಾನ ಪಟ್ಟಿಯಿಂದ ಹೊರಗುಳಿಯುತ್ತಾರೆ’ ಎಂದು ಚಿಂತಕ ಶಿವಸುಂದರ ಆರೋಪಿಸಿದರು.
ಗದಗ ಲಯನ್ಸ್ ಭವನದಲ್ಲಿ ಮೇ ಸಾಹಿತ್ಯ ಮೇಳ ಗದಗ, ಲಡಾಯಿ ಪ್ರಕಾಶನ ಹಾಗೂ ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ನಡೆದ ‘ಎಸ್‌ಐಆರ್: ಪೌರತ್ವದ ಪ್ರಶ್ನೆ, ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿಯಲ್ಲಿ ನಡೆಯಿತು.
‘ಎಸ್‌ಐಆರ್: ಪೌರತ್ವದ ಪ್ರಶ್ನೆ, ಪ್ರಭುತ್ವದ ಹುನ್ನಾರಗಳು’ ಸಂವಾದ ಗೋಷ್ಠಿಯಲ್ಲಿ ಚಿಂತಕ ಶಿವಸುಂದರ ಮಾತನಾಡಿ, “ದೇಶದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ ಪೂರ್ಣಗೊಳ್ಳುವ ವೇಳೆಗೆ ಈಗಿರುವ 100 ಕೋಟಿ ಮತದಾರರಲ್ಲಿ 20 ಕೋಟಿ ಜನರು ಪಟ್ಟಿಯಿಂದ ಹೊರಗುಳಿಯುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದರು. ‘ಎಸ್‌ಐಆರ್‌ನಲ್ಲಿರುವ ವಿಶೇಷ ಎಂಬ ಪದದಲ್ಲೇ ಅತಿದೊಡ್ಡ ಹುನ್ನಾರ ಹಾಗೂ ಮೋಸವಡಗಿದೆ. ಕೇವಲ ಮತಪಟ್ಟಿ ವಿಶೇಷ ಪರಿಷ್ಕರಣೆ ಅಲ್ಲ. ಈ ದೇಶದ ನಾಗರಿಕರ ನಾಗರಿಕತ್ವದ ಪರಿಷ್ಕರಣೆಯಾಗಿದೆ’ ಎಂದರು.
ಎಸ್‌ಐಆರ್ ಮೂಲಕ ಪ್ರಧಾನಿ ಮೋದಿ ಅವರು ದೇಶದ 140 ಕೋಟಿ ಜನರ ಮೇಲೆ ಆರೋಪ ಪಟ್ಟಿ ಹಾಕಿದ್ದಾರೆ. ಅಂದರೆ, ಈಗ ಇರುವವರೆಲ್ಲರೂ ಈ ದೇಶದ ನಾಗರಿಕರಲ್ಲ. ನಾವು ಕೇಳುವ ದಾಖಲೆಗಳನ್ನು ಒದಗಿಸಿ ನೀವು ಭಾರತೀಯರು ಎಂದು ಸಾಬೀತುಪಡಿಸಿ ಎಂದು ಅಗ್ನಿ ಪರೀಕ್ಷೆ ಇಟ್ಟಿದ್ದಾರೆ ಎಂದು ಹೇಳಿದರು. ಪ್ರಸ್ತುತ 12 ರಾಜ್ಯಗಳಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಎಸ್‌ಐಆರ್ ಪೂರ್ವ
ಹಂತದಲ್ಲಿ ಮ್ಯಾಚಿಂಗ್ ಮತ್ತು ಮ್ಯಾಪಿಂಗ್ ಈ ಎರಡು ಹಂತದಲ್ಲಿ ನೆಡೆದಿದೆ. ಇಲ್ಲಿ ದಾಖಲೆಗಳು ಹೊಂದಾಣಿಕೆಯಾದರೆ ಸಮಸ್ಯೆ ಇಲ್ಲ. ಇಲ್ಲವಾದರೆ ದಾಖಲೆಗಳು ಒದಗಿಸಿಲ್ಲ ಎಂಬ ಕಾರಣಕ್ಕೆ ಈ ದೇಶದ ನಾಗರಿಕರಲ್ಲ ಎಂದು ಹೇಳಿ ಈಗಾಗಲೇ ಕೋಟ್ಯಂತರ ಜನರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು ಹೆಚ್ಚು ಇರುತ್ತಾರೆ ಎಂದರು.
ಏಪ್ರಿಲ್‌ನಿಂದ ಎಸ್‌ಐಆರ್‌ನ ಮೊದಲ ಹಂತ ಆರಂಭಗೊಳ್ಳಲಿದ್ದು, ಪ್ರತಿ ಮನೆಗೆ ಬಿಎಲ್‌ಒಗಳು ಬಂದು ಅರ್ಜಿ ನಮೂನೆ ಕೊಡುವರು. ಅದನ್ನು ಒಂದು ತಿಂಗಳಲ್ಲಿ ಭರ್ತಿ ಮಾಡಿ ಕೊಡಬೇಕು. ನಮ್ಮ ಬಳಿ ಇರುವ ದಾಖಲೆಗಳು ಅವರಿಗೆ ಬೇಕಿಲ್ಲ. ಅವರು ಕೇಳುವ ದಾಖಲೆಗಳನ್ನು ಒದಗಿಸಲು ಸಾಕಷ್ಟು ಜನರಿಗೆ ಆಗುವುದಿಲ್ಲ. ಹಾಗಾಗಿ, ಮುಸ್ಲಿಮರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರು ಈ ದೇಶದ ನಾಗರಿಕರು ಅಲ್ಲ ಎಂದು ಘೋಷಣೆ ಮಾಡುವ ಬಹುದೊಡ್ಡ ಹುನ್ನಾರ ಅಡಗಿದೆ ಎಂದು ಹೇಳಿದರು.
ಒಬ್ಬ ಪ್ರಜೆ ಈ ದೇಶದ ನಾಗರಿಕ ಅಲ್ಲ ಎಂದು ಘೋಷಣೆಯಾದರೆ ಬದುಕನ್ನೇ ಕಳೆದುಕೊಳ್ಳುತ್ತಾನೆ. ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಿಲ್ಲ. ಸ್ವಂತ ಉದ್ಯೋಗ, ಕಷ್ಟಕಾಲದಲ್ಲಿಪೊಲೀಸರಿಗೆ ದೂರು ಕೊಡುವ ಅವಕಾಶವನ್ನೂ ಕಳೆದುಕೊಳ್ಳುತ್ತಾನೆ ಎಂದು ಕಳವಳ ವ್ಯಕ್ತಪಡಿಸಿದರು.