LOCAL EXPRESS :“ಕೊಪ್ಪಳ| ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಫೆ.12ರಂದು : ಹೋರಾಟದ ಕರಪತ್ರ ಬಿಡುಗಡೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ :
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ–ರೈತ ವಿರೋಧಿ ನೀತಿಗಳನ್ನು ಖಂಡಿಸಿ ಫೆ. 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ವತಿಯಿಂದ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು.
ನಾಲ್ಕು ಲೇಬರ್ ಕೋಡ್‌ಗಳು, ವಿಬಿ–ಬಿಬಿ ರಾಮ್‌ಜಿ ವಿಮಾ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯಿದೆ, ಬೀಜ ಕಾಯಿದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸಿ ಭಾರತೀಯ ಹಾಗೂ ವಿದೇಶಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ನೀತಿಯನ್ನು ನಿರಂತರವಾಗಿ ಮುಂದುವರಿಸುತ್ತಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದರು. ರೈಲ್ವೆ, ಬಂದರು, ಹಡಗು ನಿರ್ಮಾಣ ಘಟಕಗಳು, ಕಲ್ಲಿದ್ದಲು ಗಣಿಗಳು, ತೈಲ, ಉಕ್ಕು, ರಕ್ಷಣಾ ಉತ್ಪಾದನೆ, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಬ್ಯಾಂಕುಗಳು, ವಿಮೆ, ದೂರಸಂಪರ್ಕ, ಅಂಚೆ, ಪರಮಾಣು ಶಕ್ತಿ ಹಾಗೂ ವಿದ್ಯುತ್ ಉತ್ಪಾದನೆ–ಪೂರೈಕೆ ಸೇರಿದಂತೆ ಜನಸಾಮಾನ್ಯರ ಆಧಾರಸ್ತಂಭವಾಗಿರುವ ಸಂಸ್ಥೆಗಳು ಖಾಸಗಿ ಲಾಭಾಸಕ್ತಿಗೆ ಒಪ್ಪಿಸಲಾಗುತ್ತಿವೆ ಎಂದು ತಿಳಿಸಿದರು.
ಈ ಖಾಸಗೀಕರಣ ನೀತಿಯಿಂದ ಸ್ಥಳೀಯ ಕೈಗಾರಿಕೆ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಉದ್ಯೋಗ ಸೃಷ್ಟಿ ಕುಂಠಿತಗೊಂಡಿದೆ. ಪರಿಣಾಮ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ಕಾರ್ಮಿಕರ ಉದ್ಯೋಗ ಭದ್ರತೆ ನಾಶವಾಗುತ್ತಿದೆ. ಜೊತೆಗೆ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿಯುತ್ತಿದ್ದು, ಜನರ ಮೇಲೆ ಆರ್ಥಿಕ ಭಾರ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಈ ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ವಿವಿಧ ರೈತ–ಜನ ಸಂಘಟನೆಗಳ ನೇತೃತ್ವದಲ್ಲಿ ಫೆಬ್ರವರಿ 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ನಾಲ್ಕು ಲೇಬರ್ ಕೋಡ್ ಹಿಂಪಡೆಯಬೇಕು, ಖಾಸಗೀಕರಣ ನಿಲ್ಲಿಸಬೇಕು, ಸಾರ್ವಜನಿಕ ವಲಯದ ಸಂಸ್ಥೆಗಳನ್ನು ರಕ್ಷಿಸಬೇಕು ಹಾಗೂ ಶ್ರಮಿಕರ ಹಕ್ಕುಗಳನ್ನು ಕಾಪಾಡಬೇಕು ಎಂಬುದು ಮುಷ್ಕರದ ಪ್ರಮುಖ ಉದ್ದೇಶವಾಗಿದೆ.
ಜಿಲ್ಲೆಯಲ್ಲಿ ಬ್ಯಾಂಕ್, ವಿಮೆ, ಸಾರಿಗೆ, ವಿದ್ಯುತ್, ಅಂಚೆ, ಶಿಕ್ಷಣ, ಆರೋಗ್ಯ, ನಿರ್ಮಾಣ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಧ್ಯಾಹ್ನ ಬೋಜನ ಸಿಬ್ಬಂದಿ, ರೈತರು ಹಾಗೂ ಜನಸಾಮಾನ್ಯರು ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ಮುಷ್ಕರದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ನಡೆಯಲಿವೆ. ಮುಷ್ಕರ ಯಶಸ್ವಿಗಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರು, ಕಟಿಂಗ್ ಶಾಪ್ ಮಾಲಕರು, ಟೈಲರ್ ಯೂನಿಯನ್, ಅಮಾಲರ ಸಂಘ, ಆಟೋ ಚಾಲಕರು ಹಾಗೂ ವರ್ತಕರ ಸಂಘಗಳು ಸ್ವಯಂಪ್ರೇರಿತವಾಗಿ ಕೊಪ್ಪಳ ಬಂದ್‌ಗೆ ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಹನುಮೇಶ ಕಲ್ಮಂಗಿ, ಶರಣು ಗಡ್ಡಿ, ಬಸವರಾಜ ಸಿಲುವಂತರ, ಸುಂಕಪ್ಪ ಗದಗ್, ತುಕಾರಾಂ ಪಾತ್ರೋಟಿ, ಮಹದೇವಪ್ಪ, ಕೆ.ಬಿ. ಗೋನಾಳ, ಸಂಜಯ್ ದಾಸ್, ದೊರೆ ವಿಜಯ್, ರಾಮಲಿಂಗ ಸ್ವಾಮಿ, ಮಲ್ಲಪ್ಪ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.
ಸಿಐಟಿಯು, ಎಐಯುಟಿಯುಸಿ, ಐಎಫ್‌ಟಿಯು, ಎಐಟಿಯುಸಿ, ಟಿಯುಸಿಐ, ಎಐಸಿಸಿಟಿಯು, ಎಐಯುಕೆಎಸ್, ಎನ್‌ಸಿಎಲ್, ಎಐಎಡಬ್ಲ್ಯುಯು, ಎಐಐಇಎ, ಎಲ್‌ಐಸಿ ಎಒಐ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ಸೇರಿದಂತೆ ಇತರ ಕಾರ್ಮಿಕ ಮತ್ತು ರೈತ ಸಂಘಟನೆಗಳು ಜಂಟಿಯಾಗಿ ಈ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಲಿವೆ.