LOCAL NEWS :“ಕುಕನೂರ| ಅಂಬೇಡ್ಕರ ವಿಚಾರಗಳು ಯುವಕರಿಗೆ ದಾರಿದೀಪ: ಯುವ ಮುಖಂಡ ಯಮನೂರಪ್ಪ ಕಟ್ಟಿಮನಿ ಅಭಿಮತ”


• ಸೆಕ್ಯುಲರ್ ವಾಯ್ಸ್ ಕುಕನೂರು:
ತಾಲ್ಲೂಕಿನ ಬಳಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಹಳ್ಳಿ ತಾಂಡಾದ ಸಾರ್ವಜನಿಕ ಗ್ರಂಥಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಯುವಜನರ ತಂಡದ ವತಿಯಿಂದ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಪುಷ್ಪಾರ್ಚರನೆ ಮಾಡಿ, ಸಂವಿಧಾನ ಪೀಠಿಕೆ ವಾಚನ ಮಾಡಲಾಯಿತು. ಅವರ ಶಿಕ್ಷಣ, ಜೀವನ ತತ್ವ ಹಾಗೂ ಸಿದ್ಧಾಂತಗಳ ಕುರಿತು ವಿಚಾರ ಸಂಕಿರಣವೂ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಯುವ ಮುಖಂಡ ಯಮನೂರಪ್ಪ ಕಟ್ಟಿಮನಿ ಅವರು ಮಾತನಾಡಿ , ಅಂಬೇಡ್ಕರ್ ಅವರು ಯುವಜನತೆಗೆ ದಾರಿದೀಪರಾಗಿದ್ದು, ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಜಯಂತಿ ಆಚರಣೆಗೆ ಅರ್ಥ ಸಿಗುತ್ತದೆ .ಸಂವಿಧಾನವನ್ನು ಓದಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಅವರ ಆದರ್ಶಗಳನ್ನು ಅರಿತುಕೊಂಡು ಯುವಕರು ತಮ್ಮ ಬದುಕಿನಲ್ಲಿ ಅನುಸರಿಸಬೇಕು ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಒಂದು ಚಿಂತನೆ, ಒಂದು ಚಳವಳಿ ಹಾಗೂ ಶೋಷಿತರ ಧ್ವನಿಯಾಗಿ ಸದಾ ಜೀವಂತವಾಗಿರುವ ಮಹಾನ್ ದಾರ್ಶನಿಕ ಎಂದು ಕೊಂಡಾಡಿದರು. ಅವರ ತತ್ವಗಳು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿದ್ದು, ಶಿಕ್ಷಣ ಮತ್ತು ಹಕ್ಕುಗಳ ಅರಿವು ಮೂಲಕ ಸಮಾಜವನ್ನು ಸಮತೋಲನದ ದಾರಿಯಲ್ಲಿ ಮುನ್ನಡೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಕುಮಾರ ಬಳಗೇರಿ, ವಿರೂಪಾಕ್ಷಯ್ಯ ಕುರ್ತಕೋಟಿ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಭಾನಾಪುರ, ಶ್ರೀಕಾಂತ ಕಟ್ಟಿಮನಿ, ಪ್ರಕಾಶ್ ಬಳಿಗೇರಿ, ಪತ್ರಕರ್ತ ಭೀಮಾಶಂಕರ ಪಾಣೇಗಾಂವ, ಯಲ್ಲಪ್ಪ ಕಾರಭಾರಿ, ಅಂಬರೀಶ ಮನ್ನಾಪುರ, ಮನೋಹರ್, ವೆಂಕಟೇಶ್ ನಾಯ್ಕ, ಶಶಿಕುಮಾರ್, ರಾಘವೇಂದ್ರ, ಶಶಿ ಕೆ., ಮೇಘರಾಜ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಗ್ರಾಮದ ಯುವಕರಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಬೆಳೆಸುವುದು ನಮ್ಮ ಮುಖ್ಯ ಉದ್ದೇಶ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಶಿಕ್ಷಣ ಮತ್ತು ಸಮಾನತೆ ಮೌಲ್ಯಗಳನ್ನು ಹರಡುವ ಕೆಲಸ ಮಾಡುತ್ತಿದ್ದೇವೆ,”
– ಚಂದ್ರು ಆರ್. ಭಾನಾಪುರ ,ಅಂಬೇಡ್ಕರ್ ಚಿಂತಕ ,ಕುಕನೂರ

