
ಅಶೋಕವನದಲಿ ವಿಹರಿಸಲು ರಾಮ ಸೀತೆಯೊಂದಿಗೆI
ಬರುತಿದ್ದ ನಿತ್ಯ, ಸರ್ಯೂನದಿ ದಡದಲಿ; II
ಶ್ರೀಗಂಧ,ಅಗುರ,ಮಾವು,ದೇವುದಾರ, ಚಂಪಕ,ನಾಗಕೇಸರಿ, I
ಮಧುಕ, ಪನಸ,ಸರ್ಜ,ಪಾರಿಜಾತ ವೃಕ್ಷಗಳಿದ್ದವು; II
ಹಬ್ಬಿದ್ದವು ಸೊದ್ರ, ನೀಪ,ನಾಗ, ಸಪ್ತಪರ್ಣ,I
ಮುಕ್ತಕ, ಮಂದಾರ ಕದಲೀ, ವಿಭಿನ್ನ ಹೂಬಳ್ಳಿಗಳು; II
ಪ್ರಿಯಂಗ, ಕದಂಬ, ವಕುಲ, ಜಾಂಬು,ದಾಳಿಂಬ,I
ಕದಳಿ, ವಿಭಿನ್ನ ಹೂ ಫಲಗಳ ಗಿಡಗಳಿದ್ದವು; II
ಗಿಡ ಮರಗಳಲ್ಲಿ ಜೇನು ಗೂಡಗಳ ದೃಶ್ಯI
ಎತ್ತ ನೋಡಿದರೂ ಮಧುಕರಗಳ ಝೇಂಕಾರ; II
ಮಾವಿನ ಮರಗಳಲ್ಲಿ ಕೋಗಿಲೆಗಳ ಕೂಹುಕಾರ,I
ವಿಭಿನ್ನ ಹಕ್ಕಿಗಳ ಇಂಚರ, ಚಿಲಿಪಿಲಿ ಶಬ್ದಲಂಕಾರ; II
ಪುಷ್ಪ-ಪರಿಮಳ ತುಂಬಿ ಬೀಸುತಿತ್ತು ಮಂದಗಾಳಿ,I
ಮನಬಂಧಿಸುವನ ಶಾಂತ ನೀರಿನ ಮಡಗಳ ದೃಶ್ಯ; II
ಕಮಲ ಕುಮುದ ತುಂಬಿದ ಅಂದI
ಚಕ್ರವಾಕ, ಹಂಸ,ಜಲಪಕ್ಷಿಗಳ ಬೀಡ;II
ಎತ್ತ ನೋಡಿದರು ಹೂಗಳ ಹಾಸಿಗೆ,I
ಮನಮೋಹಕ ದೃಶ್ಯ, ಅಶೋಕವನ ಸಿರಿ ಸಂಪತ್ತು; II
ಇಂದ್ರನ ನಂದನವನ,ಕುಬೇರನ ಚೈತ್ರವನಗಳಂತೆI
ಕಂಗೊಳಿಸುತಿತ್ತು ಅಯೋಧ್ಯೆಯ ಅಶೋಕವನ; II
ಕುಳಿತಿದ್ದ ರಾಮ ಸೀತೆಯೊಂದಿಗೆ ಆಸನದಲ್ಲಿI
ಇಂದ್ರ ಸಚಿಯೊಂದಿಗೆ ಕುಳಿತಂತೆ ಅಶೋಕವನದಲಿ; II
ಕುಡಿಸಿದ ರಾಮ ಸೀತೆಗೆ ಮಿರಾನಾಡಿನ
ಸೋಮರಸ,| ತಿನಿಸಿದ ಹಣ್ಣು ಜಿಂಕೆಮಾಂಸ ಪಕ್ವಾನ; II
ಭಟರು ತಂದು ಬಡಿಸಿದರು ಹಣ್ಣು ಹಂಪಲI
ವಿಭಿನ್ನ ಜಿಂಕೆ ಮಾಂಸಗಳ ಊಟ, ರಾಮ ಸೀತೆಗೆII
ಕಿನ್ನರಿಯರು, ಅಪ್ಸರೆಯರು ಹಾಡುತ, ನುಡಿಸುತ ಸಂಗೀತI
ಕುಣಿದರು ರಾಮ ಸೀತೆಯ ಮನರಂಜನೆಗಾಗಿ; II
ತೃಪ್ತರಾದರು ರಾಮ ಸೀತೆ ಕೇಳಿ ಗಾಯನ,I
ನೋಡಿ ನೃತ್ಯ,ಸೇವಿಸಿ ರಸ ಪಕ್ವಾನಗಳನು; II
ಹೀಗೆ ರಾಮ ಸೀತೆಯೊಂದಿಗೆ ಕಳೆದ ದಿನಗಳನ್ನುI
ಸುಖಭೋಗದಲಿ, ಗತಿಸಿತು ಒಂದು ದಶಕ; II
ಒಂದು ದಿನ ರಾಮ ತನ್ನ ಪೂಜಾ ವಿಧಿಗಳನ್ನುI
ಮುಗಿಸಿ ಬಂದ ಅರಮನೆ ಒಳಾಂಗಣದಲಿ; II
ತನ್ನ ಅತ್ತೆಯರ ಸೇವೆಗಳನ್ನು ಮುಗಿಸಿ ಸೀತೆI
ಶೃಂಗರಿಸಿಕೊಂಡು ಬಂದಳು ರಾಮನ ಬಳಿ; II
ಕಂಡನು ರಾಮ ಸೀತೆಯಲಿ ಗರ್ಭೀಣಿI
ಲಕ್ಷಣಗಳನು, ಸಂತೋಷದಿ ನುಡಿದ ಸೀತೆಗೆ: II
“ ಓ ವೈದೇಹಿ, ಗರ್ಭೀಣಿ ಲಕ್ಷಣ ಕಾಣುತಿವೆ ನಿನ್ನಲಿ, I
ನಿನ್ನ ಯಾವ ಬಯಕೆ ನಾ ಪೂರೈಸಲಿ?” ನಸುನಗುತ ಸೀತೆ II
ಉತ್ತರಿಸಿದಳು ರಾಮನಿಗೆ: “ ಓ ರಾಘವಾ, I
ಮುನಿ ಆಶ್ರದಲಿ ಗಡ್ಡೆ ಹಣ್ಣು ಸೇವಿಸಿ ವಾಸಿಸಬೇಕೆಂಬ ಇಚ್ಚೆ ನನಗೆ, II
ನದಿದಡದಲಿ ಅರಣ್ಯ ಮಧ್ಯೆ ಮುನಿ ಆಶ್ರದಲಿI
ನಿಸರ್ಗ ಮಡಿಲಿ ವಾಸಿಸುಲು ಗರ್ಭೀಣಿ ಬಯಕೆ; II
ಕೇಳಿ ಸೀತೆ ಬಯಕೆ ರಾಮ ಸಂತೋಷದಿ ನುಡಿದ:I
“ಹಾಗೆ ಆಗಲಿ, ನಂಬು ನನ್ನ, ಓ ವೈದೇಹಿ, II
ನಿಶ್ಚಿತವಾಗಿ ನಿನ್ನ ಬಯಕೆಯಂತೆ ಕಳಿಸಿಕೊಡುವೆ ನಿನ್ನ.” I
ಸೀತೆಗೆ ವಚನ ಕೊಟ್ಟ ರಾಮ, ತೆರಳಿದ ಸೀತೆಯೊಂದಿಗೆ. II
ಉತ್ತರಕಾಂಡ

ಆದಿಕವಿ ವಾಲ್ಮೀಕಿಯು (1) ರಾಮನೊಂದಿಗೆ ಸೀತೆಯು ಸರ್ಯೂನದಿ ದಡದ ಅಶೋಕವನದಲ್ಲಿ ಕಳೆದ ದಿನಗಳು, (2) ಅಶೋಕವನದ ವರ್ಣನೆ, (3) ರಾಮ ಸೀತೆಯರ ನಿತ್ಯ ಆಹಾರ ಕ್ರಮ,(4) ಗರ್ಭೀಣಿ ಸ್ತ್ರೀಯ ಬಯಕೆ ಮತ್ತು (2) ಸೀತೆಗೆ ನೀಡಿದ ರಾಮನ ವಚನ, ಈ ವಿಶೇಷ ಅಂಶಗಳ ಬಗ್ಗೆ ಹೀಗೆ ವಿವರಿಸಿರುವರು: ಅಯೋಧ್ಯೆಯ ಸರ್ಯೂನದಿ ದಡದ ಅಶೋಕವನದಲಿ ರಾಮ ಸೀತೆಯೊಂದಿಗೆ ವಿಹರಿಸಲು ನಿತ್ಯ ಬರುತಿದ್ದನು; ವನದಲ್ಲಿ ಶ್ರೀಗಂಧ,ಅಗುರ,ಮಾವು,ದೇವುದಾರ, ಚಂಪಕ, ನಾಗಕೇಸರಿ, ಮಧುಕ, ಪನಸ,ಸರ್ಜ,ಪಾರಿಜಾತ ವೃಕ್ಷಗಳಿದ್ದವು; ಸೊದ್ರ, ನೀಪ, ನಾಗ, ಸಪ್ತಪರ್ಣ, ಮುಕ್ತಕ, ಮಂದಾರ ಕದಲೀ, ವಿಭಿನ್ನ ಹೂಬಳ್ಳಿಗಳು ಅಲ್ಲಿ ಹಬ್ಬಿದ್ದವು; ಪ್ರಿಯಂಗ, ಕದಂಬ, ವಕುಲ, ಜಾಂಬು,ದಾಳಿಂಬ, ಕದಳಿ, ಹೀಗೆ ಅಲ್ಲಿ ವಿಭಿನ್ನ ಹೂ ಫಲಗಳ ಗಿಡಗಳಿದ್ದವು; ಎತ್ತ ನೋಡಿದರೂ ಗಿಡ ಮರಗಳಲ್ಲಿ ಜೇನು ಗೂಡಗಳ ದೃಶ್ಯ, ಮಧುಕರಗಳ ಝೇಂಕಾರ ಕೇಳಿ ಬರುತಿತ್ತು; ಮಾವಿನ ಮರಗಳಲ್ಲಿ ಕೋಗಿಲೆಗಳ ಕೂಹುಕಾರ, ವಿಭಿನ್ನ ಹಕ್ಕಿಗಳ ಇಂಚರ, ಚಿಲಿಪಿಲಿ ಶಬ್ಬಾಲಂಕಾರ ಕೇಳಿ ಬರುತಿತ್ತು; ಮಂದಗಾಳಿ ಪುಷ್ಪ-ಪರಿಮಳ ತುಂಬಿ ಬೀಸುತಿತ್ತು, ಶಾಂತ ನೀರಿನ ಮಡಗಳ ದೃಶ್ಯವು ಮನಬಂಧಿಸುತಿದ್ದವು; ಕಮಲ ಕುಮುದ ತುಂಬಿದ ಅಂದದ, ಚಕ್ರವಾಕ, ಹಂಸ,ಜಲಪಕ್ಷಿಗಳ ಬೀಡವಾಗಿತ್ತು; ಎತ್ತ ನೋಡಿದರು ಹೂಗಳ ಹಾಸಿಗೆ, ಅಶೋಕವನ ಸಿರಿ ಸಂಪತ್ತು, ಮನಮೋಹಕ ದೃಶ್ಯ ಕಾಣುತಿತ್ತು; ಇಂದ್ರನ ನಂದನವನ,ಕುಬೇರನ ಚೈತ್ರವನಗಳಂತೆ ಅಯೋಧ್ಯೆಯ ಅಶೋಕವನವು ಕಂಗೊಳಿಸುತಿತ್ತು; ಒಂದು ದಿನ ಇಂದ್ರ ಸಚಿಯೊಂದಿಗೆ ಕುಳಿತಂತೆ ಅಶೋಕವನದಲಿ ರಾಮನು ಸೀತೆಯೊಂದಿಗೆ ಆಸನದಲ್ಲಿ ಕುಳಿತಿದ್ದನು;

ರಾಮನು ಸೀತೆಗೆ ಮಿರಾನಾಡಿನ(ಇಂದಿನ ಮಿರಟ ಪ್ರದೇಶ) ಸೋಮರಸ ಕುಡಿಸಿದನು, ಹಣ್ಣು ಜಿಂಕೆಮಾಂಸ ಪಕ್ವಾನಗಳನ್ನು ತಿನಿಸಿದನು; ಭಟರು ಹಣ್ಣು ಹಂಪಲ, ವಿಭಿನ್ನ ಜಿಂಕೆಗಳ ಮಾಂಸಗಳ ಊಟ, ರಾಮ ಸೀತೆಗೆ ತಂದು ಬಡಿಸಿದರು; ಕಿನ್ನರಿಯರು, ಅಪ್ಸರೆಯರು ಹಾಡುತ, ಸಂಗೀತ ನುಡಿಸುತ ರಾಮ ಸೀತೆಯ ಮನರಂಜನೆಗಾಗಿ ಕುಣಿದರು; ರಾಮ ಮತ್ತು ಸೀತೆಯು ಗಾಯನ ಕೇಳಿ, ನೃತ್ಯ ನೋಡಿ, ರಸ ಪಕ್ವಾನಗಳನು ಸೇವಿಸಿ ತೃಪ್ತರಾದರು; ಹೀಗೆ ರಾಮನು ಸೀತೆಯೊಂದಿಗೆ ಸುಖಭೋಗದಲಿ ದಿನಗಳನ್ನು ಕಳೆದನು, ಒಂದು ದಶಕ ಗತಿಸಿತು; ಒಂದು ದಿನ ರಾಮನು ತನ್ನ ಪೂಜಾ ವಿಧಿಗಳನ್ನು ಮುಗಿಸಿ ಅರಮನೆ ಒಳಾಂಗಣದಲಿ ಬಂದನು; ತನ್ನ ಅತ್ತೆಯರ ಸೇವೆಗಳನ್ನು ಮುಗಿಸಿ ಸೀತೆಯು ಶೃಂಗರಿಸಿಕೊಂಡು ರಾಮನ ಬಳಿ ಬಂದಳು; ರಾಮನು ಸೀತೆಯಲಿ ಗರ್ಭೀಣಿ ಲಕ್ಷಣಗಳನು ಕಂಡನು ಹಾಗು ಸಂತೋಷದಿಂದ ಸೀತೆಯನ್ನು ಕೇಳಿದನು “ ಓ ವೈದೇಹಿ, ನಿನ್ನಲಿ ಗರ್ಭೀಣಿ ಲಕ್ಷಣ ಕಾಣುತಿವೆ, ನಾನು ನಿನ್ನ ಯಾವ ಬಯಕೆ ಪೂರೈಸಲಿ?” ರಾಮನ ಹಿತ ಮಾತುಗಳನ್ನು ಕೇಳಿದ ಸೀತೆಯು ನಸುನಗುತ ರಾಮನಿಗೆ ಉತ್ತರಿಸಿದಳು “ ಓ ರಾಘವಾ, ನನಗೆ ಮುನಿ ಆಶ್ರದಲಿ ಗಡ್ಡೆ ಹಣ್ಣು ಸೇವಿಸಿ ವಾಸಿಸಬೇಕೆಂಬ ಬಯಕೆ ಆಗುತ್ತಿದೆ, ನದಿದಡದಲಿ ಅರಣ್ಯ ಮಧ್ಯೆ ಮುನಿ ಆಶ್ರಮದಲಿ ನಿಸರ್ಗ ಮಡಿಲಿ ವಾಸಿಸುಲು ಸೀತೆ ತನ್ನ ಗರ್ಭೀಣಿ ಬಯಕೆಯನ್ನು ಪತಿ ರಾಮನಿಗೆ ತಿಳಿಸಿದಳು;

ಸೀತೆಯ ಗರ್ಭಣೀ ಬಯಕೆಯನ್ನು ಕೇಳಿ ರಾಮನು ಸಂತೋಷದಿಂದ “ಓ ವೈದೇಹಿ ಹಾಗೆ ಆಗಲಿ, ನನ್ನ ನಂಬು, ನಿಶ್ಚಿತವಾಗಿ ನಿನ್ನ ಬಯಕೆಯಂತೆ ನಿನ್ನು ಮುನಿ ಆಶ್ರಮಕ್ಕೆ ಕಳಿಸಿಕೊಡುವೆನು” ಎಂದು ಸೀತೆಗೆ ರಾಮನು ವಚನ ಕೊಟ್ಟನು ಹಾಗು ಸೀತೆಯೊಂದಿಗೆ ತೆರಳಿದನು”. ಈ ಘಟನೆ ರಾಮನ ವ್ಯಕ್ತಿತ್ವಕ್ಕೆ ಕವಿ ಹಿಡಿದ ಕೈಗನ್ನಡಿ. ಅಗ್ನಿಪರೀಕ್ಷೆ ಮತ್ತು ಗರ್ಭಾವಸ್ಥೆ ದಿನಗಳನ್ನು ಅರಣ್ಯದ ಮುನಿ ಆಶ್ರಮದಲ್ಲಿ ಕಳೆಯುವ ಈ ಎರಡೂ ನಿರ್ಧಾರಗಳು ಸ್ವತ: ಸೀತೆಯದು ಆದರೆ ಈ ವಾಸ್ತವ ಅರಿಯದ ಜನರು, ವಿದ್ವಾನರು ಈ ಹಿನ್ನೇಲೆಯಲ್ಲಿ ರಾಮನನ್ನೇ ಪ್ರಶ್ನಿಸುತ್ತಾ ಬಂದಿರುವರು.

-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
