
ನೃಗನ ಶಾಪ ಕಥೆ ಹೇಳಿದೆ,ನೀ ಕೇಳಲಿಚ್ಚಿಸಿದರೆI
ಹೇಳುವೆ ನಮ್ಮ ವಂಶಜರ ಕಥೆ ಎಂದ ರಾಮ ಲಕ್ಷ್ಮಣನಿಗೆ; II
“ಅದ್ಭುತ ಕಥೆಗಳನ್ನು ಕೇಳಲು ನಾನೆಂದುI
ಬೇಸರ ಪಡುವದಲ್ಲಿ, ಹೇಳು” ಎಂದ ಲಕ್ಷ್ಮಣ ರಾಮನಿಗೆ;II
ರಾಮ ಇಕ್ಷ್ವಾಕುಕುಲಜರ ಕಥೆ ಪ್ರಾರಂಭಿಸಿದ:I
“ಇಕ್ಷ್ವಾಕುವಿನ ಹನ್ನೆರಡನೆ ಪುತ್ರ ನಿಮಿ, ಸತ್ಯನಿಷ್ಠೆ ರಾಜ,II
ಗೌತಮ ಮುನಿ ಆಶ್ರಮದ ಬಳಿ I
ನಿಮಿ ನಿರ್ಮಿಸಿದ ಸುಂದರ ನಗರ ವೈಜಂತ;II
ವೈಜಂತವು ರಾಜರ್ಷಿ ನಿಮಿಯ ರಾಜಧಾನಿ,I
ಏರ್ಪಡಿಸಿದ ಪಿತೃಗಳ ತೃಪ್ತಿಗಾಗಿ ಬಲಿಯಜ್ಞ;II
ಆಹ್ವಾನಿಸಿದ ಯಜ್ಞಕ್ಕೆ ತಂದೆ ಇಕ್ಷ್ವಾಕು,I
ವಸಿಷ್ಠ ,ಅತ್ರಿ, ಅಂಗಿರ,ಭೃಗು ಋಷಿ ಮುನಿಗಳನ್ನು;II
ವಸಿಷ್ಠರು ನಿಮಿಗೆ ನುಡಿದರು:ʻ ಮಾತಿನಂತೆ ನಾನುI
ಇಂದ್ರನ ಯಜ್ಞ ಮುಗಿಸಿ ಬರುವೆ, ಕಾಯು ಅಲ್ಲಿವರೆಗೆʼ II
ವಸಿಷ್ಠರು ಇಂದ್ರನತ್ತ ಹೋದ ಬಳಿಕI
ಗೌತಮರು ನೆರವೇರಿಸಿದರು ನಿಮಿ ಯಜ್ಞ; II
ಇಂದ್ರನ ಯಜ್ಞ ಮುಗಿಸಿ ವಸಿಷ್ಠರುI
ಯಜ್ಞಕಾರ್ಯ ಮಾಡಲು ಬಂದರು ನಿಮಿ ಬಳಿ;II
ಕಂಡು ಯಜ್ಞಕಾರ್ಯ ಮುಗಿದ ಸ್ಥಳI
ನಿಮಿ ಬಳಿ ಬಂದ, ನಿಮಿ ಗಾಢನಿದ್ರೆಯಲಿದ್ದ, II
ಕೋಪದಿ ವಸಿಷ್ಠರು ನೀಡಿದರು ರಾಜಾ ನಿಮಿಗೆ ಶಾಪ:I
ʻಎನಗೆ ಅಗೌವರ ತೋರಿ ನಿದ್ರೆಯಲ್ಲಿರುವಿ ನೀ,II
ನೀನು ಸದಾ ನಿರ್ಜೀವಿಯಾಗಿ ಬಿದ್ದಕೊಂಡಿರುʼI
ಶಾಪ ಕೇಳಿ ತಕ್ಷಣ ಎಚ್ಚತ್ತ ನಿಮಿ ವಸಿಷ್ಠರಿಗೆ ನುಡಿದ:II
ʻನಾನು ಗಾಢ ನಿದ್ರೆಯಲಿ ಪ್ರಜ್ಞಾಹೀನ I
ಸ್ಥಿತಿಯಲಿದ್ದಾಗ ನೀ ನೀಡಿರುವೆ ಎನಗೆ ಶಾಪ, II
ಕಾರಣ ದೀರ್ಘಕಾಲದವರೆಗೆ ನೀನೂ ನಿನ್ನI
ದೇಹ ಪ್ರಜ್ಞಾಹೀನ ವಾಗಲಿ,ನಿನಗೆ ನೀಡುವೆ ಪ್ರತಿಶಾಪʼ II
ಹೀಗೆ ರಾಜರ್ಷಿ ನಿಮಿ ವ ಬ್ರಹ್ಮರ್ಷಿ ವಸಿಷ್ಠರುI
ಪರಸ್ಪರ ಕೋಪದಿ ಶಾಪಗಳಿಗೆ ಗುರಿಯಾದರು”.II
ಉತ್ತರಕಾಂಡ
ಇಕ್ಷ್ವಾಕು ರಾಜಾ ನಿಮಿ ಮತ್ತು ವಸಿಷ್ಠ ಮನಿಗಳು ಪರಸ್ಪರರ ಶಾಪಗಳಿಗೆ ಬಲಿಯಾದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಲ್ಲದೇ ತದ್ಮೂಲಕ ಆದಿಕವಿಯು ಇಂತಹ ಶಾಪ ಅನಾಹುತಗಳಿಗೆ ಕೋಪ ಕಾರಣವೆಂದು ಹೀಗೆ ಸಮಜಾಯಿಸಿರುವರು: “ನಾನು ನಿನಗೆ ರಾಜಾ ನೃಗನ ಶಾಪ ಕಥೆ ಹೇಳಿದೆನು, ನೀನು ಕೇಳಲಿಚ್ಚಿಸಿದರೆ ನಾನು ಹೇಳುವೆ ನಮ್ಮ ವಂಶಜರ ಕಥೆ” ಎಂದುನು ರಾಮ ಲಕ್ಷ್ಮಣನಿಗೆ ತಿಳಿಸಿದನು; ರಾಮನ ಕೋರಿಕೆಗೆ ತಕ್ಷಣ “ಅದ್ಭುತ ಕಥೆಗಳನ್ನು ಕೇಳಲು ನಾನೆಂದು ಬೇಸರ ಪಡುವದಲ್ಲಿ, ಹೇಳು” ಎಂದು ಲಕ್ಷ್ಮಣನು ರಾಮನಿಗೆ ಹೇಳಿದನು; ರಾಮನು ಇಕ್ಷ್ವಾಕುಕುಲಜರ ಕಥೆಯನ್ನು ಲಕ್ಷ್ಮಣನಿಗೆ ಹೇಳಲು ಪ್ರಾರಂಭಿಸಿದನು “ಸತ್ಯನಿಷ್ಠೆ ರಾಜ ನಿಮಿಯು ಇಕ್ಷ್ವಾಕುವಿನ ಹನ್ನೆರಡನೆ ಪುತ್ರನು, ಅವನು ಗೌತಮ ಮುನಿ ಆಶ್ರಮದ ಬಳಿ ಸುಂದರ ನಗರ ವೈಜಂತಯನ್ನು ನಿರ್ಮಿಸಿದನು; ವೈಜಂತ ನಗರವು ರಾಜರ್ಷಿ ನಿಮಿಯ ರಾಜಧಾನಿಯಾಯಿತು; ರಾಜಾ ನಿಮಿಯು ಪಿತೃಗಳ ತೃಪ್ತಿಗಾಗಿ ಬಲಿಯಜ್ಞವನ್ನು ಏರ್ಪಡಿಸಿದನು ಹಾಗು ತಂದೆ ಇಕ್ಷ್ವಾಕುವನ್ನು ಮತ್ತು ವಸಿಷ್ಠ ,ಅತ್ರಿ, ಅಂಗಿರ,ಭೃಗು ಋಷಿ ಮುನಿಗಳನ್ನು ಯಜ್ಞಕ್ಕೆ ಆಹ್ವಾನಿಸಿದನು, ವಸಿಷ್ಠರು ನಿಮಿಗೆ ನುಡಿದರು ʼ ಕೊಟ್ಟ ಮಾತಿನಂತೆ ನಾನು ಇಂದ್ರನ ಯಜ್ಞ ಮುಗಿಸಿ ನಿಮ್ಮ ಯಜ್ಞಕ್ಕೆ ಬರುವೆನು, ನೀವು ಅಲ್ಲಿವರೆಗೆ ನನ್ನನ್ನು ಕಾಯುʼ ಹೀಗೆ ಹೇಳುತ ವಸಿಷ್ಠರು ಇಂದ್ರನತ್ತ ಹೋದ ಬಳಿಕ ಗೌತಮರು ನಿಮಿಯ ಯಜ್ಞ ನೆರವೇರಿಸಿದರು; ಅತ್ತ ಇಂದ್ರನ ಯಜ್ಞ ಮುಗಿಸಿ ವಸಿಷ್ಠರು ಯಜ್ಞಕಾರ್ಯ ಮಾಡಲು ನಿಮಿಯ ಬಳಿ ಬಂದರು ಆದರೆ ತನ್ನ ಅನುಪಸ್ಥಿತಿಯಲ್ಲಿ ನಿಮಿಯು ಗೌತಮ ಮುನಿಯಿಂದ ಯಜ್ಞಕಾರ್ಯ ಮುಗಿಸಿ ಆ ಸ್ಥಳದಲ್ಲಿ ಗಾಢನಿದ್ರೆಯಲಿದ್ದನು, ಅದನ್ನು ಕಂಡು ಕೋಪದಿಂದ ವಸಿಷ್ಠರು ರಾಜಾ ನಿಮಿಗೆ ಶಾಪ ನೀಡಿದರು ʼನನಗೆ ಅಗೌವರ ತೋರಿ ನೀನು ನಿದ್ರೆಯಲ್ಲಿರುವಿ, ನೀನು ಸದಾ ನಿರ್ಜೀವಿಯಾಗಿ ಬಿದ್ದಕೊಂಡಿರುʼ; ಶಾಪವನ್ನು ಕೇಳಿದ ತಕ್ಷಣ ಎಚ್ಚತ್ತ ರಅಜಾ ನಿಮಿಯು ವಸಿಷ್ಠರಿಗೆ ಉತ್ತರಿಸಿದನು ʻನಾನು ಗಾಢ ನಿದ್ರೆಯಲಿ ಪ್ರಜ್ಞಾಹೀನ ಸ್ಥಿತಿಯಲಿದ್ದಾಗ ನೀನು ನನಗೆ ಶಾಪ ನೀಡಿರುವೆ, ಕಾರಣ ದೀರ್ಘಕಾಲದವರೆಗೆ ನಿನ್ನ ದೇಹ ಪ್ರಜ್ಞಾಹೀನ ವಾಗಲಿ ಎಂದು ನಾನು ನಿನಗೆ ಪ್ರತಿಶಾಪ ನೀಡುವೆನು ʼ ಹೀಗೆ ರಾಜರ್ಷಿ ನಿಮಿ ಮತ್ತು ಬ್ರಹ್ಮರ್ಷಿ ವಸಿಷ್ಠರು ಪರಸ್ಪರ ಕೋಪದಿಂದ ಶಾಪಗಳಿಗೆ ಗುರಿಯಾದರು”.
.. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
