ಜಾನಪದ ತಜ್ಞ ಬಂಡಾಯ ಸಾಹಿತ್ಯದ ಪ್ರಖರ ಚಿಂತಕ ಕಡಕೋಳ ಮಡಿವಾಳಪ್ಪ

By admin

ಭಾರತೀಯ ಸಾಹಿತ್ಯದ ಪರಂಪರೆಯಲ್ಲಿ ಅನೇಕ ಸಂವೇದನೆಗಳಿವೆ. ನವ್ಯ, ನವೋದಯ, ಬಂಢಾಯ ಹೀಗೆ ಹಲವು ಸಾಹಿತ್ಯದ ಪ್ರಕಾರಗಳು ತಮ್ಮೆದೆಯಾದ ಸಂವೇದನೆಗಳನ್ನು ಒಳಗೊಂಡಿವೆ. ಈ ಎಲ್ಲಾ ಸಾಹಿತ್ಯದ ಪ್ರಕಾರಗಳಿಗೆ ತಮ್ಮದೇಯಾದ ಮುನ್ನೊಟವನ್ನು ಕೊಟ್ಟಂತವರು ಕಡಕೋಳ ಮಡಿವಾಳಪ್ಪನವರು.ಈ ಎಲ್ಲಾ ಸಾಹಿತ್ಯದ ಪ್ರಕಾರಗಳಲ್ಲಿ ತೊಡಗಿಸಿಕೊಂಡ ಸಾಹಿತ್ಯದ ಕೃಷಿಕರಿಗೆ ಮಡಿವಾಳಪ್ಪನವರ ಸಾಹಿತ್ಯ ಆಕರ್ಷಿಸಿದ್ದು ಸುಳ್ಳಲ್ಲ, ಮಡಿವಾಳಪ್ಪನವರ ಗಾಢವಾದ ಗ್ರಾಮೀಣ ಜಾನಪದೀಯ ಚಿಂತನೆಗಳು ಅವರ ತತ್ವಪದಗಳಲ್ಲಿ ಮೂಡಿಬಂದಿವೆ. ಸಂಪ್ರದಾಯವಾದಿ ಸಮಾಜವನ್ನು ಅವರಿಸಿದ್ದ ಅನೇಕ ಸಾಮಾಜಿಕ ಜಾಡ್ಯಗಳನ್ನು ತಮ್ಮ ಕಟುವಾದ ತತ್ವಪದಗಳಿಂದ ಖಂಡಿಸಿದ್ದರು. ನವಸಮಾಜದ ಪರಿಕಲ್ಪನೆಯನ್ನು ತಮ್ಮ ತತ್ವಪದಗಳ ಮೂಲಕ ಪ್ರತಿಪಾದಿಸುತ್ತಾರೆ. ಏಣಿ ಶ್ರೇಣಿಗಳನ್ನು ಒಳಗೊಂಡ ಗ್ರಾಮೀಣ ಸಂರಚನೆ ಬಗ್ಗೆ ಅರಿವಿದ್ದ ಮಡಿವಾಳಪ್ಪನವರಿಗೆ ಸಮಾಸಮಾಜದ, ತಾರತಮ್ಯರಹಿತವಾದ ಸ್ಥಾಪನೆಯ ಬಗ್ಗೆ ಒಲವಿತ್ತು. ಹಾಗಾಗಿ ಮಡಿವಾಳಪ್ಪನವರು ತಮ್ಮ ಸಾಹಿತ್ಯದಲ್ಲಿ ಇಂತಹ ಅನೇಕ ಅಂಶಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಮೈಲಿಗೆ, ಮೂಡಿಚೆಟ್ಟು, ಉಳ್ಳವರು ಇಲ್ಲದವರನ್ನು ನೋಡುವ ಕ್ರಮ, ಆತ್ಮಪರಿಶುದ್ಧತೆ, ನೀರಾಡಂಬರ ಬದುಕು ಮುಂತಾದ ವಿಷಯಗಳ ಕುರಿತು ಮಡಿವಾಳಪ್ಪನವರು ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಅವೈಜ್ಞಾನಿಕವಾದ ಆಚರಣೆಗಳನ್ನು ಕಟುವಾಗಿ ವಿರೋಧಿಸಿದ ಮಡಿವಾಳಪ್ಪನವರು ಆಧುನಿಕ ದಾರ್ಶನಿಕರಂತೆ ಕಂಡುಬರುತ್ತಾರೆ. ತಮ್ಮ ಜೀವಿತದ ಅವಧಿಯಲ್ಲೇ ಮಡಿವಾಳಪ್ಪನವರು ನವಸಮಾಜದ ನೀರ್ಮಾಣದ ಬಗ್ಗೆ ಕನಸು ಕಂಡಿದ್ದರು. ತಮ್ಮಉತ್ತಮ ನಡುವಳಿಕೆಯ ಮೂಲಕ ಇತರರಿಗೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಪ್ರೆರೇಪಿಸಿದವರು ಮಡಿವಾಳಪ್ಪನವರು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಹೊಸ ಕಾವ್ಯ ಪರಂಪರೆಯನ್ನು ಹುಟ್ಟುಹಾಕಿ, ಆ ಮೂಲಕ ಜಾನಪದ ಸಾಹಿತ್ಯಕ್ಕೆ ಹೊಸದಾದ ಒಳನೋಟವನ್ನು ತಂದ, ಮಡಿವಾಳಪ್ಪನವರು ಈ ರೀತಿಯಾದ ಸಾಹಿತ್ಯವನ್ನು ಸಂವರ್ಧನೆಗೊಳಿಸಿದವರು. ಸಮಾಜದಲ್ಲಿ ಆಳವಾಗಿ ಬೇರುರಿದ್ದ ಅನೇಕ ಅರ್ಥವಿಲ್ಲದ ಆಚರಣೆಯ ವಿರುದ್ಧ ಆಕ್ರೋಶ ಹೊರಹಾಕಿ ಆಳರಸರ ಗಮನ ಸೆಳದವರು ಇವರು. ಜನಮಾನದ ತುಡಿತಗಳನ್ನು ತಮ್ಮ ಕಾವ್ಯದ ಮೂಲಕ ಹೊರಹಾಕಿ ನ್ಯಾಯಕ್ಕಾಗಿ ಒತ್ತಾಯಿಸಿದವರು. ಹಾಗಾಗಿ ಇವರ ತತ್ವಪದಗಳಲ್ಲಿ ಬಂಢಾಯದ ಅನೇಕ ಅಂಶಗಳು ಕಂಡುಬರುತ್ತವೆ. ಹಾಗಾಗಿ ಇಂದಿನ ಸಾಹಿತ್ಯ ವಲಯವು ಈ ನಿಟ್ಟಿನಲ್ಲಿ ಮಡಿವಾಳಪ್ಪನವರ ಚಿಂತನೆಗಳನ್ನು ತಮ್ಮ ಸಾಹಿತ್ಯದಲ್ಲಿ ಬಳಸಿಕೊಳ್ಳಬಹುದಾಗಿದೆ. ತಮ್ಮ ಬದುಕಿನ್ನುದ್ದಕ್ಕೂ ಹಲವು ರಚನಾತ್ಮಕ ಕಾರ್ಯಗಳನ್ನು ಕೈಗೊಂಡ ಮಡಿವಾಳಪ್ಪನವರು ಅನೇಕ ಅಭಿವೃದ್ಧಿ ಮಾಡುವ ಮನಸ್ಸುಗಳಿಗೆ ಮಾದರಿಯಾಗುತ್ತಾರೆ. ಇನ್ನು ಕಾಲಗರ್ಭದಲ್ಲಿ ಅಡಗಿರುವ ಅನೇಕ ಸತ್ಯಗಳನ್ನು ಶೋದಿಸಿ ಹೊರಸಮಾಜಕ್ಕೆ ತಿಳಿಸಬೇಕಾಗಿದೆ. ಹಾಗಾದಾಗ ಮಾತ್ರ ಇಂತಹ ಮಹಾತ್ಮನ ವಿಚಾರಗಳಿಗೆ ಬೆಲೆಬರುತ್ತದೆ, ಇಂತಹ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ.

-ಡಾ. ಸಾಯಿಬಣ್ಣ ಮುಡಬೂಳ