ಮಕ್ಕಳ ಚಿಂತೆಯಲಿ ದಾರಿ ಕಾಯುತಿದ್ದಳು ಸೀತೆ

By admin


ಮಕ್ಕಳ ಚಿಂತೆಯಲಿ ದಾರಿ ಕಾಯುತಿದ್ದಳು ಸೀತೆ I
ವಾಲ್ಮೀಕಿ ಆಶ್ರಮದಲಿ ತಂದೆ ಮಕ್ಕಳ ಮಿಲನ ನೆನಪಿಸಿಕೊಂಡು; II
ಸ್ವೀಕರಿಸುವನೇ ರಾಮ ತನ್ನ ಪುತ್ರರನು? I
ವಾಲ್ಮೀಕಿ ಮುನಿಗಳು ಮಾಡಿಕೊಡುವರೇ ಮನವರಿಕೆ ರಾಮನಿಗೆ? II
ಮುನಿ ಮಾತೆ ಪದೇ ಪದೇ ಸಮಾದಾನI
ಪಡಿಸುತಿದ್ದಳು ಸೀತೆಗೆ,ಹೇಳಿ ಧೈರ್ಯದ ಮಾತುಗಳಾಡಿ;II
ಅದೇ ಸಂಧರ್ಭದಲಿ ಕೇಳಿ ಬಂತುI
ಕೂಗು ಸೀತೇ, ಸೀತೆ, ಪರಿಚಿತ ದ್ವನಿ;II
ಅಮ್ಮಾ ಅಮ್ಮಾ ಎಂಬ ಕೂಗು ಕೇಳಿI
ಪುಲ್ಲುಕಿತಳಾದಳು ಸೀತೆ ಕೇಳಿ ಮಕ್ಕಳ ದ್ವನಿ; II
ಗಡಬಿಡಿದಿ ಆಶ್ರದ ಹೊರ ಬಂದಳು ಸೀತೆI
ಕಂಡಳು ದೂರದಲಿ ರಾಮ ಬರುವದನು;II
ರಾಮನ ಪಕ್ಕದಲಿ ಕುಶ ಲವರುI
ಅವರ ಮುಂದೆ ಮುಂದೆ ವಾಲ್ಮೀಕಿ ಮುನಿಯಿದ್ದರು; II
ಭರತ, ಶತ್ರುಘ್ನ, ಲಕ್ಷ್ಮಣ ಸಹೋದರರುI
ಕೌಶಲ್ಯ ಸುಮಿತ್ರಾ, ಕೈಕೆಯಿ ತಾಯಂದಿರರು, II
ಸುಗ್ರೀವ, ಹನುಮಾನ ಜಾಂಬವಾನ ವಾನರ ವೀರರು,I
ವಿಭೀಷಣ, ರಾಕ್ಷಸ ಸಖೀಯರು, ರಾಕ್ಷಸ ವೀರರು, II
ವಸಿಷ್ಠ,ಜಾಬಾಲಿ, ಮಾರ್ಕಂಡೆ, ದುರ್ವಾಸI
ವಾಮದೇವ,ಪುರೋಹಿತರು, ಬ್ರಾಹ್ಮಣರು, ಸ್ನೇಹಿತರು, II
ಅಯೋಧ್ಯೆ ಪ್ರಜೆಗಳು, ಸ್ತ್ರೀಯರು ಹಿಂಡು ಹಿಂಡುಗಳಲಿI
ಬರುತಿದ್ದರು ಸೀತೆಯನು ಕೂಗುತ, ಕ್ಷಮೇಯಾಚಿಸುತ; II
ಕಂಡು ಲವ ಕುಶರನ್ನು ಪತಿ ರಾಮನೊಂದಿಗೆI
ಸೀತೆ ಸಂತೋಷದಿ ಪುನೀತಗೊಂಡಳು;II
ಅವಸರದಲಿ ಪತಿ ರಾಮನ ಸೇರಲುI
ಮುಂದಾದಳು ಸೀತೆ, ತಂದೆ ಮಕ್ಕಳನು ನೋಡುತ; II
ನೆನಪಿಸಿ ಕೊಂಡಳು ಭೂಮಾತೆಯನ್ನು, ತನ್ನI
ಬದುಕು ಸಾರ್ಥಕವಾಯಿತೆಂದು ಪ್ರಾರ್ಥಿಸಿದಳು ಸೀತೆ;II
ನೋಡು ನೋಡುತಿದ್ದಂತೆ ಭೂಮಿ ಕಂಪಿಸಿತುI
ಬಾಯತೆರೆದು ಭೂಮಿ ಪಡೆಯಿತು ಸೀತೆಯನು,II
ಭೂಮಿ ಕುಸಿಯುತಿದ್ದಂತೆ ಸೀತೆ ಅದರ ಒಡಲI
ಸೇರಿದಳು,ತಾಯಿಯೊಂದಿಗೆ ಮಗಳು ಹೋದಂತೆ; II
ಭೂ ಒಡಿಲು ಸೀತೆಯನ್ನು ತನ್ನತ್ತ ಪಡೆಯುವI
ದೃಶ್ಯ ಕಂಡು ರಾಮ ಖಿನ್ನತೆಗೆ ಒಳಗಾದ; II
ಕೋಪದಿ ಬಾಣ ಹೂಡಿದ ಭೂಮಾತೆಯತ್ತI
ನುಡಿದ ರಾಮ:” ಓ ಭೂಮಾತೆ, II
ನಿನ್ನ ಮಡಿಲಿನಿಂದ ಬಂದ ಸೀತೆ ಜನಕರಾಜನI
ಸಾಕು ಮಗಳಾಗಿ ಬೆಳೆದು ಎನ್ನ ಪತ್ನಿಯಾದಳು; II
ನನ್ನ ನೆರಳಾಗಿ ಅರಣ್ಯದಲಿ ಹಿಂಬಾಲಿಸಿದ ಸೀತೆ,I
ಕಷ್ಟಗಳನ್ನು ಅನುಭವಿಸಿ ರಾವಣನ ಬಂಧಿಯಾದಳು,II
ಪುನಃ ಹಿಂಪಡೆದು ಅವಳನ್ನು ಹಿಂದುರಿಗಿದೆI
ಅಯೋಧಯೆಗೆ, ಕಳೆದ ಸುಖದ ದಿನಗಳನ್ನು;II
ಆದರೆ ವಿಧಿಯಾಟ, ಲೋಕನಿಂದನೆಗಾಗಿ ನನ್ನಿಂದ ಬೇರ್ಪಟ್ಟ ಸೀತೆ ‌I
ಇನ್ನಾದರೂ ಸಿಗಬಹುದೆಂದುಹಂಬಲಿಸಿದೆ,II
ವಿಧಿಯಾಟ ಬಲ್ಲವರ್ಯಾರು! ಎನ್ನ ಬುದುಕುI
ಸೀತೆಯಿಲ್ಲದೇ ಬರಿದಾಯಿತೆ! ಭೂಗರ್ಭ ಸೀಳುವೆ, II
ಎನ್ನ ಬಾಣ ಹೊಡೆದು, ಹಿಂಪಡೆ ಸೀತೆಯನ್ನು I
ಭೂಮಾತೆಯಿಂದ, ಇಲ್ಲವೇ ಅವಳೊಂದಿಗೆ ಲೀನವಾಗುವೆ” II
ಕೇಳಿ ರಾಮನ ದುಃಖದ ನುಡಿ ವಾಲ್ಮೀಕಿ ಮುನಿI
ಸಂತೈಸಿದರು ರಾಮನ: “ ಓ ರಾಘವಾ, II
ಆಧ್ಯಾತ್ಮ ಜ್ಞಾನಿ ನೀನು,ನಿಯತಿ ಬಲ್ಲವ ನೀನುI
ಎಲ್ಲವೂ ದಿನದ ಬೆಳಕಿನ ಭ್ರಮೆ ನೋಟವಿದ್ದಂತೆ;II
ತೊರೆ ನಿನ್ನ ದುಃಖ, ಮಾಡಿಕೋ ಅತ್ಮವಿಮೋಚನೆI
ನಿರತನಾಗು ನಿನ್ನ ಕರ್ತವ್ಯದಲಿ, ಲೋಕ ಉದ್ಧಾರಕ್ಕಾಗಿ”.II
ಋಷಿ ಮುನಿಗಳು, ತಾಯಂದಿರರು,ಸ್ನೇಹಿತರುI
ಸಂತೈಸಿದರು ರಾಮನ, ದುಃಖ ಮರೆಯಲು; II
ಎಲ್ಲರೂ ಕಳೆದರು ಆ ರಾತ್ರಿ ವಾಲ್ಮೀಕಿ ಆಶ್ರಮದಲಿI
ದುಃಖದಲಿ ನೆನೆಪಿಸುತ ಸೀತೆಯ ವ್ಯಥೆ ಕಥೆ; II
ಮಾರನೇ ದಿನ ಮುಂಜಾವಿನಲ್ಲಿ ಎದ್ದುI
ಸೀತೆ ಸಮಾಧಿಯಾದ ಸ್ಥಳಕ್ಕೆ ಪೂಜೆ ಅರ್ಪಿಸಿದರು,II
ಭೂಮಾತೆಯನ್ನು ಪೂಜಿಸಿ ಕೋರಿದರು ಸೀತೆಯ ಆತ್ಮಕ್ಕೆI
ಚಿರಶಾಂತಿ, ಎಲ್ಲರೂ ಮರಳಿದರು ಅಯೋಧಯೆಗೆ.II
ಉತ್ತರಕಾಂಡ

ಇತ್ತ ವಾಲ್ಮೀಕಿ ಆಶ್ರದಲ್ಲಿ ಸೀತೆಯು ಮಕ್ಕಳ ದಾರಿ ಕಾಯುತ, ರಾಮನು ಅವರನ್ನು ತನ್ನ ಮಕ್ಕಳೆಂದು ಸ್ವೀಕರಿಸುವನೇ ಎಂದು ದುಃಖ ಪಡುತಿದ್ದ, ʻಸೀತೆʼ ಎಂದೂ ಕೂಗಿದ ರಾಮನ ದ್ವನಿ, ʻಮಾತೆʼ ಕೂಗಿದ ಮಕ್ಕಳ ದ್ವನಿ ಕೇಳಿ ಸೀತೆ ಭೂಮಾತೆಯನ್ನು ನೆನೆದು ಹೋರ ಬರುವಾಗ ಭೂಕಂಪನ, ಭೂಕುಸಿತದಿಂದಾಗಿ ಭೂಮಡಿಲು ಸೇರಿದ, ಅದನ್ನು ಕಂಡು ರಾಮ ಪ್ರಲಾಪಿಸದ, ವಾಲ್ಮೀಕಿ ಮುನಿ ರಾಮನಿಗೆ ಸಂತೈಸಿದ, ಎಲ್ಲರೂ ಆ ರಾತ್ರಿ ಆಶ್ರಮದಲ್ಲಿ ಕಳೆದು ಮಾರನೇ ದಿನ ಸೀತೆಗೆ ಪೂಜೆ ಅರ್ಪಿಸಿ ಅಯೋಧಯೆಯತ್ತ ಪಯಣಿಸಿದ ಪ್ರಸಂಗಗಳನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದಲ್ಲದೇ ಆದಿಕವಿ ಕೆಲವು ಮಹತ್ವದ ಅಂಶಗಳನ್ನು ವ್ಯಕ್ತ ಪಡಿಸಿರುವರು (1) ಸೀತೆಯ ಭೂಸಮಾಧಿ (2) ರಾಮನ ಪ್ರಲಾಪ, ಮತ್ತು (3) ವಾಲ್ಮೀಕಿ ಮುನಿಯಿಂದ ರಾಮನ ಸಂತೈಕೆ. ಅಂಶಗಳನ್ನು ಕವಿ ಹೀಗೆ ವಿವರಿಸಿರುವರು: ಇತ್ತ ವಾಲ್ಮೀಕಿ ಆಶ್ರಮದಲಿ ತಂದೆ ಮಕ್ಕಳ ಮಿಲನ ನೆನಪಿಸಿಕೊಂಡು ಮಕ್ಕಳ ಚಿಂತೆಯಲಿ ಸೀತೆ ದಾರಿ ಕಾಯುತಿದ್ದಳು;ರಾಮ ತನ್ನ ಪುತ್ರರನು ಸ್ವೀಕರಿಸುವನೇ? ವಾಲ್ಮೀಕಿ ಮುನಿಗಳು ಮಾಡಿಕೊಡುವರೇ ಮನವರಿಕೆ ರಾಮನಿಗೆ? ಪ್ರಶ್ನೆಗಳು ಸೀತೆಯನ್ನು ಕಾಡಿದವು, ಸೀತೆಗೆ ಧೈರ್ಯದ ಮಾತುಗಳಾಡಿ ಮುನಿ ಮಾತೆ ಪದೇ ಪದೇ ಸಮಾದಾನ ಪಡಿಸುತಿದ್ದಳು; ಅದೇ ಸಂಧರ್ಭದಲಿ ಕೇಳಿ ಬಂತು ಕೂಗು ಸೀತೇ, ಸೀತೆ, ಪರಿಚಿತ ದ್ವನಿ,ಅಮ್ಮಾ ಅಮ್ಮಾ ಎಂಬ ಮಕ್ಕಳ ದ್ವನಿ ಕೂಗು ಕೇಳಿ ಸೀತೆ ಪುಲ್ಲುಕಿತಳಾದಳು; ಸೀತೆ ಗಡಬಿಡಿಯಿಂದ ಆಶ್ರಮದ ಹೊರ ಬಂದಳು ದೂರದಲಿ ರಾಮ ಬರುವದನು ಕಂಡಳು; ರಾಮನ ಪಕ್ಕದಲಿ ಕುಶ ಲವರು, ಅವರ ಮುಂದೆ ಮುಂದೆ ವಾಲ್ಮೀಕಿ ಮುನಿಯಿದ್ದರು; ಭರತ, ಶತ್ರುಘ್ನ, ಲಕ್ಷ್ಮಣ ಸಹೋದರರು ಕೌಶಲ್ಯ ಸುಮಿತ್ರಾ, ಕೈಕೆಯಿ ತಾಯಂದಿರರು, ಸುಗ್ರೀವ, ಹನುಮಾನ ಜಾಂಬವಾನ ವಾನರ ವೀರರು, ವಿಭೀಷಣ, ರಾಕ್ಷಸ ಸಖೀಯರು, ರಾಕ್ಷಸ ವೀರರು, ವಸಿಷ್ಠ,ಜಾಬಾಲಿ, ಮಾರ್ಕಂಡೆ, ದುರ್ವಾಸ, ವಾಮದೇವ,ಪುರೋಹಿತರು, ಬ್ರಾಹ್ಮಣರು, ಸ್ನೇಹಿತರು, ಅಯೋಧ್ಯೆ ಪ್ರಜೆಗಳು, ಸ್ತ್ರೀಯರು ಹಿಂಡು ಹಿಂಡುಗಳಲಿ ಬರುತಿದ್ದರು ಸೀತೆಯನು ಕೂಗುತ, ಕ್ಷಮೇಯಾಚಿಸುತ; ಲವ ಕುಶರನ್ನು ಪತಿ ರಾಮನೊಂದಿಗೆ ಕಂಡು ಸೀತೆ ಸಂತೋಷದಿಂದ ಪುನೀತಗೊಂಡಳು; ತಂದೆ ಮಕ್ಕಳನು ನೋಡುತ ಅವಸರದಲಿ ಪತಿ ರಾಮನ ಸೇರಲು ಸೀತೆ ಮುಂದಾದಳು; ಸೀತೆಯು ಭೂಮಾತೆಯನ್ನು ನೆನಪಿಸಿ ಕೊಂಡಳು, ತನ್ನ ಬದುಕು ಸಾರ್ಥಕವಾಯಿತೆಂದು ಪ್ರಾರ್ಥಿಸಿದಳು; ನೋಡು ನೋಡುತಿದ್ದಂತೆ ಭೂಮಿ ಕಂಪಿಸಿತು, ಬಾಯತೆರೆದು ಭೂಮಿ ಸೀತೆಯನು ಪಡೆಯಿತು; ಭೂಮಿ ಕುಸಿಯುತಿದ್ದಂತೆ ಸೀತೆ ಅದರ ಒಡಲ ಸೇರಿದಳು,ತಾಯಿಯೊಂದಿಗೆ ಮಗಳು ಹೋದಂತೆ; ಭೂ ಒಡಿಲು ಸೀತೆಯನ್ನು ತನ್ನತ್ತ ಪಡೆಯುವ ದೃಶ್ಯ ಕಂಡು ರಾಮ ಖಿನ್ನತೆಗೆ ಒಳಗಾದನು; ಕೋಪದಿಂದ ಭೂಮಾತೆಯತ್ತ ಬಾಣ ಹೂಡಿ ರಾಮ ನುಡಿದನು “ಓ ಭೂಮಾತೆ, ನಿನ್ನ ಮಡಿಲಿನಿಂದ ಬಂದ ಸೀತೆ ಜನಕರಾಜನ ಸಾಕು ಮಗಳಾಗಿ ಬೆಳೆದು ನನ್ನ ಪತ್ನಿಯಾದಳು; ಸೀತೆಯು ನನ್ನ ನೆರಳಾಗಿ ಅರಣ್ಯದಲಿ ಹಿಂಬಾಲಿಸಿದಳು, ಕಷ್ಟಗಳನ್ನು ಅನುಭವಿಸಿ ರಾವಣನ ಬಂಧಿಯಾದಳು, ಪುನಃ ಹಿಂಪಡೆದು ಅವಳನ್ನು ನಾನು ಅಯೋಧಯೆಗೆ ಹಿಂದುರಿಗಿದೆನು, ಸುಖದ ದಿನಗಳನ್ನು ಕಳೆದವು, ಆದರೆ ವಿಧಿಯಾಟ ಬಲ್ಲವರ್ಯಾರು!, ಲೋಕನಿಂದನೆಗಾಗಿ ನನ್ನಿಂದ ಬೇರ್ಪಟ್ಟ ಸೀತೆ ಇನ್ನಾದರೂ ಸಿಗಬಹುದೆಂದು ಹಂಬಲಿಸಿದೆನು, ನನ್ನ ಬುದುಕು ಸೀತೆಯಿಲ್ಲದೇ ಬರಿದಾಯಿತೆ! ನನ್ನ ಬಾಣಗಳನ್ನು ಹೊಡೆದು ಭೂಗರ್ಭ ಸೀಳಿ, ಭೂಮಾತೆಯಿಂದ ಸೀತೆಯನ್ನು ಹಿಂಪಡೆಯುವೆನು ಇಲ್ಲವೇ ಅವಳೊಂದಿಗೆ ಲೀನವಾಗುವೆನು” ರಾಮನ ದುಃಖದ ನುಡಿಗಳನ್ನು ಕೇಳಿದ ವಾಲ್ಮೀಕಿ ಮುನಿಯು ಅವನನ್ನು ಸಂತೈಸಿದರು “ ಓ ರಾಘವಾ, ನೀನು ಆಧ್ಯಾತ್ಮ ಜ್ಞಾನಿ, ನಿಯತಿ ಬಲ್ಲವನು, ಎಲ್ಲವೂ ದಿನದ ಬೆಳಕಿನ ಭ್ರಮೆ ನೋಟವಿದ್ದಂತೆ; ತೊರೆ ನಿನ್ನ ದುಃಖ, ಮಾಡಿಕೋ ಅತ್ಮವಿಮೋಚನೆ ನಿರತನಾಗು ನಿನ್ನ ಕರ್ತವ್ಯದಲಿ, ಲೋಕ ಉದ್ಧಾರಕ್ಕಾಗಿ”. ಋಷಿ ಮುನಿಗಳು, ತಾಯಂದಿರರು, ಸ್ನೇಹಿತರು ದುಃಖ ಮರೆಯಲು ರಾಮನನ್ನು ಸಂತೈಸಿದರು; ಎಲ್ಲರೂ ಆ ರಾತ್ರಿ ದುಃಖದಲಿ ನೆನೆಪಿಸುತ ಸೀತೆಯ ವ್ಯಥೆ ಕಥೆಯನು ವಾಲ್ಮೀಕಿ ಆಶ್ರಮದಲಿ ಕಳೆದರು; ಮಾರನೇ ದಿನ ಮುಂಜಾವಿನಲ್ಲಿ ಎದ್ದು ಸೀತೆ ಸಮಾಧಿಯಾದ ಸ್ಥಳಕ್ಕೆ ಪೂಜೆ ಅರ್ಪಿಸಿದರು, ಭೂಮಾತೆಯನ್ನು ಪೂಜಿಸಿ ಸೀತೆಯ ಆತ್ಮಕ್ಕೆ ಚಿರಶಾಂತಿ ಕೋರಿದರು, ಅಲ್ಲಿಂದ ಎಲ್ಲರೂ ಅಯೋಧಯೆಗೆ ಮರಳಿದರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.