ಕನ್ನಡ ಗಾಯನ ಲೋಕಕ್ಕೆ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ಸರಿಗಮಪ

By admin

ಕರುನಾಡು ಬಹುಮುಖಿ ಪ್ರತಿಭೆಗಳ ತವರೂರು.ಇಲ್ಲಿನ ವಿಭಿನ್ನ ಪ್ರತಿಭೆಗಳು ಜಗದ ಗಮನ ತಮ್ಮತ್ತ ಸೆಳೆದ ಅದ್ವಿತೀಯ ಸಾಧನಾ ಜೀವಿಗಳಾಗಿದ್ದಾರೆ.ತಮ್ಮ ಅನನ್ಯ ಪ್ರಭುದ್ಧತೆ ಮುಖೇನ ಪ್ರತಿಭಾ ಪರ್ವವನ್ನೇ ಕ್ರಮಿಸಿದ ಅಪ್ರತಿಮ ಸಾಧನ ಪಯಣಿಗರಿವರು. ಇಂತಹ ಮತ್ತೊಂದು ಸಾಧನಾ ಲೋಕವೆಂದರೆ ಅದು ಖಂಡಿತವಾಗಲು ಅತಿಷಿಯೋಕ್ತಿ ಮೀರಿ ಬರುವ ಪದ ಅದುವೆ ಸರಿಗಮಪ ಎಂಬ ಸಂಗೀತ ಸ್ವರ ಬಿತ್ತನೆಯ ತಾಣ. ನಾಡಿನ ಉದ್ದಗಲದ ಎಲೆ ಮರೆಯ ತೆರೆ ವಂಚಿತ ಸಂಗೀತ ಸಾಮ್ರಾಜ್ಯದ ಗಾಯನ ಕುಡಿಗಳನ್ನು ತೆರೆಮೇಲೆ ತಂದು ಅವರ ಅಮೋಘವಾದ ಸ್ವರನಾದವನ್ನು ನಾಡಿಗೆ ಉಣಬಡಿಸುವ ಅದ್ಬುತವಾದ ಸಂಗೀತದ ಪಾಠ ಶಾಲೆಯಾದ ಈ ಕಾರ್ಯಕ್ರಮ ಜನಮನ ಸೆಳೆದದ್ದಾಗಿದೆ. ಕಲಾವಿದನ ಕುಂಚದಲ್ಲಿ ಅರಳುವ ಸುಂದರ ಚಿತ್ರಕಲೆಯಂತೆ ಇಲ್ಲಿ ಸಂಗೀತದ ಮೇರು ಪರ್ವತಗಳಾದ, ಸಂಗೀತದ ಅನಭಿಶಿಕ್ತ ದೊರೆಗಳ ಸಮ್ಮುಖದಲ್ಲಿ ತಮ್ಮ ಕಲೆಯನ್ನು ಪ್ರಸ್ತುತಪಡಿಸಿ ಸೂಕ್ತವಾದ ಸಲಹೆಗಳನ್ನು ಸ್ವೀಕರಿಸಿ ಗಾಯನ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳುವ ಮಹಾ ಅವಕಾಶವನ್ನು ಈ ಕಾರ್ಯಕ್ರಮ ಕೊಡುವದರಲ್ಲಿ ಯಾವುದೆ ಸಂದೇಹಗಳಿಲ್ಲ. ಅವಕಾಶ ವಂಚಿತರ ಆಶಾಕಿರಣವಾಗಿ ಗೋಚರಿಸುತ್ತಿರುವ ಈ ವೇದಿಕೆ ಸಂಗೀತದ ಪರಮೋಚ್ಚ ಅವಕಾಶದ ತಾಣವಾಗಿದೆ. ಬಡ ಪ್ರತಿಭೆಗಳ ಪಾಲಿನ ಪೋಷಣಾ ಮಾಧ್ಯಮವಾಗಿ ಸಂಗೀತದ ಮರು ಹುಟ್ಟು ನೀಡುವ ಸರಸ್ವತಿ ಮಂದಿರವಾಗಿದೆ. ಗಾಯನದ ಸುಪ್ತ ಅರಿವನ್ನು ಹೊಂದಿರುವವರ ಪ್ರತಿಭಾ ವಿಕಾಸವನ್ನು ಹೊರಚೆಲ್ಲುವ ಮಹಾನ್ ಸಂಗೀತದ ಬೆಳಕು ಸರಿಗಮಪ ಕಾರ್ಯಕ್ರಮವಾಗಿದೆ. ಈ ವಿನುತನ ಕಾರ್ಯಕ್ರಮ ನಾಡಿನ ಬಹು ಜನರ ಅಚ್ಚು ಮೆಚ್ಚಿನ ಕಾರ್ಯಕ್ರಮವಾಗಿ ಅವರ ಹೃದಯವನ್ನು ತಟ್ಟುತಿದೆ. ಭಿನ್ನ ಪರಿಕಲ್ಪನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಸದ್ದಿಲ್ಲದೆ ಎರಡು ದಶಕಗಳನ್ನು ಪೂರೈಸುವ ಹಂತಕ್ಕೆ ಬಂದು ತಲುಪಿದೆಯೆಂದರೆ ಈ ಮಾದರಿಯನ್ನು ಶ್ಲಾಘಿಸಲೆಬೇಕು. ಮನುಷ್ಯನಲ್ಲಿ ಅನಂತವಾದ ಸಂವೇದನೆಯನ್ನು ಹುಟ್ಟುಹಾಕುವ ಹಲವು ಭಾವಗಳಲ್ಲಿ ಸಂಗೀತವು ಒಂದು. ಸಂಗೀತ ಒಂದು ಗಾಯನದ ಪ್ರಖರ ಮಾಧ್ಯಮವಾಗಿ ಭಾವಿಸದೆ ಅದೊಂದು ಹೃದಯವನ್ನು ಸಂತೈಸುವ ಭಾವ ತರಂಗವಾಗಿದೆ. ಭಾವನೆಗಳನ್ನು ಅರಳಿಸುವ, ಸರ್ವವನ್ನು ಪ್ರೀತಿಸುವ ಮನೋಲ್ಲಾಸವನ್ನು ಇಮ್ಮಡಿಗೊಳಿಸುವ ಸುಂದರ ಕ್ಷಣಗಳನ್ನು ಹರಡಿಸಬಲ್ಲ ಭಾವ ಸ್ವರವಾಗಿದೆ. ಇಂತಹ ಮಾದುರ್ಯದ ಇಂಪನ್ನು ಹೊರಸುಸಬಲ್ಲ ಸಂಗೀತ ಒಂದು ಅದ್ಬುತ ಶಕ್ತಿಯೆ ಹೌದು. ದುಃಖ ದುಮ್ಮಾನ, ನೋವು ಹತಾಶೆಗಳಿಗೆ ಚಿಕಿತ್ಸಕ ರೂಪದಲ್ಲಿ ಸಂಗೀತ ವೈದ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸಿ ನೊಂದ ಮನಸ್ಸುಗಳನ್ನು ಪ್ರಫುಲ್ಲಗೊಳಿಸುತ್ತದೆ. ಇಂತಹ ಬಹುಮುಖಿ ಆಶಯಗಳನ್ನು ತನ್ನ ಒಡಲಲ್ಲಿ ಪೋಷಿಸಿಕೊಂಡಿರುವ ಸಂಗೀತ ಒಂದು ಅಚ್ಚರಿಯ ಪ್ರಪಂಚವಾಗಿದೆ. ಈ ರೀತಿಯ ವೈವಿಧ್ಯಮಯ ಗುಣ ಹೊಂದಿರುವ ಸಂಗೀತವನ್ನು ಮತ್ತು ಎಲೆಮರೆಯ ಕಾಯಿಯಂತಿರುವ ಸಂಗೀತದ ಪ್ರತಿಭೆಗಳನ್ನು ನಾಡಿನೇದುರು ಅನಾವರಣಗೊಳಿಸುತ್ತಿರುವ ಕನ್ನಡ ಮಾಧ್ಯಮ ಲೋಕದ ಜನಮುಖಿ ವಾಹಿನಿಯಾದ ಜಿ ಕನ್ನಡಕ್ಕೆ ಧನ್ಯವಾದಗಳನ್ನು ಸಲ್ಲಿಸಲಲೆಬೇಕು. ಈ ದೆಸೆಯ ಸಂಗೀತದ ಹೊಣೆಗಾರಿಕೆಯನ್ನು ಹೊತ್ತು ಸಂಗೀತದ ಸಾಧಕರನ್ನು ಅನ್ವೇಷಿಸಿ ಹೊರ ಜಗತ್ತಿಗೆ ಸಮರ್ಪಿಸುವದು ಬಹು ಸವಾಲಿನ ಕೆಲಸ. ಇಂತಹ ಸವಾಲನ್ನು ಮೂಡಿಗೇರಿಸಿಕೊಂಡು 19 ಸಂವತ್ಸರಗಳನ್ನು ದಾಟಿದ್ದು ಈ ಕಾರ್ಯಕ್ರಮದ ಸಾಧನೆಯಾಗಿದೆ. ಈ ಕಾರ್ಯಕ್ರಮದ ಸಂವರ್ಧನೆಗೆ ತಮ್ಮ ಅಮೂಲ್ಯ ಶ್ರಮವನ್ನು ವಿನಿಯೋಗಿಸುತ್ತಿರುವ ದೇಶದ ಹೆಸರಾಂತ ಗೀತ ರಚನೆಕಾರರು, ಸಂಗೀತ ನಿರ್ದೇಶಕರಾದ ಡಾ. ಹಂಸಲೇಖ ಸರ್, ಸಮಕಾಲಿನ ಗಾಯನ ಲೋಕದ ಅಚ್ಚರಿ, ಗಾಯನ ತಪಶ್ವಿ ಶ್ರೀ ವಿಜಯ ಪ್ರಕಾಶ ಸರ್, ದೇಶದ ಹೆಸರಾಂತ ಸೂಕ್ಷ್ಮ ಸಂವೇದನೆಯ ಸಂಗೀತ ನಿರ್ದೇಶಕರಾದ ಶ್ರೀ ಅರ್ಜುನ್ ಜನ್ಯ ಸರ್ ಮತ್ತು ಕಾರ್ಯಕ್ರಮದ ನಿರೂಪಣೆ ಹೊತ್ತು ಸುಲಲಿತವಾದ ಭಾಷೆಯ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ನೀಡುತ್ತಿರುವ ಅನುಶ್ರೀ ಮೇಡಂರವರಿಗೆ ಧನ್ಯವಾದಗಳು. ಇದೊಂದು ಕೇವಲ ಕಾರ್ಯಕ್ರಮವಲ್ಲ. ಸಂಗೀತದ ಕಾಯಕ ಜೀವಿಗಳ ಉನ್ನತಿಕರಣಕ್ಕಾಗಿ ನಿರ್ಮಾಣವಾದ ಮಹಾವೇದಿಕೆ. ಈ ವೇದಿಕೆಯಲ್ಲಿ ಇನ್ನು ಮುಂದೆಯೂ ಸಂಗೀತದಲ್ಲಿ ತಲ್ಲಿನರಾದ ಮುಖ್ಯವಾಹಿನಿಯಿಂದ ದುರವುಳಿದ ಸಂಗೀತದ ಸಾಧಕರನ್ನು ಕರೆತಂದು ಅವರ ಭವಿಷ್ಯವನ್ನು ನಿರ್ಮಿಸುವಂತಹ ಜನಮುಖಿ ಕಾರ್ಯವನ್ನು ನಿರಂತರವಾಗಿ ಮಾಡಲಿ ಎನ್ನುವದೆ ಬಹು ಜನರ ಆಸೆಯಾಗಿದೆ .

ಡಾ. ಸಾಯಿಬಣ್ಣ ಮುಡಬೂಳ