ವಾಲ್ಮೀಕಿ ಮುನಿಗಳು ಸ್ವಾಗತಿಸಿದರು ಬ್ರಹ್ಮಲೋಕದಲ್ಲಿ ರಾಮನ

By admin


ವಾಲ್ಮೀಕಿ ಮುನಿಗಳು ಸ್ವಾಗತಿಸಿದರು ಬ್ರಹ್ಮಲೋಕದಲಿ ರಾಮನ, I
ವಹಿಸಿ ಮೊಮ್ಮಗಳು ಕುಶಜಾಳಿಗೆ ಪವಿತ್ರಕಾರ್ಯ;II
ರಾಮನ ಅಂತಿಮ ಪಯಣದ ಗಾಥೆಯನು ಪೂರ್ಣಗೊಳಿಸಿI
ರಾಮಾಯಣ ಚರಿತೆ ಪೂರ್ಣಗೊಳಿಸಿದಳು ಕುಶಜಾ; II
ಮಾನವನಾಗಿ ಅವತರಿಸಿ ಬಂದ ಬ್ರಹ್ಮ ಸತ್ವ ಸದ್ಗುಣಿ, I
ಧರ್ಮಿಷ್ಠ, ಏಕ ಪತ್ನಿವ್ರತವನ್ನು ಪಾಲಿಸಿದ ರಾಮ; II
ದಶರಥ ಪುತ್ರನಾಗಿ ಜನಿಸಿ ತಂದೆ ತಾಯಿಗಳI
ವಚನ ಪಾಲಿಸಿ ಪುರುಷೋತ್ಮನಾದ ರಾಮ; II
ಭೂಮಿಯಲ್ಲಿ ದೊರೆತ ಸೀತೆ ಜನಕನ ಸಾಕುಮಗಳಾಗಿI
ರಾಮನ ಪತ್ನಿಯಾಗಿ, ನೆರಳಾಗಿ ಬದುಕಿದಳು ರಾಮನ;II
ಹುಟ್ಟಿನಿಂದ ಭೂ ಸಮಾಧಿವರೆಗೂ ಕಷ್ಟಗಳನ್ನೇI
ಸಹಿಸಿದ ಸೀತೆ ಮಾದರಿಯಾದಳು ಮನುಕುಲಕ್ಕೆ; II
ಸದಾ ಸೀತೆಯೊಂದಿಗೆ ಇರ ಬಯಸಿದ ರಾಮನಿಗೆ I
ದೈವ ರಾಮನಿಂದ ಸೀತೆಯನು ದೂರಟ್ಟಿತು ಅಂತ್ಯದಲಿ; II
ದುಷ್ಟರನ್ನು ಸಂಹರಿಸಿ ಶಿಷ್ಠರಿಗೆ ಆಡಳಿತI
ನೀಡಿದ ರಾಮ ಮಾದರಿಯಾದ ಲೋಕಕ್ಕೆ; II
ತನ್ನ ಆಡಳಿತದಲಿ ಧರ್ಮಕಾರ್ಯಗಳನ್ನೆ ಮಾಡಿದI
ರಾಮ,ಕೊಟ್ಟ ಕಲ್ಯಾಣರಾಜ್ಯ ಪ್ರಜೆಗಳಿಗೆ; II
ಕೊಲೆ, ಸುಲಿಗೆ, ಅಮಾನವೀಯ, ಅಹಿತಕರ ಘಟನೆ,I
ವಿಕೋಪಗಳು ಇಲ್ಲದ, ರಾಮರಾಜ್ಯ ನೀಡಿದ ರಾಮ; II
ವಸುಂಧರೆ ಸದಾ ಪುನೀತಳಾಗಿದ್ದಳು ಋತುಗಳನ್ನುI
ಪಡೆಯುತ, ನಿಯತಿ ಕಾಲಧರ್ಮದಂತೆ; II
ಮೇಲು ಕೀಳು, ವರ್ಣಭೇಧವಿಲ್ಲದ ಮಾದರಿಯಾಯಿತು I
ರಾಮರಾಜ್ಯ ವರ್ತಮಾನ ಭವಿಷ್ಯಕ್ಕೆ ;II
ವಾಲ್ಮೀಕಿ ವಿರಚಿತ ರಾಮನ ಚರಿತೆಯನ್ನು I
ಹಾಡುವವರು ಕೇಳುವವರು ಧನ್ಯರಾಗುವರು; II
ಪ್ರಚೇತಸವಂಶಜ ವ್ಯಾಧರಾಜ, ರಾಜರ್ಷಿ ವಾಲ್ಮೀಕಿI
ಹಾಡಿದ ಲೋಕಗೀತೆ ರಾಮಾಯಣ, ಲೋಕ ಮಾದರಿ.II
ಉತ್ತರಕಾಂಡ

ಬ್ರಹ್ಮಲೋಕದಲಿ ರಾಮನನ್ನು ವಾಲ್ಮೀಕಿ ಮುನಿಗಳು ಸ್ವಾಗತಿಸಿದರು, ರಾಮಾಯಣ ಪೂರ್ಣಗೊಳಿಸುವ ಪವಿತ್ರಕಾರ್ಯವನ್ನು ವಾಲ್ಮೀಕಿಮುನಿಗಳು ತನ್ನ ಮೊಮ್ಮಗಳು ಕುಶಜಾಳಿಗೆ ವಹಿಸಿದ್ದರು; ಕುಶಜಾಳು ರಾಮನ ಅಂತಿಮ ಪಯಣದ ಗಾಥೆಯನು ಪೂರ್ಣಗೊಳಿಸಿ ರಾಮಾಯಣ ಚರಿತೆ ಪೂರ್ಣಗೊಳಿಸಿದಳು; ಮಾನವನಾಗಿ ಅವತರಿಸಿ ಬಂದ ಬ್ರಹ್ಮ ಸತ್ವ ಸದ್ಗುಣಿ, ಧರ್ಮಿಷ್ಠ, ಏಕ ಪತ್ನಿವ್ರತವನ್ನು ಪಾಲಿಸಿದ ರಾಮನು ದಶರಥ ಪುತ್ರನಾಗಿ ಜನಿಸಿ ತಂದೆ ತಾಯಿಗಳ ವಚನ ಪಾಲಿಸಿ ಪುರುಷೋತ್ಮನಾದನು; ಭೂಮಿಯಲ್ಲಿ ದೊರೆತ ಸೀತೆ ಜನಕನ ಸಾಕುಮಗಳಾಗಿ ರಾಮನ ಪತ್ನಿಯಾಗಿ, ರಾಮನ ನೆರಳಾಗಿ ಬದುಕಿದಳು; ಹುಟ್ಟಿನಿಂದ ಭೂಸಮಾಧಿವರೆಗೂ ಕಷ್ಟಗಳನ್ನೇ ಸಹಿಸಿದ ಸೀತೆಯು ಮನುಕುಲಕ್ಕೆ ಮಾದರಿಯಾದಳು; ಸದಾ ಸೀತೆಯೊಂದಿಗೆ ಇರ ಬಯಸಿದ ರಾಮನಿಗೆ ದೈವವು ಅಂತ್ಯದಲಿ ರಾಮನಿಂದ ಸೀತೆಯನು ದೂರಟ್ಟಿತು; ದುಷ್ಟರನ್ನು ಸಂಹರಿಸಿ ಶಿಷ್ಠರಿಗೆ ಆಡಳಿತ ನೀಡಿದ ರಾಮನು ಲೋಕಕ್ಕೆ ಮಾದರಿಯಾದನು; ತನ್ನ ಆಡಳಿತದಲಿ ಧರ್ಮಕಾರ್ಯಗಳನ್ನೆ ಮಾಡಿದ ರಾಮನು ಪ್ರಜೆಗಳಿಗೆ ಕಲ್ಯಾಣರಾಜ್ಯವನ್ನು,ಕೊಟ್ಟನು; ಕೊಲೆ, ಸುಲಿಗೆ, ಅಮಾನವೀಯ, ಅಹಿತಕರ ಘಟನೆ, ವಿಕೋಪಗಳು ಇಲ್ಲದ ರಾಮರಾಜ್ಯವನ್ನು ರಾಮನು ನೀಡಿದನು;ವಸುಂಧರೆ ಸದಾ ನಿಯತಿಯ ಕಾಲಧರ್ಮದಂತೆ ಋತುಗಳನ್ನು ಪಡೆಯುತ ಪುನೀತಳಾಗಿದ್ದಳು; ಮೇಲು ಕೀಳು, ವರ್ಣಭೇಧವಿಲ್ಲದ ರಾಮರಾಜ್ಯ ವರ್ತಮಾನವು ಭವಿಷ್ಯಕ್ಕೆ ಮಾದರಿಯಾಯಿತು; ವಾಲ್ಮೀಕಿ ವಿರಚಿತ ರಾಮನ ಚರಿತೆಯನ್ನು ಹಾಡುವವರು ಕೇಳುವವರು ಧನ್ಯರಾಗುವರು; ಪ್ರಚೇತಸ ವಂಶಜ ವ್ಯಾಧರಾಜ, ರಾಜರ್ಷಿ ವಾಲ್ಮೀಕಿ ಹಾಡಿದ ಲೋಕಗೀತೆ ರಾಮಾಯಣ, ಲೋಕ ಮಾದರಿ.
ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಪೂರ್ಣಗೊಂಡಿತು.
ಕಳೆದ 979 ದಿನಗಳಿಂದ ನಾನು ಹಂಚಿಕೊಂಡ ಮೂಲ ವಾಲ್ಮೀಕಿ ರಾಮಾಯಣ ಮತ್ತು ಅದರ ಮೂಲಕ ಮಹಾಜ್ಞಾನಿ, ವಿಜ್ಞಾನಿ ಆದಿಕವಿ ವಾಲ್ಮೀಕಿಯ ಚಿಂತನೆ, ತತ್ವ ಆಲೋಚನೆಗಳನ್ನು ತಾವುಗಳು ಓದಿದ್ದಕ್ಕಾಗಿ, ಹರಿಸಿದ್ದಕ್ಕಾಗಿ, ಲೈಕ ಟಿಪ್ಪಣಿಗಳನ್ನು ನೀಡಿದಕ್ಕಾಗಿ ಮತ್ತು ನನ್ನೊಂದಿಗೆ ದೂರವಾಣಿಯಲ್ಲಿ ಸಂವಾದನೆ ಮಾಡಿದಕ್ಕಾಗಿ ಧನ್ಯವಾದಳು, ಅಯೋಧ್ಯೆಯಲ್ಲಿ ರಾಮ ಮಂದಿರ ಉಧ್ಘಾಟನೆ ಸಂದರ್ಭದಲ್ಲಿ ಕೊನೆಗೊಂಡ ನನ್ನ ವಾಲ್ಮೀಕಿ ಚಿಂತನ ಲಹರಿ ಸರಣಿ ಮತ್ತು 979 ದಿನಗಳಿಂದ ದಿನಾಲೂ ಮುಂಜಾವಿನಲ್ಲಿ ಅವುಗಳನ್ನು ನಾನು ಬಿತ್ತರಿಸುತ್ತಿರುವ ಘಟನೆಗಳು ಕಾಕತಾಳಿಯಂತೆ ಕಂಡುಬಂವು. ಮಹರ್ಷಿ ವಾಲ್ಮೀಕಿ ಹೇಳಿದಂತೆ “ಎಲ್ಲವೂ ದೈವದಾಟ” ದೈವವು ಈ ಕಾರ್ಯವನ್ನು ನನ್ನಿಂದ ಮಾಡಿಸಿತು ಎಂಬ ನಂಬಿಕೆ ನನಗಿದೆ. ಮೂಲ ವಾಲ್ಮೀಕಿ ರಾಮಾಯಣಕ್ಕೂ ಮತ್ತು ಉಳಿದೆಲ್ಲ ರಾಮಾಯಣ ಆವೃತ್ತಿಗಳಿಗೂ ಬಹಳ ವ್ಯತ್ಯಾಸವಿದೆ, ಆದರೆ ನಮಗೆ ಬೇಕಾದದ್ದು ತ್ರೇತಾಯುಗದ ಮತ್ತು ಸರ್ವಕಾಲಿಕ ಆಚಾರ ವಿಚಾರ, ವ್ಯವಸ್ಥೆಗಳು, ಮಾನಸಿಕ ಸ್ಥಿತಿ, ಸಾರ್ವತ್ರಿಕ ಸಿದ್ಧಾಂತ , ಇತ್ಯಾದಿಗಳ ಸತ್ಯ ದರ್ಶನ ಮತ್ತು ಆಲೋಚನೆಗಳು, ಈ ನಿಟ್ಟಿನಲ್ಲಿ ಕುವೆಂಪು ಅವರ ರಾಮಾಯಣದರ್ಶನಂ ಕೃತಿಯು ಹೊರತಲ್ಲ. ಈ ವಿಷಯದಲ್ಲಿ ನನ್ನೊಂದಿಗೆ ಆಲೋಚನೆ ಸಂವಾದ ಬಯಿಸುವವರು ನನ್ನನ್ನು 8971171477 ಕ್ಕೆ ಸಂಪರ್ಕಿಸ ಬಹುದು.
ಸರ್ವರಿಗೂ ಶ್ರೀರಾಮನು ನೆಮ್ಮದಿ ಮತ್ತು ಶಾಂತಿ ದಯಪಾಲಿಸಲಿ.
ಸಾಧ್ಯವಾದಷ್ಟು ಮೂಲ ವಾಲ್ಮೀಕಿ ರಾಮಾಯಣ ಓದಿರಿ.
ಧನ್ಯವಾದಗಳು
ಜೈ ಆದಿಗುರು ವಾಲ್ಮೀಕಿ.
ಜೈ ಸೀತಾರಾಮ.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.