
ಕರುನಾಡು ಕಂಡ ಅಪರೂಪದ ಸಾಹಿತಿಗಳಲ್ಲಿ ಶ್ರೀ ಜಿ. ಎಸ್. ಶಿವರುದ್ರಪ್ಪನವರು ಕೂಡಾ ಅಗ್ರಗಣ್ಯರು. ಕರುನಾಡಿನ ಅನೇಕ ಸತ್ಯಗಳಿಗೆ ಇವರ ಸಮಗ್ರ ಸಾಹಿತ್ಯ ಮಿಡಿದಿದೆ. ಸಾಹಿತ್ಯವನ್ನು ಗೀತೆಗಳಿಗೆ ಒಗ್ಗಿಸಿಕೊಳ್ಳುವ ಹಾಗೆ, ಬದುಕಿನ ಭಾವಗಳನ್ನು ತುಂಬಿ, ಸಮಾಜಕ್ಕೆ ಮುಖಾಮುಖಿಯಾಗುವ ಅಪರೂಪದ ಸಾಹಿತ್ಯ ಸಂಪತ್ತು ಇವರದು ಎಂದರೆ ಅತಿಷಿಯೋಕ್ತಿಯಾಗಲಿಕ್ಕಿಲ್ಲ. ಮನುಷ್ಯನ ಅಗಣಿತವಾದ ಅಂತರಂಗದ ತೋಳಲಾಟಗಳಿಗೆ ವೇದಿಕೆಯನ್ನು ಒದಗಿಸಿ ಪ್ರಕಟಿಸುವಲ್ಲಿ ಇವರ ಕಾವ್ಯ ಪ್ರಕಾರಗಳು ಸಾರ್ಥಕತೆಯನ್ನು ಪಡೆದಿವೆ.ಕಾವ್ಯಪ್ರಕಾರಗಳು ಕೇವಲ ಭಾವ ಪ್ರಕಟಿತ ಪದ್ಧತಿಗೆ ಅಂಟಿಕೊಳ್ಳದೆ, ಜೀವನ ದರ್ಶನದ, ವೈಚಾರಿಕತೆ ಪ್ರಸರಣದ, ಶುಷ್ಕತೆ ಮನೋಭಾವವನ್ನು ವಿರಳಗೊಳಿಸುವ, ಸದಾಶಯದ ಭಾವವನ್ನು ಬಹುವಾಗಿಸುವ ನಿಟ್ಟಿನಲ್ಲಿ ತಯಾರುಗೊಳ್ಳಬೇಕಾದ ಅಗತ್ಯತೆಯಿದೆ. ಇಂತಹ ಸಾಹಿತ್ಯದ ತಯಾರಕರಲ್ಲಿ ವಿನುತನವಾಗಿ ಕಂಡು ಬರುವವರೆ ಶ್ರೀ ಜಿ. ಎಸ್ ಶಿವರುದ್ರಪ್ಪನವರು. ಇವರಿಂದ ಅನೇಕ ಸಮಾಜಮುಖಿ, ಜೀವಮುಖಿ ಕಾವ್ಯಗಳು ನಿರ್ಮಾಣಗೊಂಡರೂ, ಎಲ್ಲಾ ಹುಡುಕಿದೆ ಇಲ್ಲದ ದೇವರು ಎನ್ನುವ ತಾತ್ವಿಕವಾದ, ಜೀವನ್ಮುಖಿ ದರ್ಶನದ ಕವಿತೆ ಕೂಡಾ ಒಂದು. ದೇವರು ಎನ್ನುವ ಮೂರ್ತ ರೂಪ ಮತ್ತು ನೆಲೆಗೊಂಡ ದೇವಾಲಯಗಳ ಕುರಿತು ಮುಖ್ಯವಾಗಿ ಹಲವು ಸಂವಾದಗಳಿಗೆ ತೆರೆದುಕೊಳ್ಳುತ್ತದೆ. ಮೂರ್ತ ಸ್ವರೂಪದ ದೇವರ ಕುರಿತು,ಮನುಷ್ಯರ ಭಕ್ತಿ ಭಾವಗಳ ನೆಲೆಯನ್ನು ಭಿನ್ನ ಪರಿಧಿಯಿಂದ ಗ್ರಹಿಸುವಂತ ಪ್ರಯತ್ನ ಶ್ರೀ ಜಿ. ಎಸ್ ಶಿವರುದ್ರಪ್ಪನವರು ಮಾಡಿರುವದು ಸ್ಪಷ್ಟವಾಗುತ್ತದೆ.ದೇವರು ಧರ್ಮವನ್ನು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ನಿರೂಪಿಸುವ ಪ್ರಸ್ತುತ ಕವನವು ದೇವರು ಎನ್ನುವ ಅಗೋಚರ, ಅದಮ್ಯ ಶಕ್ತಿಯನ್ನು ಕಲ್ಲು ಮಣ್ಣಿನ ಕಟ್ಟಡದೊಳಗೆ ಬಂಧಿಸಿ,ಮೂರ್ತರೂಪದ ಕೆತ್ತನೆಯ ಆಕಾರವನ್ನು ದೇವರೆನ್ನವ ಭಾವಕ್ಕೂ ಮಿಗಿಲಾಗಿ ಪ್ರೀತಿ ಪ್ರೇಮ, ಮಮತೆ, ಅನುಕಂಪವೆಂಬ ಜೀವನ್ಮುಖಿ ಭಾವಗಳನ್ನು ಮಾನವ ಸಮೂಹ ಅಂತರ್ಗತವಾಗಿಸಿಕೊಂಡು ಆ ಮೂಲಕ ದೈವಿಕ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ ಜರೂರು ಇದೆ ಎನ್ನುವ ವಾದವನ್ನು ಈ ಕಾವ್ಯದ ಮೂಲಕ ಜಿ. ಎಸ್ ಶಿವರುದ್ರಪ್ಪನವರು ಹೊರಹಾಕುತ್ತಾರೆ.ಮನುಷ್ಯನ ಸುಖ ದುಃಖಗಳು ನಾವು ಮಾಡುವ ಕ್ರೀಯೆಗಳನ್ನಾದರಿಸಿರುತ್ತವೆ ಹೊರತು ಅವು ದಿಡಿರಣೆ ಸಂಭವಿಸುವದಿಲ್ಲ. ಸುಖ, ವೈಭವ ಸಂತೋಷಗಳನ್ನು ಎಲ್ಲೋ ಇರುವದಿಲ್ಲ ನಮ್ಮ ಪರಿಶುದ್ಧ ಭಾವ ಮತ್ತು ಕ್ರೀಯೆಗಳ ಮುಖೇನ ಅವುಗಳನ್ನು ಎದುರುಗೊಳ್ಳಬಹುದು ಎಂಬ ಪ್ರಗತಿಪರ ಆಶಯವು ಈ ಕಾವ್ಯದ ಸಾಬೀತಾಗುತ್ತದೆ. ಮನುಷ್ಯನ ಸಹಜ ಗುಣಗಳಾದ ಪ್ರೀತಿ, ಪ್ರೇಮ, ವಿಶ್ವಾಸ, ಅಂತಕರಣ, ಸಹೃದಯತೆ ಎಂಬ ಮೌಲಿಕ ಗುಣಗಳನ್ನು ಯಾವ ಕಾರಣಕ್ಕೂ ಸ್ಟಿತ್ಯಂತರಗೊಳಿಸಕೊಳ್ಳದೆ, ಅವುಗಳನ್ನು ಅನುಭವಿಸಿ ಜೀವನದ ಸ್ವಾದವನ್ನು ಅನುಭವಿಸಬೇಕೆನ್ನುವ ಮಾರ್ಮಿಕವಾದ ತಿಳಿಸತ್ಯವನ್ನು ಶ್ರೀ ಜಿ. ಎಸ್ ಶಿವರುದ್ರಪ್ಪನವರ ಈ ಕವನದ ಮುಖಾಂತರ ಪ್ರತಿಪಾದಿಸುತ್ತಾರೆ. ಮನುಷ್ಯನ ಕಲುಷಿತ ಭಾವಗಳ ಮೂಲಕ ಸ್ವಾಸ್ಥ ಬದುಕು ಹದಗೆಟ್ಟು ಸಂಬಂಧಗಳು ಹಳಸುತ್ತಿವೆ. ಪರಿಣಾಮವಾಗಿ ಮನುಷ್ಯ ಮನುಷ್ಯರ ಹೊಂದಾಣಿಕೆ ಎಂಬುದು ಬಹು ದೊಡ್ಡ ಸವಾಲಾಗಿ ಮಾರ್ಪಟ್ಟು ಇವುರುಗಳು ಮಧ್ಯೆ ಬಹುದೊಡ್ಡ ಕಂದಕಗಳು ನಿರ್ಮಾಣವಾಗುತ್ತಿರುವದು ಕಟು ಸತ್ಯವಾಗಿದೆ. ಎಲ್ಲವನ್ನು ಆಲಂಗಿಸಿಕೊಳ್ಳುವ ಮನಸ್ಥಿತಿಯನ್ನು ರೂಡಿಸಿಕೊಳ್ಳುವತ್ತ ನಮ್ಮ ಬದುಕನ್ನು ತಿರುಗಿಸಿಕೊಳ್ಳುವ ಅವಶ್ಯಕತೆಯನ್ನು ಈ ಕವಿತೆ ಒತ್ತಿ ಹೇಳುತ್ತದೆ. ಕ್ಷಣಿಕವಾದ ಈ ಜೀವನದಲ್ಲಿ ಶಾಶ್ವತತೆಯನ್ನು ಬರಮಾಡಿಕೊಳ್ಳುವ ಮಿಥ್ಯೆದ ಮಾರ್ಗದಲ್ಲಿ ಸಂಚರಿಸದೆ, ವಾಸ್ತವಿಕವಾದ ನೆಲೆಯಲ್ಲಿ ಪ್ರೀತಿ, ಪ್ರೇಮ,ವಿಶ್ವಾಸ, ಪರೋಪಕಾರದಂತಹ ಗುಣಗಳನ್ನು ಸಮ್ಮಿಲನಗೊಳಿಸಿಕೊಂಡು ಮಾದರಿ ಸಮಾಜವನ್ನು ನೆಲೆಗೊಳಿಸಿಕೊಳ್ಳುವಲ್ಲಿ ಈ ತರಹದ ಭಾವಗಳು ಖಂಡಿತವಾಗಿಯೂ ಸಹಾಯ ಮಾಡುತ್ತವೆ.ಅಹಂಕಾರ,ದ್ವೇಷ, ಮತ್ಸರವೆಂಬ ವ್ಯಕ್ತಿತ್ವನಾಶಕ ಗುಣಗಳನ್ನು ತೊರೆದು ಸರ್ವರನ್ನು ಸಮಾನವಾಗಿ ಕಂಡು ಅವರ ನೋವಿಗೆ ಸ್ಪಂದಿಸುವಂತಹ ಮಾರ್ಮಿಕವಾದ ಮನಸ್ಥಿತಿಯನ್ನು ರೂಡಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗಿ ಬದುಕುವ ಭಾವವನ್ನು ಉತ್ತೇಜಸುವಲ್ಲಿ ಈ ಕವಿತೆ ಸರ್ವರನ್ನು ಚಿಂತನೆಗೆ ದುಡುತ್ತದೆ. ಇಂತಹ ಉಪಯೋಗಕರವಾದ ಸಾಹಿತ್ಯದ ಮುಖೇನ ಸಮಕಾಲಿನ ಸಮಾಜಕ್ಕೆ ಮೌಲ್ಯ, ಆದರ್ಶಗಳನ್ನು ದಾಟಿಸಿದ ಸಾಹಿತಿ, ಕವಿ, ಚಿಂತಕ ಶ್ರೀ ಜಿ. ಎಸ್ ಶಿವರುದ್ರಪ್ಪನವರ ಈ ಕವಿತೆ ದೇವರು ದೈವದ ಪ್ರಲಾಪನೆಗಿಂತ ಮಾನವೀಯತೆ ತುಂಬಿದ ಸದ್ಗುಣ ದೊಡ್ಡದು. ಈ ತರಹದ ವ್ಯಕ್ತಿತ್ವ ದೇವರ ಸ್ವರೂಪತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುವ ಮಾರ್ಮಿಕವಾದ ಚಿಂತನೆಯನ್ನು ಸಮಾಜದೆದುರು ತೆರೆದಿಟ್ಟಿದ್ದಾರೆ.
-ಡಾ. ಸಾಯಿಬಣ್ಣ ಮುಡಬೂಳ
