
ಲೇಖಕ-ಡಾ.ಸಾಯಿಬಣ್ಣ ಮುಡಬೂಳ
ಈ ವರ್ಷದ ಮೊದಲ ರಾಷ್ಟಿಯ ಹಬ್ಬದ ಸಂಭ್ರಮದ ಆಚರಣೆಯು ಸಂದರ್ಭವು ಮನಸ್ಸಿಗೆ ಮುದ ನೀಡುವಂತದ್ದು. ಮೊದಲಿಗೆ ಗಣರಾಜ್ಯೋತ್ಸವ ಎಂದರೇನು? ಎಂದು ತಿಳಿಯುವದು ಅತ್ಯಾವಶ್ಯಕವಾಗಿದೆ. ಗಣ ಎಂದರೆ ಗುಂಪು, ಭಾಗ ಎಂದು ಉತ್ಸವ ಎಂದರೆ ಆಚರಣೆ ಎಂದು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಸಂವಿಧಾನ ಜಾರಿಯಾದ ಈ ಸುಸಂದರ್ಭವನ್ನು ಗಣರಾಜ್ಯೋತ್ಸವ ಎಂದು ಆಚರಿಸುತ್ತೇವೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯಕ್ಕೂ ಮುಂಚೆ, ಸಂವಿಧಾನ ಜಾರಿಯಾಗುವದಕ್ಕೂ ಮೊದಲು ಪ್ರಜಾಪ್ರಭುತ್ವದ, ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ಆಡಳಿತ ನಡೆಸುವ ಸರ್ಕಾರಗಳಿರಲಿಲ್ಲ. ಬದಲಾಗಿ 600ಕ್ಕೂ ಮಿಗಿಲಾದಂತಹ ದೇಶಿಯ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳಿಗೆ ಆಯಾ ಅರಸರು ಆಳ್ವಿಕೆ ಮಾಡುತ್ತಿದ್ದರು. ಈ ಸಂಧರ್ಭದಲ್ಲಿ ಆಳ್ವಿಕೆ ನಡೆಸಿದಂತಹ ಅರಸರುಗಳಿಂದ ಪ್ರಜೆಗಳು ಹಲವಾರು ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದರು. ಸಮಸ್ಯೆಗಳ ಸುಳಿಯಲ್ಲಿ ಜೀವಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ಜನರಿಗೆ ಸ್ಪಂದಿಸುವ ವಿನೂತನ ವ್ಯವಸ್ಥೆಯನ್ನು ಜನ ಬಯಸುತ್ತಿದ್ದರು.ಅರಸೊತ್ತಿಗೆಯ ಬಂಧನದಿಂದ ಬಿಡುಗಡೆಯ ಸುಸಂಧರ್ಭಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಜನರ ಆಶೋತ್ತರಗಳ ಇಡೇರಿಸಿಕೊಳ್ಳಲು ಸಂಜೀವಿನಿಯಾಗಿ ಜಾರಿಯಾದದ್ದೆ ಸಂವಿಧಾನ. ಡಾ. ಬಿ. ಆರ್ ಅಂಬೇಡ್ಕರರವರ ಕನಸಿನ ಕೂಸಾಗಿ ರೂಪುಗೊಂಡ ಸಂವಿಧಾನ ಸಮಾಜದ ಏರಿಳಿತಗಳನ್ನು ಹೋಗಲಾಡಿಸುವಲ್ಲಿ ಗಣನೀಯವಾದ ಪಾತ್ರವಹಿಸಿದ್ದಂತು ಸತ್ಯ. ಈ ಸಂವಿಧಾನವು ಸಮಾಜದ ದೀನರ, ದಲಿತರ, ಅಸಹಾಯಕರ, ತುಳಿತಕ್ಕೊಳಗಾದವರ, ಬಡವರ ರಕ್ಷಾಕವಚವಾಗಿ ಕಾರ್ಯನಿರ್ವಹಿಸುವದರ ಮೂಲಕ ಅವಕಾಶ ವಂಚಿತ ಸಮುದಾಯಗಳನ್ನು ಮುನ್ನೆಲೆಗೆ ತಂದಿದೆ. ಇಂತಹ ವಿಶೇಷವಾದ, ಅರ್ಥಪೂರ್ಣವಾದ ಸಂವಿಧಾನವನ್ನು ವಿಶ್ವದೆಲ್ಲೆಡೆ ನೋಡಲು ಕಾಣಸಿಗುವದಿಲ್ಲ. ಇಂತಹ ಸಂವಿಧಾನ ಜಾರಿಯಾದ ಈ ಗಳಿಗೆ, ಕ್ಷಣವನ್ನು ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುವದರ ಮೂಲಕ ಪ್ರತಿ ವರ್ಷ ಸ್ಮರಿಸಿಕೊಳ್ಳುತ್ತೇವೆ. ಬಹುಜಾತಿ, ಬಹುಧರ್ಮ, ಬಹುಭಾಷಾ, ಬಹುಸಂಸ್ಕೃತಿಯ ಈ ನೆಲದಲ್ಲಿ ಸಂವಿಧಾನವು ಈ ವೈರುದ್ಯಗಳನ್ನು ಮೀರಿಸಿ ಜನರಲ್ಲಿ ಪ್ರೀತಿ, ವಿಶ್ವಾಸ, ಬಾತೃತ್ವ, ಸಹೋದರತೆಯನ್ನು ತುಂಬುವದರ ಮೂಲಕ ರಾಷ್ಟ್ರದ ಪ್ರಗತಿಯನ್ನು ಬಯಸುತ್ತಿರುವದು ನಿಜಕ್ಕೂ ಶ್ಲಾಘನಿಯವಾದದ್ದು. ಸಂವಿಧಾನದ ಆಶೋತ್ತರಗಳನ್ನು ಇಡೆರಿಸುವದರ ಮುಖಾಂತರ ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕ್ರೀಯಾಶೀಲರಾಗಿ ಕೈಜೋಡಿಸಬೇಕು. ಹೀಗೆ ರಾಷ್ಟ್ರೀಯ ಹಬ್ಬಗಳ ಮಹತ್ವವು ಪ್ರಮುಖವಾದದ್ದು. ಇವುಗಳನ್ನು ತಿಳಿದು ಬದುಕು ಅರ್ಥಪೂರ್ಣಮಾಡಿಕೊಳ್ಳುವದು ಬಹಳ ಪ್ರಮುಖವಾದದ್ದಾಗಿದೆ ಭಾರತವು ನೂರಾರು ಜಾತಿ,ಮತಗಳನ್ನು ಹತ್ತಾರು ಧರ್ಮಗಳನ್ನು ಹೊಂದಿ, ಹಲವು ಭಿನ್ನಾವಾದ ಆಚಾರ, ವಿಚಾರ, ಆಚರಣೆಗಳನ್ನು ಒಳಗೊಂಡ ಬಹು ಸಂಸ್ಕೃತಿಯನ್ನು ಆರಾಧಿಸುವ ರಾಷ್ಟ್ರವಾದರೂ, ವೇಷ ಭೂಷಣ, ಭಾಷೆ ಭಾವಗಳು ಬಗೆ ಬಗೆಯಾದರು ದೇಶದ ಅಖಂಡತೆಯ ದೃಷ್ಟಿಯಿಂದ ಎಲ್ಲರೂ ಒಂದೆ ಎನ್ನುವ ಬಾತೃತ್ವ ಭಾವನೆ ಮೂಲಕ ಸದಾಶಯವನ್ನು ಬಿತ್ತುವ ನಮ್ಮ ಸಂವಿಧಾನ ಅನೇಕ ಮೌಲಿಕತೆಗಳ ಆಗರವಾಗಿದೆ. ಪರಸ್ಪರರಲ್ಲಿ ಪ್ರೀತಿ,ವಿಶ್ವಾಸ ನಂಬಿಕೆಯೆoಬ ಸಂಬಂಧಗಳ ನೆಲೆಯನ್ನು ಪ್ರತಿಪಾದಿಸುವ ವಿಶೇಷ ತಾತ್ವಿಕ ಅನುಸದಾoನ ಮೆಳಯಿಸಿಕೊಂಡ ಬ್ರಹತ್ ನೆಲಮೂಲದ ಜೀವಪರವಾದ ಪ್ರಜಾಭಿಮುಖಿಯಾದ ಜನಸಂವೇದನೆಯ ನಿರೂಪಿಸುವ,ಒಳಗೊಳ್ಳುವ ಕಾನೂನು ಕಟ್ಟಳೆಗಳ ಮಹಾಸಂಚಿಕೆಯಾದ ಸಂವಿಧಾನ ಕೇವಲ ಪದಗುಚ್ಛಗಳ ಪದಕೋಶವಲ್ಲ, ಸಂವಿಧಾನ ಈ ದೇಶದ ಹೃದಯವಾಗಿದೆ, ರಾಷ್ಟ್ರದ ಜನರ ಆಶೋತ್ತರಗಳನ್ನು ಈಡೇರಿಸುವ ಆಶಾಕಿರಣವಾಗಿದೆ. ಪ್ರಪಂಚದಲ್ಲಿ ಬೆರಲ್ಲೂ ಕಾಣಸಿಗದ ಕೇವಲ ಕಾನೂನು ಕಟ್ಟಳೆಗಳನ್ನಷ್ಟೇತನ್ನಲ್ಲಿ ಗರ್ಭಿಕರಿಸಿಕೊಳ್ಳದೆ, ಜನರ ದುಃಖ ದುಮ್ಮಾನಗಳಿಗೆ ಪರಿಹಾರದ ಸಾಧನಗಳನ್ನು ತನ್ನಲ್ಲಿ ನೆಲೆಗೊಳಿಸಿಕೊಂಡಿದೆ. ಹಾಗಾಗಿ ಸಂವಿಧಾನ ನಮಗೆ ಗೌರವ, ರಕ್ಷಣೆ, ಆಜ್ಞಾದಾರಕವಾಗಿಯೂ ಗೋಚರವಾಗುತ್ತದೆ. ಇಂತಹ ಹಲವು ಆದರ್ಶದ ಗುಣವಿಶೇಷತೆಗಳನ್ನುಹೊಂದಿದ ಸಂವಿಧಾನವನ್ನು ಮತ್ತಷ್ಟು ಗಟ್ಟಿಗೊಳಿಸಿ, ಅದರ ಆಶಯಗಳನ್ನು ಸಾಕಾರಗೊಳಿಸುವತ್ತ ಸಮಾಜ ಬಹುವಾಗಿ ತೆರೆದುಕೊಳ್ಳುವ ಅಗತ್ಯತೆಯಿದೆ. ಇಂತಹ ಪ್ರಭುದ್ಧತೆಯ ಸರ್ವರಲ್ಲಿ ಮೂಡಲಿ ಎನ್ನುವದೆ ಬಹುಜನರ ಅಭಿಮತವಾಗಿದೆ.
-ಡಾ. ಸಾಯಿಬಣ್ಣ ಮುಡಬೂಳ
