
ನಾಡು ಕಂಡ ಅಪರೂಪದ ತತ್ವಪದಕಾರರಲ್ಲಿ ಮಡಿವಾಳಪ್ಪನವರು ಅಗ್ರಗಣ್ಯರಾಗಿ ಗುರುತಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕ ಭಾಗದ ಅನೇಕ ಸಮಸ್ಯೆಗಳ ಮೇಲೆ ಮಡಿವಾಳಪ್ಪನವರ ಸಾಹಿತ್ಯ ಬೆಳಕು ಚೆಲ್ಲಿದೆ.ಈ ಭಾಗದ ಜ್ವಲಂತ ಬಿಕ್ಕಟ್ಟುಗಳನ್ನು ವೈಚಾರಿಕವಾಗಿ ಪರಿಶೋದಿಸಿ, ವಿಶ್ಲೇಷಿಸಿ ಅಂತಹ ಸ್ಥಿತಿಯನ್ನು ತಮ್ಮ ತತ್ವಪದಗಳಲ್ಲಿ ವಸ್ತುನಿಷ್ಟವಾಗಿ ದಾಖಲಿಸಿದ್ದಾರೆ. ಇವರ ತತ್ವಪದಗಳು ಈ ಪ್ರದೇಶದ ಸಮಸ್ಯೆಗಳ ಪ್ರತಿನಿದಿತ್ವವನ್ನು ಹೊಂದಿವೆ, ಧ್ವನಿಯಿಲ್ಲದವರ, ದಮನಿತರ, ಅಶಕ್ತರ, ಸಂವೇದನೆಗಳನ್ನು ಇವರ ಸಮಗ್ರ ಸಾಹಿತ್ಯ ಒಳಗೊಂಡಿರುವದು ಸ್ಪಷ್ಟವಾಗುತ್ತದೆ.ಸಮಾಜದಲ್ಲಿ ಡಾಳಾಗಿ ಹರಡಿದ್ದ ಅನೇಕ ಮಿತ್ಯಗಳನ್ನು ಬದಿಗೆ ಸರಿಸಿದ್ದಾರೆ, ದೇವರು, ಧರ್ಮ ಮತ್ತು ಭಕ್ತರ ನಡುವೆ ಕಂದಕ ಸೃಷ್ಟಿಸಿದ್ದ ವರ್ಗವನ್ನು ಕಡುವಾಗಿ ವಿರೋಧಿಸಿ ಅವರ ಧಾರ್ಮಿಕ ಯಜಮಾನ್ಯ ಮನೋಸ್ಥಿತಿಯನ್ನು ಬಟಾಬಯಲುಗೊಳಿಸಿದ್ದಾರೆ.ಮಡಿವಾಳಪ್ಪನವರು ಸಾಂಸ್ಕೃತಿಕ ಯಜಮಾನ್ಯ ವಿರೋಧಿಸಿ, ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಗಳನ್ನು ಸಮಾಜದಿಂದ ಹೊರದಬ್ಬುವ ಕೆಲಸವನ್ನು ನೀರಂತರವಾಗಿ ಮಾಡಿರುವದು ತಿಳಿದುಬರುತ್ತದೆ. ಸಮಾಜವನ್ನು ಆವರಿಸಿದ್ದ ಹಲವು ಸಮಸ್ಯೆಗಳನ್ನು ವಿವಿಧ ದೃಷ್ಟಿಕೋನಗಳ ಮೂಲಕ ಪರಿಶೀಲಿಸಿ ಆ ಸಮಸ್ಯೆಗಳ ಮುಕ್ತಿಗಾಗಿ ತಮ್ಮ ವಿಚಾರಧಾರೆಗಳನ್ನು ವಿನಿಯೋಗಿಸುತ್ತಿದ್ದುದ್ದು ಗ್ರಹಿಸಬಹುದಾಗಿದೆ. ಸಮಾಜವನ್ನು ಚಲನಾಶೀಲಾ, ಬದಲಾವಣೆಯತ್ತ ಕೊಂಡೋಯ್ಯುವ ಮುನ್ನೊಟವನ್ನು ಮಡಿವಾಳಪ್ಪನವರು ಹೊಂದಿದ್ದರು. ಇವರ ತತ್ವಪದಗಳಲ್ಲಿ ಸಾಮಾಜಿಕ ಕಳಕಳಿ, ಜಾಗೃತಿ, ಸ್ಥಿರತೆ, ತಾರತಮ್ಯಮುಕ್ತತೆ ಮುಂತಾದ ಮೌಲಿಕ ಚಿಂತನೆಗಳು ಬಹುವಾಗಿ ಆವರಿಸಿರುವದು ಕಂಡುಬರುತ್ತದೆ. 21ನೇಯ ಶತಮಾನದ ಇಂತಹ ದಿನಗಳಲ್ಲಿ ಜಾಗತಿಕರಣದ ಪರಿಣಾಮವಾಗಿ ಹಲವು ವಿನೂತನವಾದ ಅನ್ವಯಿಕ ಸಮಸ್ಯೆಗಳು ಸಮಾಜದಲ್ಲಿ ಆಶ್ರಯಿಸಿರುವದು ಸಾರ್ವತ್ರಿಕವಾದ ಸತ್ಯವಾಗಿದೆ, ಮಡಿವಾಳಪ್ಪನವರ ಕಾಲದಲ್ಲಿದ್ದ ಸಮಸ್ಯೆಗಳು ಈಗ ರುಪಾoತರ ಹೊಂದಿ ಹೊಸ ಸ್ವರೂಪವನ್ನು ಪಡೆದು ನಮ್ಮ ಮುಂದಿರುವದು ಗಮನಿಸಬೇಕಾದ ಸಂಗತಿಯಾಗಿದೆ. ಹೀಗೆ ಸಮಾಜ ವನ್ನು ನೀರಂತರವಾಗಿ ಬಾದಿಸುತ್ತಿರುವ ಇಂತಹ ಸಮಸ್ಯೆಗಳನ್ನು ಸಮಾಜದಿಂದ ಹೊರದಬ್ಬಲು ಮಡಿವಾಳಪ್ಪನವರ ಚಿಂತನೆಗಳು ಸಹಕಾರಿಯಾಗಿವೆ. ಇವರು ಚಿಂತನೆಗಳು ಖಂಡಿತವಾಗಿಯೂ ಸಮಾಸಮಾಜವನ್ನು ನೀರ್ಮಿಸಲು ನೆರವು ನೀಡುತ್ತವೆ ಹೀಗೆ ಮಡಿವಾಳಪ್ಪನವರ ಸಾಹಿತ್ಯ ಹಲವು ಚಿಂತನೆಗಳ ಅಕ್ಷಯ ಪಾತ್ರೆಯಾಗಿದೆ. ಪ್ರತಿ ಸಮಸ್ಯೆಗೂ ಪರಿಹಾರವನ್ನು ಸೂಚಿಸುವ ಅಮೂಲ್ಯ ಜ್ಞಾನಭಂಢಾರ ಮಡಿವಾಳಪ್ಪನವರ ಸಾಹಿತ್ಯವಾಗಿದೆ. ಇಂತಹ ಅಮೂಲ್ಯ ಕೊಡುಗೆಗಳು ಸಮಾಜದ ಮುನ್ನೆಲೆಗೆ ಬರಬೇಕಾಗಿದೆ, ಇವರ ಅಗಣಿತ ಕೊಡುಗೆಗಳನ್ನು ಸಮಾಜ ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಈ ಮಹನೀಯರ ಕುರಿತು ಹೆಚ್ಚು ಹೆಚ್ಚು ಚರ್ಚೆ, ಸಂವಾದಗಳು ನಡೆಯಬೇಕಾಗಿದೆ. ಆ ಮೂಲಕ ಸಮಾಜ ಇದರ ಪ್ರಯೋಜನ ಪಡೆಯಬೇಕಾಗಿದೆ.. ಬಹುಮುಖಿ ನೆಲೆಗಳಿಂದ ಇನ್ನು ಮಡಿವಾಳಪ್ಪನವರನ್ನು ಹುಡುಕಬೇಕಾದ ತುರ್ತಿದೆ. ಕೇವಲ ಸಾಹಿತ್ಯ, ಜಾನಪದಿಯ, ಪರಿಧಿಯಿಂದ ನೋಡದೆ ಬಹುಮುಖಿ ನೆಲೆಯಿಂದ ನೋಡಬೇಕಾದ ಜರೂರು ಇದೆ ಎಂದು ನನ್ನ ಭಾವನೆ. ಬಹುಮುಖ್ಯವಾಗಿ ಮಡಿವಾಳಪ್ಪನವರನ್ನು ಸಮಾಜ ವಿಜ್ಞಾನ ಅಧ್ಯಯನ ಶಿಸ್ತುಗಳ ಕಡೆ ಕರೆ ತಂದ ಸಾಮಾಜಿಕ ಚಿಂತಕರ ಸಾಲಿನಲ್ಲಿ ಅವರನ್ನು ನೋಡಬೇಕಾಗಿದೆ ಎನ್ನುವದೆ ನನ್ನ ನಿಚ್ಚಳವಾದ ಅಭಿಮತವಾಗಿದೆ. ಸಮಕಾಲಿನ ಅನೇಕ ಸಮಸ್ಯೆಗಳಿಗೆ ಅವರ ಚಿಂತನೆಗಳಲ್ಲಿ ಪರಿಹಾರವಿದೆ. ಈ ಎಲ್ಲಾ ಚೌಕಟ್ಟಿನಲ್ಲಿ ಮಡಿವಾಳಪ್ಪನವರ ಕೊಡುಗೆಗಳು ಚರ್ಚೆಯಾಗಬೇಕಿದೆ, ಸಂವಾದಗಳು ನಡೆಯಬೇಕಿದೆ. ಆ ಮೂಲಕ ಮಡಿವಾಳಪ್ಪನವರನ್ನು ಇನ್ನು ಜಾಗತಿಕವಾಗಿ ಪ್ರಜ್ವಲಿಸುವಂತೆ ಮಾಡಬೇಕಿದೆ ಎನ್ನುವದೆ ನನ್ನ ಮನೋಭಾಲಾಷೆ.
ಲೇಖಕರು:- ಡಾ. ಸಾಯಿಬಣ್ಣ ಮೂಡಬುಳ
