
ಖ್ಯಾತ ಲೇಖಕರು:-ಮುಕ್ಕಣ್ಣ ಕರಿಗಾರ
ದುರ್ಗಾದೇವಿಯ ಮಹಿಷಮರ್ದಿನಿ ಲೀಲೆಯು ವಿಶಿಷ್ಟತತ್ತ್ವಸಂಕೇತವಾದ ಮಹತ್ವದ ಅವತಾರ ಪ್ರಸಂಗವು.ಮಹಾಬಲಿಷ್ಠನೂ ದುರಂಹಕಾರಿಯೂ ಆದ ಮಹಿಷನ ಉಪಟಳದಿಂದ ಬೇಸತ್ತ ದೇವತೆಗಳು ಇಂದ್ರನ ನೇತೃತ್ವದಲ್ಲಿ ತ್ರಿಮೂರ್ತಿಗಳ ಮೊರೆಹೋಗುತ್ತಾರೆ.ಬ್ರಹ್ಮ,ವಿಷ್ಣು ಮತ್ತು ರುದ್ರರು ಪರಸ್ಪರ ಆತ್ಮೀಯತೆಯಿಂದ ಅಪ್ಪಿಕೊಂಡಾಗ ತ್ರಿಮೂರ್ತಿಗಳ ಅಂತರಾತ್ಮಚೇತನಳಾದ ಪರಾಶಕ್ತಿಯು ನಾರಿರೂಪವನ್ನು ಧರಿಸಿ ಪ್ರಕಟಗೊಳ್ಳುವಳು.ಮಹಿಷನನ್ನು ನಿಗ್ರಹಿಸಲು ದೇವಿಯನ್ನು ಪ್ರಾರ್ಥಿಸಿದ ದೇವತೆಗಳು ತಮ್ಮ ಅಸ್ತ್ರ ಶಸ್ತ್ರಗಳನ್ನು ದೇವಿಗೆ ನೀಡುವರು.ತ್ರಿಮೂರ್ತಿಗಳ ತೇಜಸ್ಸಿನಿಂದ ಹುಟ್ಟಿದ ದೇವಿಯು ಸಕಲ ದೇವತೆಗಳ ಅಸ್ತ್ರ ಶಸ್ತ್ರಗಳ ಧರಿಸಿ ವಿಜಯದುರ್ಗೆಯಾಗಿ ಲೀಲೆ ಮೆರೆಯುವಳು.
ದುರ್ಗಾದೇವಿಯ ಮಹಿಷಮರ್ದಿನಿ ಲೀಲೆಯು ಭಾರತದ ಅಂತಃಸತ್ತ್ವವನ್ನು ಪ್ರತಿನಿಧಿಸುವ ಮಹಾತತ್ತ್ವವನ್ನು ಸಂಕೇತಿಸುತ್ತದೆ.’ ವಿವಿಧತೆಯಲ್ಲಿ ಏಕತೆ’ ಭಾರತ ರಾಷ್ಟ್ರಜೀವನದ ಮಹಾಮಂತ್ರ.ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ದೇಶದ ಅಖಂಡತೆ,ಸಾರ್ವಭೌಮತ್ವ ,ಸಮಗ್ರತೆ ಮೊದಲಾದ ಪದಗಳಿಗೂ ಸ್ಫೂರ್ತಿಯಾದ ತತ್ತ್ವ.’ ಒಕ್ಕಟ್ಟಿನಲ್ಲಿ ಬಲವಿದೆ’ ಎನ್ನುವ ಭಾರತದ ಒಕ್ಕೂಟ ತತ್ತ್ವಕ್ಕೆ ಸ್ಫೂರ್ತಿಯಾಗಿದೆ ಮಹಿಷಮರ್ದಿನಿ ಲೀಲೆ.
ಶ್ರೀದೇವಿಯು ಸ್ವಯಂ ಪರಾಶಕ್ತಿ,ಜಗನ್ಮಾತೆಯಾಗಿದ್ದರೂ ಲೋಕಕಲ್ಯಾಣಾರ್ಥವಾಗಿ ಅವಳು ಬ್ರಹ್ಮ,ವಿಷ್ಣು ಮತ್ತು ರುದ್ರರ ತೇಜಸ್ಸಿನಿಂದ ಆವಿರ್ಭವಿಸುತ್ತಾಳೆ.ಬ್ರಹ್ಮ,ವಿಷ್ಣು ರುದ್ರರನ್ನು ಸೃಷ್ಟಿಸಿ ಅವರುಗಳಿಗೆ ಸೃಷ್ಟಿ,ಸ್ಥಿತಿ ಮತ್ತು ಲಯಗಳ ಕರ್ತವ್ಯದ ಹೊಣೆಯನ್ನು ವಹಿಸಿದ್ದ ವಿಶ್ವೇಶ್ವರಿ ದುರ್ಗಾದೇವಿಯು ತನ್ನ ಮೂಲನಿರಾಕಾರ ಪರಬ್ರಹೆಯ ಸ್ವರೂಪದಿಂದ ಪ್ರಕಟಗೊಳ್ಳಲು ಬ್ರಹ್ಮ ವಿಷ್ಣು ರುದ್ರರ ಅಪ್ಪುಗೆಯು ಕಾರಣವಾಯಿತು.ಪರಬ್ರಹ್ಮೆಯು ತನ್ನ ನಿರಾಕಾರಸ್ವರೂಪವನ್ನೈದು ಬ್ರಹ್ಮನಲ್ಲಿ ಸೃಷ್ಟಿಶಕ್ತಿಯಾಗಿ,ವಿಷ್ಣುವಿನಲ್ಲಿ ಸ್ಥಿತಿಶಕ್ತಿಯಾಗಿ ಮತ್ತು ರುದ್ರನಲ್ಲಿ ಲಯಶಕ್ತಿಯಾಗಿ ಲೀನಗೊಂಡಿದ್ದಳು.ಹಾಲಿನಲ್ಲಿ ತುಪ್ಪ ಇದೆ.ಆದರೆ ಹಾಲಿಗೆ ಸಂಸ್ಕಾರಕೊಡದ ಹೊರತು ತುಪ್ಪವು ಹೊರಬರದು.ಹಾಲಿಗೆ ಹುಳಿ ಹಾಕಿ ಮೊಸರು ಮಾಡಬೇಕು.ಮೊಸರನ್ನು ಕಡೆದು ಮಜ್ಜಿಗೆಯಲ್ಲಿ ಬೆಣ್ಣೆ ತೆಗೆಯಬೇಕು.ಆ ಬೆಣ್ಣೆಯನ್ನು ಕಾಯಿಸಿದರೆ ತುಪ್ಪ ಬರುತ್ತದೆ.ಹಾಗೆಯೇ ನಿರಾಕಾರಪರಬ್ರಹ್ಮೆಯು ಸಾಕಾರತತ್ತ್ವತಳೆಯಲು ವಿಶ್ವದ ವಿದ್ಯಮಾನಗಳು ಕಾರಣವಾಗುತ್ತವೆ.ಮಹಿಷನೆಂಬ ಮದಾಂಧ ರಕ್ಕಸನ ಉದಯ ಅವನಿಂದ ದೇವತೆಗಳಿಗೆ ಉಪಟಳ ಮತ್ತು ಲೋಕಕ್ಕೆ ಉಪದ್ರವ ಉಂಟಾದುದೇ ಮಹಾಮಾತೆಯ ಅವತರಣಕ್ಕೆ ಪೂರಕವಾದ ಸಂಸ್ಕಾರತತ್ತ್ವಗಳು.
ಪರಬ್ರಹ್ಮೆಯು ಮೂಲವಸ್ತುವು.ಬ್ರಹ್ಮ ವಿಷ್ಣು ರುದ್ರರು ಆ ಮೂಲವಸ್ತುವಿನಿಂದ ಹೊರಹೊಮ್ಮಿದ ಅಂಗಶಕ್ತಿಗಳು,ದೇವತೆಗಳು ಉಪಾಂಗ ಶಕ್ತಿಗಳು.ಮೂಲವು ತನ್ನ ಲೀಲಾತತ್ತ್ವವನ್ನು ಮುಗಿಸಿಕೊಂಡು ತನ್ನ ಸ್ವಸ್ವರೂಪವಾದ ನಿರಾಕಾರತತ್ತ್ವದಲ್ಲಿ ಲೀನವಾಗಿರುತ್ತದೆ.ಮೂಲತತ್ತ್ವವು ಪುನಃ ಪ್ರಕಟಗೊಳ್ಳಬೇಕಾದರೆ ಅಂಗತತ್ತ್ವದ ಆಶ್ರಯಪಡೆಯುತ್ತದೆ.ಇದುವೆ ಪರಬ್ರಹ್ಮೆಯು ಬ್ರಹ್ಮ ವಿಷ್ಣು ರುದ್ರರ ಮೂಲಕ ಮಹಿಷಮರ್ದಿನಿಯಾಗಿ ಹೊರಹೊಮ್ಮಿದ ತತ್ತ್ವರಹಸ್ಯ.ಮಹಿಷಮರ್ದಿನಿಗೆ ಬ್ರಹ್ಮ ವಿಷ್ಣು ರುದ್ರರು ಸೇರಿದಂತೆ ಸಕಲದೇವತೆಗಳು ತಮ್ಮ ಅಸ್ತ್ರ ಶಸ್ತ್ರ ಮತ್ತು ತೇಜಸ್ಸನ್ನು ನೀಡುತ್ತಾರೆ.ಅಂದರೆ ಮೂಲದಿಂದ ಹೊಮ್ಮಿದ ಶಕ್ತಿಸಮುಚ್ಛವು ಮತ್ತೆ ಮೂಲದಲ್ಲಿಯೇ ಒಂದಾಗುತ್ತದೆ.ಮಹಿಷನು ಮಹಾಬಲಶಾಲಿಯಾಗಿದ್ದರಿಂದ ಅವನನ್ನು ಸಂಹರಿಸಲು ಮೂಲಮಹಾಶಕ್ತಿಯೇ ಬೇಕಿತ್ತು.ಮಹಿಷ ಎಂದರೆ ಕೋಣ ಎಂದರ್ಥವಿದ್ದು ಮಹಿಷಾಸುರನಲ್ಲಿ ಸಾವಿರ ಕೋಣಗಳ ಬಲ ಇತ್ತಂತೆ.ನಮ್ಮ ಶರೀರದ ಅಷ್ಟಮದಗಳು ಕೋಣನನ್ನು ಸಂಕೇತಿಸುತ್ತಿದ್ದು ಮದೋನ್ಮತ್ತ ಕೋಣವನ್ನು ನಿಗ್ರಹಿಸಲು ಮಹಾಶಕ್ತಿಯೇ ಬೇಕಾಗುತ್ತದೆ. ದೈವಾನುಗ್ರಹದಿಂದ ಮಾತ್ರ ಅವಗುಣಗಳು ಶಿವಗುಣಗಳಾಗಿ ಮಾರ್ಪಾಟು ಆಗುತ್ತವೆ.ಬ್ರಹ್ಮನಿಂದ ತ್ರಿಮೂರ್ತಿಗಳೂ ಸೇರಿ ಸಕಲದೇವತೆಗಳಿಂದ ಅವಧ್ಯನಾಗುವ ವರಪಡೆದಿದ್ದ ಮಹಿಷನು ಬ್ರಹ್ಮ ವಿಷ್ಣು ರುದ್ರರುಗಳಿಂದ ಹುಟ್ಟಿದ,ಸಕಲ ದೇವತೆಗಳ ತೇಜೋಸಂಭವಳಾದ ನಾರಿಯಿಂದ ತನಗೆ ಮರಣವಾಗಲಿ ಎಂದು ವರಪಡೆದದ್ದರಿಂದ ಬ್ರಹ್ಮ ವಿಷ್ಣು ರುದ್ರರಾಗಲಿ ಇಲ್ಲವೆ ದೇವತೆಗಳಾಗಲಿ ಮಹಿಷನನ್ನು ಸಂಹರಿಸಲು ಸಾಧ್ಯವಾಗಲಿಲ್ಲ.ಪ್ರಕೃತಿಯಲ್ಲಿ ಕಾರ್ಯವಾಗಬೇಕಾದರೆ ಕಾಲ,ಕರ್ಮಗಳು ಒದಗಿಬರಬೇಕಾಗುತ್ತದೆ.ಮಹಿಷನಿಂದ ದೇವತೆಗಳು ಸೋತು ಸೊರಗಿದ್ದು ಭೂಲೋಕದಲ್ಲಿ ಯಜ್ಞ ಯಾಗಾದಿ ಧಾರ್ಮಿಕ ಕಾರ್ಯಗಳು ನಿಂತದ್ದು ಮತ್ತು ಅಮಾಯಕ ಜನರು ಕಾರಣವಿಲ್ಲದೆ ಬಳಲುವಂತದಾದ್ದು ಶ್ರೀದೇವಿಯು ಪ್ರಕಟಗೊಳ್ಳಲು ಕಾರಣವಾಯಿತು.
ಭಾರತದ ಪ್ರಗತಿ ,ಸಮಗ್ರತೆ ಮತ್ತು ಅಖಂಡತೆಗೆ ಮಹಿಷಮರ್ದಿನಿ ತತ್ತ್ವವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.ಭಾರತ ಎನ್ನುವ ಮಹಾತತ್ತ್ವದಲ್ಲಿ ಒಂದಾಗಿ ಬೆರೆಯಬೇಕಿದೆ ದೇಶದಲ್ಲಿರುವ ಹತ್ತಾರು ಧರ್ಮಗಳು,ನೂರಾರು ಜಾತಿಗಳು,ಸಾವಿರಾರು ಭಾಷೆಗಳು ದೇವತೆಗಳೆಲ್ಲರ ಶಕ್ತಿಯು ಸಂಗಮಿಸಿ ಶ್ರೀದೇವಿಯು ಎದ್ದುಬಂದಂತೆ.ದೇವತೆಗಳು ಎಷ್ಟೇ ಬಲಿಷ್ಠರಾಗಿದ್ದರೂ ಒಬ್ಬೊಬ್ಬರೇ ಮಹಿಷನನ್ನು ಎದುರಿಸಿ ಗೆಲ್ಲಲು ಸಾಧ್ಯವಿರಲಿಲ್ಲ.ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯತತ್ತ್ವಗಳ ಜೊತೆಗೆ ಜಗವನ್ನು ಪೊರೆಯುವ ಪೋಷಕತತ್ತ್ವವಾದ ಸಕಲದೇವತಾಶಕ್ತಿಯು ಶ್ರೀದೇವಿಯಲ್ಲಿ ಸಂಗಮಿಸಿ ವಿರಾಟ್ ಶಕ್ತಿಯಾಯಿತು.ಭಾರತೀಯರೆಲ್ಲರೂ ತಮ್ಮ ವ್ಯಕ್ತಿಗತ ಜಾತಿ,ಮತ,ಧರ್ಮಗಳ ಅಭಿಮಾನವನ್ನು ಬದಿಗಿಟ್ಟು ಭಾರತವೆಂಬ ಅಖಂಡ ಮಹಾತತ್ತ್ವಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು.ವ್ಯಷ್ಟಿಯಲ್ಲ, ಸಮಷ್ಟಿ ಕಲ್ಯಾಣ ಎಲ್ಲರ ಗುರಿಯಾಗಬೇಕು.ವ್ಯಕ್ತಿಯಲ್ಲ,ದೇಶ ಮುಖ್ಯವಾಗಬೇಕು.ಮತನಿಷ್ಠೆಯಲ್ಲ, ರಾಷ್ಟ್ರನಿಷ್ಠೆ ಮುಖ್ಯವಾಗಬೇಕು.ಧರ್ಮಕ್ಕಿಂತ ದೇಶದೊಡ್ಡದು ಎನ್ನುವ ಭಾವನೆ ದೇಶದ ಪ್ರಜಾಸಮಸ್ತರಲ್ಲಿ ಬೆಳೆಯಬೇಕು.ದೇಶದ 140 ಕೋಟಿ ಜನತೆಯ ಏಕತೆಯ ಭಾವನೆಯೇ ಮಹಿಷಮರ್ದಿನಿ ತತ್ತ್ವ.ದೇಶದ ಸಮಸ್ತ ಪ್ರಜೆಗಳು ತಾವು ಭಾರತವೆಂಬ ಮಹಾನ್ ರಾಷ್ಟ್ರಕ್ಕೆ ಸೇರಿದವರು ಎನ್ನುವ ರಾಷ್ಟ್ರಾಭಿಮಾನವನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಭಾರತವು ತನ್ನ ಶತ್ರುರಾಷ್ಟ್ರಗಳನ್ನೆಲ್ಲ ಮಣಿಸಿ ಪ್ರಪಂಚದ ಮಹಾನ್ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಬಹುದು.
