ಪ್ರತಿಭೆಗಳ ಪ್ರೋತ್ಸಾಹಕ್ಕೆ ವಿವಿ ಸದಾ ಸಿದ್ಧ; ಪ್ರೊ. ಹರೀಶ್ ರಾಮಸ್ವಾಮಿ

By admin
ಸೆಕ್ಯುಲರ್ ವಾಯ್ಸ್ ನ್ಯೂಸ್ ಶಹಾಪುರ

ವಿದ್ಯಾರ್ಥಿಗಳಿಗೆ ಅವಶ್ಯಕತೆಗನುಗುಣವಾಗಿ ಜ್ಞಾನವನ್ನು ಪೂರೈಸುವುದರ ಜೊತೆಗೆ.ಅವರಲ್ಲಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೆ, ರಾಯಚೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಮುಖ್ಯ ಉದ್ದೇಶವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.ತಾಲೂಕಿನ ಭೀಗುಡಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಯಚೂರು ವಿಶ್ವವಿದ್ಯಾಲಯ ಪ್ರಸಾರಾಂಗ ಹಾಗೂ ತಾಲೂಕು ಕಸಾಪ ಶಹಾಪುರ ಎನ್.ಎಸ್.ಎಸ್.ಘಟಕ ಸ.ಪ.ಪೂ. ಕಾಲೇಜು ಭೀಗುಡಿ ಮತ್ತು ವಲಯ ಕಸಾಪ ಭೀಗುಡಿ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ಪ್ರಚಾರೋಪನ್ಯಾಸಮಾಲೆ – 04 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಂಬರುವ ದಿನಗಳಲ್ಲಿ “ವಿಶ್ವವಿದ್ಯಾಲಯದ ನಡೆ ಸಮುದಾಯದ ಕಡೆಗೆ” ಎಂಬ ಘೋಷವಾಕ್ಯದೊಂದಿಗೆ ವಿನೂತನವಾದ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಸಮಾಜದ ಹೊರಗೆ ಸಾಧನೆ ಮಾಡಿದ ವ್ಯಕ್ತಿಗಳನ್ನ ಗುರುತಿಸುವ ಕೆಲಸ ನಮ್ಮಿಂದಾಗಬೇಕಾಗಿದೆ ಅದಕ್ಕಾಗಿ ಮುಂದಿನ ನಮ್ಮ ವಾರ್ಷಿಕ ಅನುದಾನದಲ್ಲಿ ಸುಮಾರು10 ಲಕ್ಷ ರೂ.ಮೀಸಲಿಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಜ್ಞಾನದ ಕ್ಷಿತೀಜ ಬೆಳವಣಿಗೆಗೆ ಸುಮಾರು 250 ಎಕರೆ ಜಾಗದಲ್ಲಿ ಬೋಧನೆ ಮತ್ತು ಕಲಿಕೆಯ ಜೊತೆಗೆ ಲ್ಯಾಬ್,ವಸತಿ ನಿಲಯ,ಗ್ರಂಥಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 2024ನೇ ಸಾಲಿನ ಪ್ರಚಾರ ಉಪನ್ಯಾಸ ಮಾಲಿಕೆ ನಡೆಯುತ್ತಿದ್ದು,ಪುಸ್ತಕ, ಗ್ರಂಥಾಲಯ,ಪುಸ್ತಕ ಪ್ರಕಟಣೆಗಾಗಿ, ಅತಿ ಹೆಚ್ಚು ಹೊತ್ತು ಕೊಡಲಾಗುವುದು ಎಂದು ತಿಳಿಸಿದರು.ಕರ್ನಾಟಕದ 12 ವಿಶ್ವವಿದ್ಯಾಲಯಗಳು ಮಾಡದ ಈ ಕೆಲಸವನ್ನು ರಾಯಚೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಕೀರ್ತಿ ಸಲ್ಲುತ್ತದೆ ಎಂದರು.

ಕಲಬುರ್ಗಿಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಶ್ರೀಶೈಲ ನಾಗರಾಳ ಉಪನ್ಯಾಸ ನೀಡಿ 9ನೇ ಶತಮಾನದಲ್ಲಿ ಹುಟ್ಟಿಕೊಂಡ ಕವಿರಾಜಮಾರ್ಗದ ಸಂದರ್ಭದಲ್ಲಿ ಅನ್ಯ ಭಾಷೆಗಳಾದ ಮರಾಠಿ,ತಮಿಳು,ತೆಲುಗು ಭಾಷೆಗಳ ಪ್ರಭಾವ ವಿಜ್ರಂಬಿಸುತ್ತಿತ್ತು,ಅಂತಹ ಸಂದರ್ಭದಲ್ಲಿ ಅವೆಲ್ಲವುಗಳನ್ನ ಮೆಟ್ಟಿನಿಂತು ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾವ್ಯಭಾಷೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಸಾಕಷ್ಟು ಪೂರಕವಾಗಿದ್ದು ಯಾರು ಮರೆಯುವಂತಿಲ್ಲ ಎಂದು ನೆನಪಿಸಿಕೊಟ್ಟರು.ಅಲ್ಲದೆ ಸನ್ನತಿ, ಶಿರವಾಳ,ಅಣಬಿ, ಏವೂರು,ಸೆರಿದಂತೆ ಇನ್ನು ಅನೇಕ ಗ್ರಾಮಗಳಲ್ಲಿ ದೊಡ್ಡ ಚರಿತ್ರೆ ಹಾಗೂ ಐತಿಹಾಸಿಕ ಪರಂಪರೆ ಅಡಗಿದೆ ಅವುಗಳನ್ನ ತಿಳಿದುಕೊಳ್ಳುವ ಕೆಲಸ ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದು ಕವಿರಾಜ ಮಾರ್ಗದ ಕಾವ್ಯ ಪರಿಕಲ್ಪನೆಯ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಗಳು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರಾದ ಡಾ.ಎಂ.ಬಿ.ಕಟ್ಟಿ ಮಾತನಾಡಿ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ, ಅಚ್ಚ ಕನ್ನಡದ ಭಾಷೆಯಲ್ಲಿ ವಚನ ಸಾಹಿತ್ಯವನ್ನು ರಚಿಸಿ ಈ ನಾಡಿಗೆ ಪರಿಚಯಿಸಿ ದೇಶಿ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ಈ ನಾಡಿನ ಶರಣರಿಗೆ ಸಲ್ಲುತ್ತದೆ ಎಂದು ನುಡಿದರು.ನಾವು ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಶ್ರೀಮಂತರಾಗಿದ್ದೇವೆ,ಆದರೆ ಅವುಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸುತ್ತಾ ದೇಸಿ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದರು.

ಸಾಂಸ್ಕೃತಿಕ ಚಿಂತಕಿ ಹಾಗೂ ಮಹಿಳಾ ಲೇಖಕಿ ಡಾ.ಶೈಲಜಾ ಬಾಗೇವಾಡಿ ಮಾತನಾಡಿ ಸಮ ಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಟ್ಟದ್ದು ಮೊಟ್ಟ ಮೊದಲಿಗೆ ಕಲ್ಯಾಣ ಕರ್ನಾಟಕ ಎಂದು ಸಂತೋಷದಿಂದ ನುಡಿದರು,12ನೇ ಶತಮಾನದಲ್ಲಿ ಅಂದಿನ 33 ಶರಣೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದ್ದು ಈ ನಾಡಿನ ಶರಣರು ಎಂದು ಶಹಪುರ ತಾಲೂಕಿನ ಸಾಂಸ್ಕೃತಿಕ ಪರಂಪರೆಯ ಕುರಿತು ಪ್ರಸ್ತಾಪಿಸಿದರು.ಸರ್ವಧರ್ಮದ ಪ್ರತೀಕ,ಸೌಹಾರ್ದತೆಯ ನೆಲೆಬೀಡು ಈ ಸಗರನಾಡು ಎಂದು ನುಡಿದರು,ಶಿಶು ಸಾಹಿತಿಗಳಾದ ದಿ.ಚಂದ್ರಕಾಂತ ಕರದಳ್ಳಿ,ಪ್ರವಾಸ ಕತೆಗಾರರಾದ ಸಿದ್ದರಾಮ ಹೊನಕಲ್,ಹಿರಿಯ ಸಾಹಿತಿ ಡಿ.ಜಿ.ಬಳುರಗಿ,ಡಾ.ಮೋನಪ್ಪ ಶಿರವಾಳ,ಡಾ.ರಂಗರಾಜ ವನದುರ್ಗ,ಡಿ.ಎನ್.ಅಕ್ಕಿ ಸೇರಿದಂತೆ ಇನ್ನೂ ಹಲವಾರು ಶಹಾಪುರ ತಾಲೂಕಿನ ಸಾಹಿತಿಗಳ ಕುರಿತು ಮನ ಮುಟ್ಟುವ ಹಾಗೆ ಮಾತನಾಡಿದರು,

ಈ ಸಮಾರಂಭದ ವೇದಿಕೆಯ ಮೇಲೆ ರಾಯಚೂರು ವಿಶ್ವವಿದ್ಯಾಲಯದ ಪ್ರಸಾರಂಗ ಸಲಹಾ ಸಮಿತಿ ಸದಸ್ಯರಾದ ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ,ಡಾ. ಕೃಷ್ಣಮೂರ್ತಿ ಕುಲಕರ್ಣಿ,ನಿಕಟ ಪೂರ್ವ ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ,ಭೀ ಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೋ.ಬಿರಾದರ,ಭಿ.ಗುಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರಪ್ಪ ಮಡಿವಾಳಕರ್,ಭೀಮನಗೌಡ, ಭೀಮರೆಡ್ಡಿ,ಅಶೋಕ್,ಪರಶುರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು,ತಾಲೂಕು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಪ್ರಸಾರಾಂಗದ ಸಂಯೋಜಕರಾದ ಡಾ.ಶರಣಪ್ಪ ಚಲವಾದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು,ಸುರೇಶ್ ಅರುಣಿ ಸ್ವಾಗತಿಸಿದರು,ಶಂಕರ್ ಹುಲಕಲ್ ನಿರೂಪಿಸಿದರು, ಉಪನ್ಯಾಸಕಿ ಅಶ್ವಿನಿ ವಂದಿಸಿದರು.