ದೇಶದ ಶಾಂತಿ-ಐಕ್ಯತೆಗೆ ಶ್ರಮಿಸಿ; ಸಚಿವ ಶರಣಬಸಪ್ಪಗೌಡ ದರ್ಶನಾಪುರ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಪೂರ್ವಜರ ತ್ಯಾಗ ಬಲಿದಾನದಿಂದ ಭಾರತೀಯರಿಗೆ ಸ್ವಾತಂತ್ರ‍್ಯ ದೊರೆತಿದ್ದು, ಸ್ವಾತಂತ್ರö್ಯ ಮಹತ್ವ  ಅರಿತು ದೇಶದ ಶಾಂತಿ ಹಾಗೂ ಐಕ್ಯತೆಗೆ ಶ್ರಮಿಸುವಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಭಾರತದ 78ನೇ ಸ್ವಾತಂತ್ರ‍್ಯೋತ್ಸವ ದಿನ ಆಚರಣೆ ಅಂಗವಾಗಿ ರಾಷ್ಟçಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ‍್ಯಕ್ಕಾಗಿ ಹಲವು ಸ್ವಾತಂತ್ರ‍್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಲೆಕ್ಕಿಸದೇ, ಸುಖ ಸಂಸಾರವನ್ನು ತ್ಯಜಿಸಿ ಈ ದೇಶಕ್ಕಾಗಿ ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ‍್ಯ ದೊರಕಿಸಿಕೊಟ್ಟಿದ್ದು, ಇದನ್ನು ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲ ಪ್ರಜೆಗಳು, ವಿಶೇಷವಾಗಿ ಯುವಜನಾಂಗದ ಮೇಲಿದೆ ಎಂದು ಹೇಳಿದರು.

ಈ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ನಮನಗಳನ್ನು ಸಲ್ಲಿಸುವದಾಗಿ ತಿಳಿಸಿದ ಅವರು, ರಾಷ್ಟç ಪಿತ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಸೇರಿದಂತೆ ಎಲ್ಲ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸಿ ನಮಿಸುವುದಾಗಿ ತಿಳಿಸಿದ ಅವರು, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಪರಿಶ್ರಮದ ಫಲವಾಗಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಅವರು ಭಾರತದ ಸಮಗ್ರತೆ,ಐಕ್ಯತೆ,ವಿಜ್ಞಾನ ಬೆಳವಣಿಗೆಗೆ ಶ್ರಮಿಸಿದ್ದಲ್ಲದೇ ಪಂಚವಾರ್ಷಿಕ ಯೋಜನೆಗಳ ಮೂಲಕ ಬಡತನ, ಹಸಿವು ಮುಕ್ತ ಭಾರತ ರೂಪಿಸಲು ಶ್ರಮಿಸಿದರು.ಮೂಲ ಸೌಲಭ್ಯ ಹಾಗೂ ವಿಜ್ಞಾನ ಬೆಳವಣಿಗೆಗೆ ಅವರು ಶ್ರಮಿಸಿದ್ದರಿಂದ ನಾವು ಇಂದು ಚಂದ್ರನಲ್ಲಿಗೆ ಮಾನವರಹಿತ ನೌಕೆಗಳನ್ನು ಕಳುಹಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಸ್ವಾತಂತ್ರ‍್ಯ ಎನ್ನುವುದು ಬಹುದೊಡ್ಡ ಆಸ್ತಿ,ಒಮ್ಮೆ ಅದು ಕಳೆಯಿತೆಂದರೆ ಮತ್ತೆ ಅದನ್ನು ಪಡೆಯಲು ಅದರ ಹತ್ತರಷ್ಷು ಬೆಲೆತರಬೇಕಾಗುತ್ತದೆ.ಎಲ್ಲರೂ ಇದರ ಮಹತ್ವ ಅರಿಯಬೇಕು. ಭಾರತ ವೈವಿಧ್ಯಮಯ ದೇಶ, ವೈವಿದ್ಯತೆಯಿಂದ ಕೂಡಿದ ದೇಶ, ಭೌಗೋಳಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕ ವಾಗಿ, ಸಾಂಸ್ಕೃತಿಕ ವಾಗಿ ಕೂಡಿದ ನಮ್ಮ ದೇಶದ ಐಕ್ಯತೆಗೆ ಪೂರಕವಾದ ಸಂವಿಧಾನ ನಮ್ಮೆಲ್ಲರ ಹೆಮ್ಮೆಯಾಗಿದೆ.

ಗ್ರಾಮಗಳ ಏಳ್ಗೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಗಾಂಧೀಜಿ ಅವರ ಕನಸು ನನಸಾಗಬೇಕು. ಶಾಂತಿ, ಐಕ್ಯತೆಯೊಂದಿಗೆ ಪ್ರಗತಿ ಸಾಧಿಸಬೇಕು. ಭಾರತ ಇಂದು ವಿಶ್ವದಲ್ಲಿಯೇ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಕೂಡ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

ರಾಜ್ಯದ ಬಡಕುಟುಂಬಗಳಲ್ಲಿ ಆರ್ಥಿಕ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆಗಳನ್ನು  ಜಾರಿಗೊಳಿಸಿದ್ದು,ಲಕ್ಷಾಂತರ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ ಎಂದು ಹೇಳಿದರು.

ಈ ಪಂಚ ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಸ್ವಾವಲಂಬಿ ಜೀವನಕ್ಕೆ ನೆರವಾಗಿವೆ. ಅದರಂತೆ ಉದ್ಯೋಗ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರ ಗಳಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಪಾಟೀಲ, ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.