ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ದೇಶ ನಿಮಗೇನು ಮಾಡಿತೆಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ಮಾಡಬೇಕೆಂದು ಕೇಳಿಕೊಳ್ಳಿ ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಸದಾ ನೆನಪಿಡಿ ಎಂದು ಕೌಶಲ್ಯಾಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಬಸಪ್ಪ ಎಸ್ ತಳವಾಡಿ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ, ನಗರಸಭೆ ವತಿಯಿಂದ ಡೇ- ನಲ್ಮ ಯೋಜನೆಯಡಿ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ಹತ್ತಿರ ( ಮೀನುಗಾರಿಕೆ ಕಟ್ಟಡ ಎದುರುಗಡೆ) ಸ್ಥಾಪಿತವಾದ  ನಗರ ವಸತಿರಹಿತರ ಆಶ್ರಯ ಕೇಂದ್ರದಲ್ಲಿ ಹಮ್ಮಿಕೊಂಡ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ಡಾ.ವಿಠೋಬ ಯಾದವ್ ಅವರು ಮಾತನಾಡಿ, ಈ ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಒಂದು ಸಣ್ಣ ಕೊಡುಗೆ ನೀಡಿದರೂ ಸಹ ಅದುವೇ  ನಿಜವಾದ ದೇಶಭಕ್ತಿಯೇ ಆಗಿದೆ.  ಪ್ರಾಮಾಣಿಕವಾಗಿ ಮಾಡುವ ಯಾವುದೇ ಕೆಲಸವು ದೇಶಭಕ್ತಿಯ ಕಾರ್ಯವಾಗಿದೆ ಎಂದರು.

ಕೌಶಲ್ಯಾಭಿವೃದ್ದಿ ಇಲಾಖೆಯ ಇನ್ನೋರ್ವ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ಹೃದಯದಲ್ಲಿ ದೇಶಪ್ರೇಮದ ಮನೋಭಾವವನ್ನು ಸದಾ ಜೀವಂತವಾಗಿರಿಸಿಕೊಂಡು ಈ ದೇಶ ನಮ್ಮದು, ನಾವೇ ಈ ನಿಜವಾದ ಪ್ರಜೆಗಳು ಎಂಬ ದೇಶಭಕ್ತಿಯ ಬೀಜವನ್ನು ಬಿತ್ತಿಕೊಳ್ಳಬೇಕು ಎಂದರು.

ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ ಅವರು ಮಾತನಾಡಿ, ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡರೆ ಆ ಹವ್ಯಾಸಗಳೇ ನಿಮ್ಮನ್ನು ಮುಂದೆ ದೇಶಕ್ಕಾಗಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಲ್ಲವು. ಜಾತಿ, ಮತ, ಭೇದಗಳಿಂದ ದೂರವಿದ್ದು ಎಲ್ಲರೊಡನೆ ಉತ್ತಮ ಬಾಂಧವ್ಯ ಸ್ನೇಹ ಬೆಸೆಯುವಂತೆ ನೋಡಿಕೊಳ್ಳೋಣ ಎಂದರು.

ನಿರಾಶ್ರಿತ ಕೇಂದ್ರದ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ಭಾರತಾಂಬೆ ಸಂಸ್ಥೆಯ ಖಜಾಂಚಿ ಹಾಗೂ ವ್ಯವಸ್ಥಾಪಕ ಮೌನೇಶ ಇಟಗಿ, ಸಿಬ್ಬಂದಿ  ದೇವಮ್ಮ, ಕೃಷ್ಣ, ಸೇವಕರಾದ ಬೀರಲಿಂಗಪ್ಪ ಕಿಲ್ಲನಕೇರಾ , ನಗರಸಭೆಯ ಸಿಆರ್ಪಿ ಗಳಾದ ಅವ್ವಮ್ಮಾ, ಪ್ರೇಮಾ, ಸಾಬಮ್ಮ  ಹಾಗೂ ಕೇಂದ್ರದಲ್ಲಿನ ನಿರಾಶ್ರಿತರು ಉಪಸ್ಥಿತರಿದ್ದರು.