
ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲಾದ್ಯಂತ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಕಾರ್ಯಕ್ರಮದ ಪ್ರಯುಕ್ತ ಜಿಲ್ಲೆಯಲ್ಲಿರುವ ಶಾಲೆ, ಅಂಗನವಾಡಿ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಶ್ರಮದಾನದ ಮೂಲಕ ಸಮಗ್ರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಸ್ವಚ್ಚತಾ ಹೀ ಸೇವಾ ಪಾಕ್ಷಿಕ 2024 ರ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ನಾವು ಇನ್ನೊಬ್ಬರಿಗೆ ಮಾದರಿಯಾಗಬೇಕೆಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿ ಇಟ್ಟುಕೊಳ್ಳುವುದು ಪ್ರಮುಖವಾಗಿದೆ. ನಗರ ಸ್ಥಳೀಯ ಸಂಸ್ಥೆ ಹಾಗೂ
ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರು ಮತ್ತು ಸ್ವಯಂ ಸೇವಕರ ಸಹಭಾಗಿತ್ವದಲ್ಲಿ ಕೊಳಚೆ ಪ್ರದೇಶ, ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸಲು ಕ್ರಮ
ಸಹಕಾರ ನೀಡಬೇಕು, ಸ್ವಚ್ಛತೆ, ಶುಚಿತ್ವಕ್ಕೆ ಸಂಬಂಧಿಸಿದಂತೆ ವಿವಿಧ ಅಭಿಯಾನಗಳನ್ನು ಹಮ್ಮಿಕೊಂಡು
ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸೂಚನೆ ನೀಡಿದರು.
ಸಫಾಯಿ ಕರ್ಮಚಾರಿಗಳಿಗಾಗಿ ಸಫಾಯಿ ಮಿತ್ರ ಶಿಬಿರ ಹಮ್ಮಿಕೊಂಡು ಆರೋಗ್ಯ ತಪಾಸಣೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಒದಗಿಸಬೇಕು, ಶಾಲೆಗಳಲ್ಲಿ ಸ್ವಚ್ಛತೆ ಕುರಿತು ಕವನ, ಪ್ರಬಂಧ, ಚಿತ್ರಕಲೆ, ಪೋಸ್ಟರ್ಸ್ ಸ್ಪರ್ಧೆ ಏರ್ಪಡಿಸುವುದರೊಂದಿಗೆ ಸ್ವಚ್ಛ ಭಾರತ್ ಮಿಷನ್ ಗೆ ಸಂಬಂಧಿಸಿದ ಸ್ಲೋಗನ್ ಬರವಣಿಗೆ, ರಸಪ್ರಶ್ನೆ, ಜಾಥಾ, ಜಿಂಗಲ್ಸ್ ಗಳನ್ನು ಆಯೋಜಿಸಿ ಯುವಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಕಾರ್ಯಕ್ರಮಗಳಿಗೂ ಮುನ್ನ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಬೇಕು, ಅರಿವು ಕಾರ್ಯಕ್ರಮಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಪ್ರತ್ಯೇಕವಾಗಿ ಬೇರ್ಪಡಿಸುವ ಬಗ್ಗೆ ಹಾಗೂ ತ್ಯಾಜ್ಯ ಕಡಿಮೆಗೊಳಿಸುವ, ಮರು ಬಳಕೆ ಮಾಡುವ ಬಗ್ಗೆ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ ಇಲಾಖೆಗಳು ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮಗಳ ಪೋಟೋ ಮತ್ತು ವಿಡಿಯೋಗಳನ್ನು ಸ್ವಚ್ಚತಾ ಸೇವಾ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್ ಪಿ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಯಾದಗಿರಿ ತಹಶೀಲ್ದಾರ ಸುರೇಶ ಅಂಕಲಗಿ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಸಹಕಾರ ಇಲಾಖೆ ಉಪನಿರ್ದೇಶಕ ಪವನಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
