ಸದೃಢ ದೇಶ ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ : ಶರಣಬಸಪ್ಪಗೌಡ ದರ್ಶನಾಪುರ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ಸದೃಢ ದೇಶದ ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕೆ ಶ್ರಮಿಸಿ ಜಿಲ್ಲೆಗೆ ಹೆಚ್ಚಿನ ಫಲಿತಾಂಶ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಿಗೆ ಹೆಚ್ಚಾಗಿ ಬಡ ಮಕ್ಕಳೇ ಬರುತ್ತಾರೆ. ಆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎತ್ತರಕ್ಕೆ ತರುವ ಬೆಳೆಸುವ ಕೆಲಸ ನಿಮ್ಮದಾಗಬೇಕು. ಮೌಲ್ಯಯುತವಾದ ಬದುಕಿಗೆ ಶಿಕ್ಷಣ ಮುಖ್ಯ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ವಿಶೇಷ ಸ್ಥಾನ ಸಿಕ್ಕಿದ್ದು, ಇದರಿಂದ ಈ ಭಾಗದ ಜನರಿಗೆ ಸರಕಾರಗಳ ಯೋಜನೆಗಳು, ಶಿಕ್ಷಣಕ್ಕಾಗಿ ವಿಶೇಷ ಸೌಲಭ್ಯಗಳು, ಇನ್ನಿತರ ಅವಕಾಶಗಳು ಸಿಕ್ಕಿದ್ದು ಅವುಗಳ ಸದ್ಬಳಕೆ ಆಗಬೇಕು ಎಂದರು.

ನಮ್ಮ ಸರ್ಕಾರ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಶಿಕ್ಷಕರ ಸಮಸ್ಯೆ, ಸವಾಲುಗಳನ್ನು ಹಂತ ಹಂತಗಳಲ್ಲಿಯೂ ಬಗೆಹರಿಸುವಲ್ಲಿ ದಾಪುಗಾಲಿಟ್ಟಿದೆ ಎಂದರು.

ವಿಧಾನ ಪರಿಷತ್ತು ಶಾಸಕ ಚಂದ್ರಶೇಖರ ಬಿ ಪಾಟೀಲ್ ಮಾತನಾಡಿ, ಮನುಷ್ಯ ಹೃದಯ ಎಷ್ಟು ಮುಖ್ಯವೋ ಹಾಗೆಯೇ ಸುಂದರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಅವಶ್ಯಕತೆ ಬಹಳ ಇದೆ ಎಂದರು. ಸರ್ಕಾರಿ ನೌಕರರಿಗೆ ಇರುವ ಪಿಂಚಣಿ ವ್ಯವಸ್ಥೆಯ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ರಾಜ್ಯ ಪ್ರಶಸ್ತಿ ಪುರಸ್ಕೃತ ಹುಣಸಗಿ ತಾಲೂಕಿನ ಬಸ್ಸಾಪುರ ಶಾಲೆಯ ಶಿಕ್ಷಕ ನೀಲಪ್ಪ ತೆಗ್ಗಿ, ಕಿರಿಯ ಪ್ರಾಥಮಿಕ ವಿಭಾಗದ ಹತ್ತಿಗೂಡುರು ಅಂಬೇಡ್ಕರ ನಗರ ಶಾಲೆಯ ಸಹ ಶಿಕ್ಷಕಿ ಮೀನಾಕ್ಷಿ, ಸುರಪುರ ಕುರುಬರ ಗಲ್ಲಿ ಶಾಲೆಯ ಶಿಕ್ಷಕಿ ಸುಜಾತ ನಾಯ್ಕ, ಸುರಪುರ ಮಂಡೇಲಮ್ಮನ ಗುಡಿ ಶಾಲೆಯ ಶಿಕ್ಷಕಿ ನೀಲಮ್ಮ ಹಾವೇರಿ, ಯಾದಗಿರಿಯ ಬಂಗಾರೆಮ್ಮನ ಗುಡಿ ಶಾಲೆಯ ಶಿಕ್ಷಕಿ ಸುಮಂಗಲಾ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಶಹಾಪುರದ ಹೊಸೂರು ಶಾಲೆಯ ಶಿಕ್ಷಕ ಪರಸಪ್ಪ ಅಜಗಪ್ಪನವರ, ಸುರಪುರದ ಕನಗಂಡನಹಳ್ಳಿ ಶಾಲೆಯ ಶಿಕ್ಷಕಿ ಗೀತಾ ಸಜ್ಜನ್, ಯಾದಗಿರಿಯ ಉರ್ದು ಶಾಲೆಯ ಶಿಕ್ಷಕ ಉಷ್ತಾಕ ಅಹ್ಮದ್. ಪ್ರೌಢಶಾಲಾ ವಿಭಾಗದ ಶಹಾಪುರಿನ ದೋರನಹಳ್ಳಿ ಶಾಲೆಯ

ಶಿಕ್ಷಕಿ ಸಂಗೀತಾ ದೇಸಾಯಿ, ಸುರಪುರ  ಆರ್ ಎಮ್ ಎಸ್ ಎ ದೇವಿಕೇರಾ ಶಾಲೆಯ ಶಿಕ್ಷಕ ತಿಪ್ಪೇಸ್ವಾಮಿ, ಯಾದಗಿರಿ ತಾಲೂಕಿನ ರಾಮಸಮುದ್ರ ಪ್ರೌಢಶಾಲೆಯ ಶಿಕ್ಷಕ ರಾಜಶೇಖರ ಗೌಡ ಇವರಿಗೆ ವೇದಿಕೆಯಲ್ಲಿ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ, ಕ.ರಾ.ಪ್ರಾ.ಶಾ.ಶಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಡಿಡಿಪಿಐ ಮಂಜುನಾಥ, ಯಾದಗಿರಿ ಬಿಇಓ ಚಂದ್ರಶೇಖರಗೌಡ ಪಾಟೀಲ, ಬಿಆರ್ಸಿ ಮಲ್ಲಿಕಾರ್ಜುನ ಪೂಜಾರಿ, ಜಿಲ್ಲಾ ಸರಕಾರಿ  ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಕೆಂಭಾವಿ, ಪ್ರಾಥಮಿಕ ಶಾಲಾ.ಶಿ  ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಯಾದಗಿರಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಗೌಡ ಬಿ, ಯಾದಗಿರಿ ತಾಲೂಕು ಪ್ರಾಥಮಿಕ ಶಾ.ಶಿ ಸಂಘದ ಅಧ್ಯಕ್ಷ ಯಂಕಪ್ಪ ದೊಡ್ಮನಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ಬೋಧಕೇತರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆದೆಪ್ಪ ಬಾಗ್ಲಿ, ಪದವಿಧರ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಸಂಜೀವಿನಿ, ಜಿಲ್ಲಾ ನೋಡಲ್ ಅಧಿಕಾರಿ ಬಸನಗೌಡ ಆಲ್ದಾಳ, ಶಿಕ್ಷಣ ಸಂಯೋಜಕರಾದ ಮಲ್ಲಿಕಾರ್ಜುನ ಕಾವಲಿ ಸೇರಿದಂತೆ ಜಿಲ್ಲಾ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಶಿಕ್ಷಣ ಪ್ರೇಮಿಗಳು ಇನ್ನಿತರರು ಉಪಸ್ಥಿತರಿದ್ದರು.