ಬಿಜೆಪಿ ಮನೆಯ ದುಃಖದ ವಾತಾವರಣದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲೆತ್ನಿಸಿದ ಕಾಂಗ್ರೆಸ್ : ಛಲವಾದಿ ನಾರಾಯಣಸ್ವಾಮಿ

By admin

ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ ನಮ್ಮ ಮನೆಯಲ್ಲಿನ ದುಃಖದ ವಾತಾವರಣದಲ್ಲಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿತ್ತು ಆದರೆ ಅದು ಸಾಧ್ಯವಾಗಲಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸುತ್ತಿದ್ದಂತೆಯೆ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯ ಎರಡು ಮುತ್ತುಗಳು ಕಳೆದುಕೊಂಡು ಬಡವಾಗಿತ್ತು. ವೆಂಕಟರಡ್ಡಿ ಮುದ್ನಾಳ ಹಾಗೂ ಡಾ. ವೀರಬಸವಂತರಡ್ಡಿ ಮುದ್ನಾಳರ ಕಳೆದುಕೊಂಡ ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಸಿಯಲು ಯತ್ನಿಸಿತ್ತು.
ಬಹುಮತವಿದ್ದರೂ ಕಾಂಗ್ರೆಸ್ ಜೆಡಿಎಸ್ ಸದಸ್ಯೆಗೆ ಮುಂದೆ ಮಾಡಿ ಅಧಿಕಾರ ಹಿಡಿಯಲು ಹವಣಿಸಿ ಏನೆಲ್ಲ ಪ್ರಯತ್ನ ಮಾಡಿತ್ತು. ದುಃಖದಲ್ಲಿದ್ದಾಗ ಲಾಭ ಮಾಡಿಕೊಳ್ಳಬೇಕೆಂದು ಹವಣಿಸಿದ ಕಾಂಗ್ರೆಸ್ ಗೆ ಈಗ ಮುಖಭಂಗವಾಗಿದೆ ಎಂದು ಹೇಳಿದರು.
ಈ ಗೆಲುವಿನೊಂದಿಗೆ ಇನ್ನು ಮುಂದೆ ನಿರಂತರ ವಿಜಯವನ್ನು ಬಿಜೆಪಿ ಸಾಧಿಸಲಿದೆ ಎಂದ ಅವರು, ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಹತಾಶೆಯ ಸ್ಥಿತಿಯಲ್ಲಿದ್ದು ದಸರಾ ಹಬ್ಬದ ವೇದಿಕೆಯನ್ನು ಸಹ ಮುಖ್ಯಮಂತ್ರಿಗಳು ರಾಜಕೀಯ ಭಾಷಣದ ವೇದಿಕೆಯಾಗಿಸಿಕೊಂಡಿರುವುದು ನಾಚಿಕೆಗೇಡು ಸಂಗತಿಯಾಗಿದೆ.
ನಾಡಹಬ್ಬದ ವೇದಿಕೆಯನ್ನು ರಾಜಕೀಯಕ್ಕೆ ಯಾರೂ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದ ಅವರು ಮುಖ್ಯಮಂತ್ರಿಗಳು ಸಹ ದಸರಾ ವೇದಿಕೆಯಲ್ಲಿ ರಾಜಕೀಯ ಮಾತನಾಡಿರುವುದು ಖಂಡಿಸುವುದಾಗಿ ಹೇಳಿದರು.
ಜಿಟಿ ದೇವೇಗೌಡ ಮಾತಿಗೂ ಅವರು ಯಾರೇ ಆಗಲಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಬಾರದು ಅದೊಂದು ಸಾಂಸ್ಕೃತಿಕ ಹಬ್ಬದ ವೇದಿಕೆ ಎಂದು ಅವರು ಹೇಳಿದರು.

ಅಧ್ವಾನವಾಗಿರುವ ನಗರಸಭೆ ತಹಬದಿಗೆ ತರುತ್ತೇನೆ: ಲಲಿತಾ ಅನಪೂರ 
ನಗರ ಆಡಳಿತ ಕಳೆದ ಒಂದು ವರ್ಷದಿಂದ ತೀರ ಹದಗೆಟ್ಟು ಹೋಗಿದೆ ಕೂಡಲೇ ಕಾಯಕಲ್ಪ ನೀಡುವ ಕೆಲಸ ಮಾಡುತ್ತೇನೆ ಎಂದು ನೂತನ ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಕು. ಲಲಿತಾ ಅನಪೂರ ಪ್ರಕಟಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾಗಿ ಹೊರಬರುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛತೆ, ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಅಧ್ವಾನವಾಗಿರುವುದು ಎಲ್ಲರಿಗೂ ಗೊತ್ತಿದೆ.
     ನಗರಸಭೆ ಅಧಿಕಾರ ವಹಿಸಿಕೊಂಡ ಕೂಡಲೇ ಇದನ್ನು ತಹಬದಿಗೆ ತರುತ್ತೇನೆ ಎಂದು ಅವರು ತಿಳಿಸಿ ತಮ್ಮ ಆಯ್ಕೆಗೆ ಕಾರಣೀಕರ್ತರಾದ ಬಿಜೆಪಿ ಅಧ್ಯಕ್ಷ ಅಮೀನರೆಡ್ಡಿ ಯಾಳಗಿ, ಮಹೇಶರಡ್ಡಿ ಮುದ್ನಾಳ, ರಾಚನಗೌಡ ಮುದ್ನಾಳ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೇರಿದಂತೆ ಬಿಜೆಪಿ ಆಡಳಿತ ತರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವೆ ಎಂದು ಹೇಳಿದರು.