ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಡಿಸಿ ಸ್ನೇಹಲ್ ಆರ್. ಚಾಲನೆ

ಯಾದಗಿರಿ: ವಿದ್ಯಾರ್ಥಿಗಳು ಖಗೋಳಶಾಸ್ತ್ರದ ಬಗ್ಗೆ ತಮ್ಮಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿಜ್ಞಾನಿಗಳಾಗಿ ಹೊರ ಹೊಮ್ಮಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನಿರ್ದೇಶಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಸ್ಟೇಶನ ಬಜಾರ ಶಾಲೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಎಸ್ ಟಿ ಇ ಪಿ ಎಸ್), ವರ್ಣಾಜ್ ಟೆಕ್ನಾಲಜಿಸ್ ತಾರೇ ಜಮೀನ್ ಪರ್ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಹಯೋಗದ “ಶಾಲೆಯ ಅಂಗಳದಲ್ಲೆ ಸಂಚಾರಿ ಡಿಜಿಟಲ್ ತಾರಾಲಯ” ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸಂಚಾರಿ ತಾರಾಲಯಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಖಗೋಳಶಾಸ್ತ್ರ ಬಗ್ಗೆ ಅರಿವನ್ನು ಮೂಡಿಸಲು ಈ ಯೋಜನೆಯೂ ತುಂಬಾ ಉಪಯುಕ್ತವಾಗಿದೆ ಮಕ್ಕಳಿಗೆ ನಕ್ಷತ್ರಪುಂಜ, ನಕ್ಷತ್ರಗಳು, ಆಕಾಶಕಾಯಗಳ ಪರಿಚಯ ಹಾಗೂ ನಭೋಮಂಡಲದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ದೇಶದಲ್ಲಿಯೇ ಈ ಯೋಜನೆಯು ಒಂದು ವಿನೂತನವಾದ ಯೋಜನೆಯಾಗಿದ್ದು, ಅದರಲ್ಲಿಯೂ ಕರ್ನಾಟಕದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಒಟ್ಟು 11 ಸಂಚಾರಿ ಸಂಚಾರಿ ತಾರಾಲಯಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಅದರಲ್ಲಿಯೂ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 7 ಸಂಚಾರಿ ತಾರಾಲಯಗಳು ಜಿಲ್ಲೆಗೆ ಒಂದರಂತೆ ಕಾರ್ಯವನ್ನು ನಿರ್ವಹಿಸುತ್ತಿವೆ ಉಳಿದ 4 ತಾರಾಲಯಗಳು ಬೆಂಗಳೂರು, ಮೈಸೂರು ಹಾಗೂ ಧಾರವಾಡ ವಿಭಾಗಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿವೆ. ಈ ಕಾರ್ಯಕ್ರಮದ ಸದುಪಯೋಗವನ್ನು ನಮ್ಮ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಲಿ. ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ಗ್ರಹಗಳು ನಕ್ಷತ್ರಗಳ ಲೋಕವನ್ನು ಸಂಚಾರಿ ತಾರಾಲಯವೂ ಪರಿಚಯಿಸುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಖಗೋಳ ಶಾಸ್ತ್ರದ ಕುರಿತಂತೆ ಶಾಲೆಯ ವಿದ್ಯಾರ್ಥಿಗಳು ರಂಗೋಲಿ ಬಿಡಿಸಿದ್ದನ್ನು ಜಿಲ್ಲಾಧಿಕಾರಿಯವರು ವಿಕ್ಷೀಸಿ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಚಾರಿ ತಾರಾಲಯದ ರಾಜ್ಯ ವ್ಯವಸ್ಥಾಪಕರಾದ ಶ್ರೀ ವಿರೇಶ ಹಂಚಿನಾಳ ಅವರು ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಖಗೋಳಶಾಸ್ತçದ ಕೌತುಗಳನ್ನು ಸಂಚಾರಿ ತಾರಾಲಯದ ಮೂಲಕ ತೋರಿಸಲಾಗುತ್ತಿದೆ, ಪ್ರತಿದಿನ ಒಂದು ಶಾಲೆಗೆ ಸಂಚಾರಿ ತಾರಾಲಯವೂ ಭೇಟಿ ನೀಡಿ ಮಕ್ಕಳ ಪಠ್ಯಪುಸ್ತಕದಲ್ಲಿ ಇರುವ ಖಗೋಳಶಾಸ್ತçದ ಬಗ್ಗೆ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಈ ತಾರಾಲಯದ ನಿರ್ವಹಣಾ ಸಂಸ್ಥೆಯಾದ ತಾರೇ ಜಮೀನ ಪರ್ ಸಂಸ್ಥೆಯ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಕಿಡಿಯನ್ನು ಹೊತ್ತಿಸಿ ಗ್ರಾಮೀಣ ಪ್ರತಿಭೆಗಳು ವಿಜ್ಞಾನಿಗಳಾಗುವಂತೆ ಮಾಡುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಶಾಂತಗೌಡ ಪಾಟೀಲ್, ಶಿಕ್ಷಣಾಧಿಕಾರಿ ಅಮೃತಾಬಾಯಿ, ಸಂಚಾರಿ ತಾರಾಲಯ ರಾಜ್ಯ ವ್ಯವಸ್ಥಾಪಕರು ವಿರೇಶ್ ಹಂಚಿನಾಳ, ಸಂಚಾರಿ ತಾರಾಲಯ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ಕಲಾಕಾರ, ತಾಂತ್ರಿಕ ಸಲಹೆಗಾರ ಹುಸೇನ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
