ಅಫ್ತಾಬ್ ಅಮಿನ್ ಪೂನಾವಾಲಾ ಒಬ್ಬ ಮನಗೇಡಿಯೇ?

By admin

ಯೋಗೇಶ ಮಾಸ್ಟರ್, ಪ್ರಖ್ಯಾತ ಲೇಖಕರು, ಚಿಂತಕರು, ಬೆಂಗಳೂರು

ಸಾಮಾನ್ಯ ಮನಸ್ಸೊಂದು ಮಾಡಲು ಮುಂದಾಗದ ಕ್ರೌರ್ಯವನ್ನು ಸೈಕೋಪಾತ್’ಗಳು ಮಾಡುತ್ತಾರೆ. ಸೈಕೋಪಾತ್ ಅಥವಾ ಮನಗೇಡಿಗಳು ಇತರರ ಜೀವ ಮತ್ತು ನೋವಿಗೆ ಸ್ಪಂದಿಸಲಾಗದವರಾಗಿರುತ್ತಾರೆ. ಹಾಗೂ ಸಂವೇದನೆ ಇಲ್ಲದವರಾಗಿರುತ್ತಾರೆ. ಕ್ರೂರವಾದ ಕೃತ್ಯ ಮಾತ್ರ ಮಾಡಿರುವವನು ಮಾತ್ರವೇ ಮನಗೇಡಿಯೇ? ಒಂದಿಷ್ಟು ಅಧ್ಯಯನ ಮತ್ತು ಅರಿವಿನ ಅಗತ್ಯವಿದೆ.

ಅಫ್ತಾಬ್ ಅಮಿನ್ ಪೂನಾವಾಲಾ, ಅವನೊಬ್ಬ ಫುಡ್ ಬ್ಲಾಗರ್, ಲಿಬರಲ್ ಧೋರಣೆಯ ಮತ್ತು ಸ್ವಚ್ಛಂದ ಜೀವನವನ್ನು ನಡೆಸುವ ಓರ್ವ ವಿದ್ಯಾವಂತ ಹುಡುಗ. ಸಾಂಪ್ರದಾಯಿಕ ಚೌಕಟ್ಟುಗಳ ಆಚೆಗೆ ಆಲೋಚಿಸುವ, ಬದುಕುವ ಇಚ್ಚೆ ಮತ್ತು ಪ್ರಯತ್ನವನ್ನು ಹೊಂದಿದ್ದವ. ವ್ಯಾಪಾರಿ ತಂದೆ, ಗೃಹಿಣಿ ತಾಯಿ. ಕ್ರೈಸ್ತ ವಿದ್ಯಾಸಂಸ್ಥೆಯಲ್ಲಿ ಉತ್ತಮ ಹೈಸ್ಕೂಲು ಶಿಕ್ಷಣ ಪಡೆದಿರುವ ಮತ್ತು ಸಾಂತಕ್ರೂಜ್ ಕಾಲೇಜಲ್ಲಿ ಅರ್ಧದಲ್ಲೇ ಕಲಿಕೆ ನಿಲ್ಲಿಸಿರುವ ಹುಡುಗ. ಲೈಂಗಿಕತೆಯನ್ನೂ ಕುರಿತಂತೆ ಸಮಾಜದಲ್ಲಿ ಯಾವುದೇ ಸಾಂಪ್ರದಾಯಿಕ ಕಟ್ಟುಪಾಡಿಗೆ ಒಳಗಾಗದಿರುವಂತ ಯುವಕ ಓರ್ವ ಸೈಕೋಪಾತ್ ಆಗಿ ಹೇಗೆ ಪರಿವರ್ತಿತನಾದ ಎಂಬುದರ ಬಗ್ಗೆ ಗಂಭೀರವಾದ ಗಮನವನ್ನು ಹರಿಸುವ ಅಗತ್ಯವಿದೆ.
ಆದರೆ ಅವನು ಮುಸ್ಲೀಮನೋ, ಪಾರಸಿಯೋ ಎಂಬುದರ ಬಗ್ಗೆ ಚರ್ಚೆ, ಶ್ರದ್ಧಾ ಎಂಬ ಹಿಂದೂ ಹುಡುಗಿಯನ್ನು ಕೊಂದ ಅಫ್ತಾಬ್ ಎಂಬ ಮುಸ್ಲೀಂ ಯುವಕ, ಇದು ಲವ್ ಜಿಹಾದ್ ಆಗಿರಬೇಕೆಂದು ಅವರ ಅಪ್ಪನೂ ಸೇರಿದಂತೆ ಬೇಡದ ಚರ್ಚೆಗಳನ್ನು ಮಾಡುತ್ತಾ ವಿ ಗ್ರಹಿಸಬೇಕಾದ ನೆಲೆಯನ್ನೇ ಗಮನಿಸುತ್ತಿಲ್ಲ.
ಹಂಗ್ರಿಚೋಕ್ರೋ ಎಂಬ ಫುಡ್ ಬ್ಲಾಗನ್ನು ವೃತ್ತಿಪರನಾಗಿ ನಿರ್ವಹಿಸುತ್ತಿದ್ದ ಅವನು ಎಲ್ ಜಿ ಬಿ ಟಿಯನ್ನು ಬೆಂಬಲಿಸಿದ್ದ, ಸ್ತ್ರೀವಾದವನ್ನೂ ಎತ್ತಿ ಹಿಡಿಯುವಂತಹ ಪೋಸ್ಟುಗಳನ್ನು ಹಾಕುತ್ತಿದ್ದ. ಮುಕ್ತ ಬದುಕನ್ನು ಜೀವಿಸುವ ಯುವ ಮನಸುಗಳಂತೆ ಪರಿಸರ ಸಂರಕ್ಷಣೆ ಮತ್ತು ಜಾತ್ಯತೀತ / ಧರ್ಮನಿರಪೇಕ್ಷ ಮನಸ್ಥಿತಿ ಕೂಡಾ ಹೌದು.
ಅವನು ಯಾವುದೇ ಧಾರ್ಮಿಕತೆಯ ಆಚರಣೆಗಳಿಗೆ ಒಳಗಾಗದೇ ಒಂದು ಮುಕ್ತ ಜೀವನ ಕ್ರಮವನ್ನು ಅನುಸರಿಸುತ್ತಿದ್ದ, ಹಾಗೆಯೇ ಶ್ರದ್ಧಾ ಕೂಡಾ ಅನಿಸುತ್ತದೆ. ಇಬ್ಬರೂ ತಮ್ಮ ಡೇಟಿಂಗ್ ಸಲುವಾಗಿ ಒಂದೇ ಆಪ್ ಬಳಸುತ್ತಿದ್ದರು.
ಅವನು ಒಬ್ಬ ಶ್ರದ್ಧಾವಂತ ಮುಸ್ಲಿಂ ಹುಡುಗನೂ ಅಲ್ಲ. ಹಾಗೆಯೇ ಅವಳೂ ಸಾಂಪ್ರದಾಯಿಕ ಹಿಂದೂ ಹುಡುಗಿಯೂ ಅಲ್ಲ. ಇಲ್ಲಿ ಧರ್ಮಗಳ ಬಗ್ಗೆ ಮಾತಾಡುವುದೇ ಅಸಂಬದ್ಧ.
ಇರಲಿ, ಈಗ ಎರಡು ಅಂಶಗಳನ್ನು ಗಮನಿಸಬೇಕಾಗಿದೆ.
ಒಂದು ಸಮಾಜದ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಳಗಾಗದ ಮುಕ್ತ ಜೀವನ ಶೈಲಿಯ ಇತಿ ಮಿತಿ, ಹಾಗೆಯೇ ಮತ್ತೊಂದು ವ್ಯಕ್ತಿಯೊಬ್ಬನ ಮನಸ್ಸು ಮತ್ತೊಂದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡುವಷ್ಟು ಭೀಕರವಾಗಿ ರೂಪುಗೊಳ್ಳುವ ಸೈಕೋಪಾತ್ ಆಗುವ ಕಾರಣ.
ಶ್ರದ್ಧಾ ಮತ್ತು ಅಫ್ತಾಬ್ ಡೇಟಿಂಗ್ ಆಪುಗಳನ್ನು ಬಳಸುವಷ್ಟು ಮುಂದುವರಿದ ಮುಕ್ತ ಜೀವನ ಕ್ರಮವನ್ನು ಅನುಸರಿಸುತ್ತಿದ್ದರು. ಇಬ್ಬರೂ ಲಿವಿಂಗ್ ಟುಗೆದರ್ ಇದ್ದರೇ ಹೊರತು ವೈವಾಹಿಕ ಬಂಧನಕ್ಕೆ ಒಳಗಾಗಿರಲಿಲ್ಲ. ಅವನು ಇವಳ ಜೊತೆಗೆ ಸಂಗಾತಿಯಾಗಿದ್ದರೂ ಇತರ ಹುಡುಗಿಯರನ್ನು ಸೇರುತ್ತಿದ್ದ. ಹಾಗೆಯೇ ಅವಳೂ ಕೂಡಾ ಎಂದು ಹೇಳಲಾಗುತ್ತಿದೆ. ಆದರೆ ಅವಳು ತಮ್ಮ ಸಾಂಗತ್ಯವನ್ನು ವೈವಾಹಿಕ ಬಂಧನಕ್ಕೆ ಒಳಪಡಿಸಿಕೊಳ್ಳಲು ಮುಂದಾದಾಗ ಮುಕ್ತ ಬದುಕಿನ ಶೈಲಿಯನ್ನೇ ಅನುಸರಿಸಲು ಇಚ್ಚಿಸಿದ್ದ ಅವನು ಒಪ್ಪಲಿಲ್ಲ. ಇವಳು ಅವನನ್ನು ಬಿಡುವುದೋ, ಇವನು ಅವಳನ್ನು ಬಿಡುವುದೋ ಮುಕ್ತ ಬದುಕಿನ ಕ್ರಮದವರಿಗೆ ಕಷ್ಟದ ವಿಷಯವೇನಲ್ಲ. ಆದರೆ ಅವಳು ತನ್ನ ಇಚ್ಚೆಯಂತೆಯೇ ಆಗಬೇಕು ಎಂದು ಹಟ ಹಿಡಿದಿದ್ದು, ಅದರ ವಿಷಯವಾಗಿ ಜಗಳ ತಾರಕಕ್ಕೆ ಹೋಗುತ್ತಿದ್ದು, ಅವಳು ಇವನನ್ನು ಬಿಡುತ್ತಿಲ್ಲ ಎಂದೂ ಅರಿವಾಗಿದೆ. ಅವಳೂ ಪಾಪದವಳೋ, ಮೆದು ಧೋರಣೆಯ ಹುಡುಗಿಯೋ, ಹಟಮಾರಿಯಾಗಿಲ್ಲದವಳೋ ಆಗಿದ್ದರೆ ಪ್ರಾಯಶಃ ಅಫ್ತಾಬನಿಂದ ಮೋಸ ಹೋದ ಹುಡುಗಿಯಾಗಿ ಅವನಿಂದ ದೂರಾಗಿ ಕಣ್ಣೀರಿಡುತ್ತಲೋ, ಬ್ರೇಕಪ್ ಆದ ಡಿಪ್ರೆಶನ್ನಿಂದ ಹೊರಗೆ ಬರಲು ದಾರಿಗಳನ್ನು ಹುಡುಕುತ್ತಲೋ, ಆಪ್ತ ಸಮಾಲೋಚನೆಗೆ ಹೋಗುತ್ತಲೋ ಇರುತ್ತಿದ್ದಳು. ಆದರೆ ಅವಳು ಹಾಗಿರಲಿಲ್ಲ ಎಂದು ತೋರುತ್ತದೆ. ಅವಳೂ ತನ್ನ ಹಟವನ್ನು ಸಾಧಿಸಿಕೊಳ್ಳುವ ಸಲುವಾಗಿ ಅವನಿಗೆ ದುಂಬಾಲು ಬಿದ್ದು, ಅವನ ಅಭಿಪ್ರಾಯ ಮತ್ತು ಅನಿಸಿಕೆಗೆ ಕಿವಿಗೊಡುವವಳಾಗಿರಲಿಲ್ಲ ಎಂದು ಸ್ಥೂಲ ವಿಶ್ಲೇಷಣೆಯಲ್ಲಿ ತೋರುತ್ತದೆ. ಅವಳು ಅವನನ್ನು ಹೊಂದಲೇ ಬೇಕೆನ್ನುವ ಜಿದ್ದುಗೇಡಿತನವು ಮತ್ತು ಹಟಮಾರಿತನವೂ ಮುಕ್ತ ಮತ್ತು ಸ್ವಚ್ಚಂದ ಬದುಕಿನ ಅಭಿಲಾಷಿಯಾಗಿದ್ದ ಅಫ್ತಾಬನಿಗೆ ತೊಡಕಾಗಿದ್ದಳು ಎಂದು ತೋರುತ್ತದೆ.
“ಆಗಿದ್ದು ಆಯಿತು, ಸುಮ್ಮನೆ ಬಿಟ್ಟು ಮುಂದಕ್ಕೆ ನಡೆ” ಎನ್ನುವಂತ ಅವನ ಧೋರಣೆಗೆ ಬದಲಾಗಿ “ಅದು ಹೇಗೆ ಸಾಧ್ಯ?” ಎಂದು ಅವಳು ಜಿದ್ದಿಗೆ ಬಿದ್ದದ್ದು ಅವರ ಸಂಘರ್ಷವನ್ನು ಮತ್ತಷ್ಟು ಗಾಢಗೊಳಿಸಿರುತ್ತದೆ.
ಈಗ ಅಫ್ತಾಬನ ವಿಷಯಕ್ಕೆ ಬಂದರೆ, ಎಲ್ಲರಲ್ಲಿ ನೀನೊಬ್ಬಳು ಎಂಬಂತೆಯೋ ಅಥವಾ ಸುಖಿಸುವ ಆದರೆ ಬಂಧನಕ್ಕೆ ಒಳಪಡಿಸಿಕೊಳ್ಳದೇ ಪರಸ್ಪರ ಬೀಳ್ಕೊಡುವ ಎಂಬಂತೆಯೋ ಅವಳನ್ನು ಹಾದು ಮುಂದೆ ಹೋಗಲು ಬಿಡದಂತೆ ಅವಳು ಪಟ್ಟು ಹಿಡಿದಿರುವಾಗ ಅವನು ಅವಳಿಂದ ಬೇರಾಗಲು ಬೇರೆ ಬೇರೆ ವಿಧಾನಗಳನ್ನು ಅನುಸರಿಸಬಹುದಿತ್ತು. ಅದರಲ್ಲಿ ನಿಜವಾಗಿಯೂ ಇಬ್ಬರಿಗೂ ಮುಖ್ಯವಾಗಿದ್ದು ’ಆಪ್ತ ಸಮಾಲೋಚನೆ’. ಇಬ್ಬರೂ ತಮ್ಮ ತಮ್ಮ ಮಾನಸಿಕ ಒತ್ತಡ ಮತ್ತು ಆಗ್ರಹಗಳಿಂದ ಮುಕ್ತವಾಗಲು ವೃತ್ತಿಪರ ಸಮಾಲೋಚಕರನ್ನು ಕಾಣುವ ಅಗತ್ಯತೆ ಇತ್ತು.
ಆದರೆ ಅವಳು ತನ್ನ ಪಟ್ಟನ್ನು ಬಿಗಿಗೊಳಿಸುತ್ತಿದ್ದಂತೆ, ಇವನು ಅದನ್ನು ಜೈವಿಕವಾಗಿಯೇ ಕಿತ್ತೊಗೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದು ಒಂದು ನಿರ್ಧಾರ ಮಾಡಿದ್ದು ಅವನ ಪ್ರಜ್ಞಾವಸ್ಥೆಯಲ್ಲಿರುವ ಮನಸ್ಸಂತೂ ಅಲ್ಲ.
ಇತರ ಜೀವಿಗಳ ಜೀವ ಮತ್ತು ನೋವುಗಳಿಗೆ ಸ್ಪಂದಿಸಲಾಗದೇ ಸಂವೇದನಾ ಶೂನ್ಯವಾಗಿರುವಂತಹ ಮನಸ್ಥಿತಿ ಸೈಕೋಪಾತ್’ಗಳದ್ದಾಗಿರುತ್ತದೆ.
ಅಫ್ತಾಬ್ ಓರ್ವ ಸೈಕೋಪಾತ್ ಆಗಿದ್ದನೋ ಇಲ್ಲವೋ, ಇಂಪಲ್ಸಿವ್ (ಹಠಾತ್ ಪ್ರವೃತ್ತಿ) ಡಿಸಾರ್ಡರ್ ಇದ್ದು, ಇಂತಹ ದುರ್ಘಟನೆಗೆ ದಾರಿಯಾಯಿತೋ, ಅಥವಾ ಹಲವು ಮಾನಸಿಕ ಸಮಸ್ಯೆಗಳು ಈ ಸ್ವರೂಪದಲ್ಲಿ ಪ್ರಕಟವಾದವೋ; ಕೇಸ್ ಸ್ಟಡಿ ಮಾಡುವುದರಿಂದ ತಿಳಿಯುತ್ತದೆ.
ಸಾಮಾನ್ಯವಾಗಿ ಸೈಕೋಪಾತುಗಳು ಹೃದಯಹೀನರೂ, ಕ್ರೂರಿಗಳೂ, ಸಂವೇದನಾಶೂನ್ಯರೂ ಆಗಿರುತ್ತಾರೆ. ಅಫ್ತಾಬನ ಪೋಸ್ಟುಗಳಲ್ಲಿ ಕಟ್ಟಳೆಗಳಿಗೆ ಮೀರಿದ ಮತ್ತು ಸಾಂಪ್ರದಾಯಿಕತೆಗಳಿಗೆ ಮಿಗಿಲಾದ ವಿಷಯಗಳಿಗೆ ಸ್ಪಂದಿಸುವಂತಹ ಧೋರಣೆಗಳಿವೆಯೇ ಹೊರತು ಸ್ಯಾಡಿಸಂ ಅಥವಾ ಹಿಂಸಾರತಿಯಂತಹ ಲಕ್ಷಣಗಳೇನೂ ಕಾಣುತ್ತಿಲ್ಲ. ಫುಡ್ ಬ್ಲಾಗರ್ ಅಂದರೆ ಹೊಸ ಹೊಸ ರುಚಿ ಮತ್ತು ಅಭಿರುಚಿಗಳಿಗೆ ತೆರೆದುಕೊಳ್ಳುವ ಹಾಗೂ ಸದಾ ಪ್ರಯೋಗಶೀಲತೆಯನ್ನು ಒಪ್ಪಿಕೊಳ್ಳುವ, ಅಂತಹವನ್ನು ಪ್ರಶಂಸಿಸುವ ಧೋರಣೆ ಇದ್ದು, ವೈವಿಧ್ಯತೆಯನ್ನು ಪೋಷಿಸುವಂತಹದ್ದು. ಅಂತವನು ಶೀತಲ ಸೇಡಿನ ವ್ಯಕ್ತಿಯೋ ಅಥವಾ ಸೈಕೋಪಾತ್ ಆಗಿರುವ ಸಾಧ್ಯತೆಯೋ ಬಹಳ ಕಡಿಮೆ ಇದ್ದು, ಒಂದು ವೇಳೆ ಸೈಕೋಪಾತೇ ಆಗಿದ್ದ ಪಕ್ಷದಲ್ಲಿ ಅದು ಎಷ್ಟರಮಟ್ಟಿಗೆ ಇದ್ದ್ರಿರಬಹುದು, ಅದು ಯಾವ ಯಾವ ಆಯಾಮಗಳಲ್ಲಿ ಪ್ರಕಟವಾಗಬಹುದು ಎಂಬುದನ್ನೂ ನೋಡಬೇಕಾಗುತ್ತದೆ.
ಯಾವಾಗಲೂ ಇಂತಹ ಅಮಾನವೀಯ ಮತ್ತು ಕ್ರೌರ್ಯಾತಿರೇಕದ ಘಟನೆಗಳು ವ್ಯಕ್ತಿಯ ಮನಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಲು ಅಗತ್ಯತೆಯನ್ನು ಒದಗಿಸುತ್ತದೆ. ಇಂತಹ ಅಧ್ಯಯನಗಳು ಕ್ರೌರ್ಯ ಮತ್ತು ಹಿಂಸೆಯನ್ನು ಮಾಡದಿದ್ದರೂ ಅವರಂತೆಯೇ ಇರುವ ಅನೇಕ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಾಗೊಂದು ವೇಳೆ ಅಂತಹ ಮನಸ್ಥಿತಿಯ ವ್ಯಕ್ತಿಗಳನ್ನು ಗುರುತಿಸಿದರೆ, ಅಥವಾ ಗುರುತಿಸಿಕೊಂಡರೆ ವಿಪರೀತಕ್ಕೆ ಹೋಗದಿರುವಂತೆ ನೋಡಿಕೊಳ್ಳಲು ಕೂಡಾ ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಸೈಕೋಪಾತ್’ಗಳು ಸೂಪರ್’ಫಿಶಿಯಲಿ ಆಕರ್ಶಕರಾಗಿರುತ್ತಾರೆ, ನಡೆಯಲ್ಲೋ, ನುಡಿಯಲ್ಲೋ, ರಂಗುರಂಗಾಗಿ ಆಕರ್ಷಕವಾಗಿರುವಂತೆ ತೋರುತ್ತಾರೆ. ಸಿಕ್ಕಾಪಟ್ಟೆ ’ತಲೆ’ ಇರುವ ವ್ಯಕ್ತಿಗಳಾಗಿದ್ದು ಕಿಲಾಡಿಗಳಾಗಿರುತ್ತಾರೆ. ಆದರೆ ಸರಿಯಾದ ತೀರ್ಮಾನಗಳನ್ನು ಕೈಗೊಳ್ಳುವುದರಲ್ಲಿ ಬಹಳ ಹಿಂದುಳಿದಿರುತ್ತಾರೆ. ಇತರರನ್ನು ಲಘುವಾಗಿ ಮತ್ತು ಕಡೆಗಣಿಸುವಂತೆಯೇ ನೋಡುವುದು, ವ್ಯಕ್ತಿಗಳನ್ನು ಬಳಸಿಕೊಳ್ಳುವುದು ಅವರ ಸಾಮಾನ್ಯ ಲಕ್ಷಣ. ’ನಾನು’ ಎನ್ನುವ ಅಹಂಕಾರ ಮತ್ತು ದುರಹಂಕಾರವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೋರುತ್ತಿರುತ್ತಾರೆ. ಪ್ರೀತಿಸಲು ಸಾಧ್ಯವಾಗದವರು, ಆಪ್ತತೆಗೆ ಒಳಗಾಗದವರು. ಕಾಮವನ್ನೇ ಪ್ರೇಮ ಎಂದು ಬಿಂಬಿಸುವವರು. ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಮುಲಾಜಿಲ್ಲದೇ ಎದುರಿಗಿನ ವ್ಯಕ್ತಿಗೆ ಯಾವ ರೀತಿಯಲ್ಲಿ ಘಾಸಿಯಾಗಬಹುದು ಎಂಬ ಆಲೋಚನೆಯೇ ಇಲ್ಲದೇ ವ್ಯಕ್ತಪಡಿಸುವವರು. ಹಠಾತ್ ಪ್ರವೃತ್ತಿಯೂ ಕೂಡಾ ಅವರಿಗೆ ಸಾಮಾನ್ಯ. ದಿಢೀರನೆ ಕೋಪಗೊಳ್ಳುವುದು, ಆ ಕೋಪವನ್ನು ಪ್ರಕಟಗೊಳಿಸಿಯೇ ತೀರಬೇಕು ಎಂಬ ಹಟಕ್ಕೆ ಬೀಳುವುದು, ಎಷ್ಟು ಕಾಲವಾದರೂ ಆ ಕೋಪವು ಶಮನವೇ ಆಗದಿರುವುದು ಕೂಡಾ ಅವರ ಸಾಮಾನ್ಯ ಸ್ವಭಾವ. ತಮ್ಮ ಕೆಲಸವನ್ನು ಮಾಡಿಕೊಳ್ಳಲು ಮಸ್ಕಾ ಹೊಡಿಯುವುದೂ ಕೂಡಾ ಇವರ ಸಾಮಾನ್ಯ ನಡವಳಿಕೆ. ಹಾಗೆ ತಾನು ನಟಿಸುತ್ತಿದ್ದೇನೆ ಮತ್ತು ತಾನು ನಟಿಸುತ್ತಿರುವ ಗುಣವು ತನ್ನ ನಿಜದ್ದಲ್ಲ ಎಂಬ ಅರಿವು ಅವರಿಗೆ ಸ್ಪಷ್ಟವಾಗಿಯೇ ಇರುತ್ತದೆ. ತಮ್ಮನ್ನು ತಾವು ನಿಗ್ರಹಿಸಿಕೊಳ್ಳಲು ಆಗದ ಅವರು ಕ್ರೌರ್ಯವನ್ನಾಗಲಿ, ತಮ್ಮ ಸೇಡಿನ ಪ್ರದರ್ಶನವನ್ನಾಗಲಿ ವಿಧವಿಧವಾಗಿ ಪ್ರಕಟಿಸಿಕೊಳ್ಳಬಲ್ಲರು. ಎಲ್ಲಾ ಸೈಕೋಪಾತುಗಳೂ ಕೂಡಾ ಕ್ರೂರಿಗಳೇ ಆಗಬೇಕಿಲ್ಲ. ಅವುಗಳಲ್ಲಿಯೂ ಕೂಡಾ ನಾನಾ ಶ್ರೇಣಿಗಳಿವೆ. ಒಟ್ಟಾರೆ ಸೈಕೋಪಾತ್ ನಮ್ಮ ಸುತ್ತಮುತ್ತಲಿನ ಜನರಲ್ಲಿ ಯಾರು ಬೇಕಾಗಿದ್ದರೂ ಆಗಿರಬಹುದು. ಒಂದು ವೇಳೆ ನಾವೂ ಕೂಡಾ ಆಗಿದ್ದಿರಬಹುದು. ಅಡಗಿಸಿಟ್ಟುಕೊಂಡಿರುವ ಬಯಕೆಗಳು, ವಿಚಾರಗಳು, ಅದುಮಿಟ್ಟುಕೊಂಡಿರುವಂತಹ ಭಾವನೆಗಳು, ಏಕಾಂಗಿತನ ಅಥವಾ ಒಬ್ಬೊಂಟಿತನ, ಸತತವಾಗಿ ವ್ಯಕ್ತಿಗಳಿಂದ ತಿರಸ್ಕಾರಕ್ಕೊಳಗಾಗುವುದು ಅಥವಾ ದೂಷಿಸಲ್ಪಡುವುದು, ಆತ್ಮಸ್ಥೈರ್ಯ ಇಲ್ಲದೇ ಇರುವುದು, ಒಡಕು ಸಂಸಾರಗಳು, ಮುರುಕು ಸಂಬಂಧಗಳು, ಸಂವೇದನಾಶೂನ್ಯ ಸಂಬಂಧಗಳ ವ್ಯವಹಾರಗಳು; ಹೀಗೆ ಹಲವಾರು ವಿಷಯಗಳು ಒಬ್ಬ ವ್ಯಕ್ತಿಯನ್ನು ಸೈಕೋಪಾತನ್ನಾಗಿ ಅಥವಾ ಇತರ ಗಂಭೀರ ಮನೋರೋಗಿಯನ್ನಾಗಿ ಮಾಡಬಹುದು. ಕೆಲವೊಂದು ಗಂಭೀರ ಸಮಸ್ಯೆಗಳು ಜೆನಿಟಿಕ್ ಕೂಡಾ ಆಗಿರಬಹುದು. ಆದರೆ ಆ ನಂತರ ಅಂತಹ ಮನಗೇಡಿತನವು ಆ ವ್ಯಕ್ತಿಯನ್ನು ಹೇಗೆ ರೂಪಿಸುತ್ತಾ ಹೋಗುವುದು ಎಂಬುದು ಮುಂದೆ ನಡೆಯುವ ಪ್ರಸಂಗಗಳನ್ನು ಆಧರಿಸಿರುತ್ತದೆ.
ಒಟ್ಟಾರೆ ದುರದೃಷ್ಟವಶಾತ್ ಅಫ್ತಾಬ್ ಮಾಡಿರುವ ಈ ಕೃತ್ಯವನ್ನು ಮುಂದಿಟ್ಟುಕೊಂಡು ಅವನಿಗೆ ಶಿಕ್ಷೆ ವಿಧಿಸಿಬಿಟ್ಟರೆ ಅದು ಖಂಡಿತ ಸಾಲದು. ಅವನ ಮನಸ್ಸು ಇಂತಹ ಕೆಲಸಕ್ಕೆ ಏಕೆ ಎಡೆ ಮಾಡಿತು ಎಂಬುದರ ಬಗ್ಗೆ ಕೇಸ್ ಸ್ಟಡಿ ಆಗಬೇಕು ಮತ್ತು ಅದು ಸಾರ್ವಜನಿಕರಿಗೆ ತಿಳಿಯಬೇಕು. ಹಾಗೆಯೇ ಶ್ರದ್ಧಾ ಕೂಡಾ ದುರದೃಷ್ಟವಶಾತ್ ಇಂತಹ ಕ್ರೌರ್ಯಕ್ಕೆ ಬಲಿಯಾದವಳಾದರೂ, ಇವಳ ಜೀವನ ಶೈಲಿ ಮತ್ತು ಮನೋಭಾವ ಅಚಾತುರ್ಯಗಳಿಗೆ ಎಡೆ ಮಾಡಿಕೊಟ್ಟಿತೇ ಎಂಬುದರ ಬಗ್ಗೆಯೂ ಕೂಡಾ ತಿಳಿಯಬೇಕಿದೆ. ಇಬ್ಬರ ಮನಸ್ಥಿತಿ ಮತ್ತು ಅವರ ಮನಸ್ಥಿತಿಗಳಿಂದಾಗಿ ಉಂಟಾದಂತಹ ಪರಿಸ್ಥಿತಿಯ ಅಧ್ಯಯನಗಳು ಒಂದಿಷ್ಟು ಮನೋಜಾಗೃತಿಯನ್ನು ಉಂಟು ಮಾಡಬಹುದೇನೋ ಎಂಬ ನಿರೀಕ್ಷೆ ನನ್ನದು. ಯಾವುದೇ ಒಳ್ಳೆಯ ಘಟನೆಯಾಗಲಿ, ಕೆಟ್ಟ ಘಟನೆಯಾಗಲಿ ಮನುಷ್ಯರಿಂದ ಸಂಭವಿಸುತ್ತಾ ಇವೆ ಎಂದರೆ ಅದಕ್ಕೆ ಕಾರಣ ಧರ್ಮವೋ, ಜಾತಿಯೋ, ದೇಶವೋ, ಭಾಷೆಯೋ ಅಲ್ಲ; ಆಯಾ ವ್ಯಕ್ತಿಯ ಮನಸ್ಥಿತಿಗಳು ಮಾತ್ರ ಎಂಬ ಎಚ್ಚರಿಕೆ ನಮಗಿರಲಿ ಅಷ್ಟೇ. ಕ್ರೌರ್ಯಕ್ಕೆ ಬಲಿಯಾದವರನ್ನು ಅನುಕಂಪದಿಂದ ನೋಡುತ್ತಾ ಅಪರಾಧಿಯ ಬಗ್ಗೆ ಕ್ರೂರ ದೃಷ್ಟಿ ಹೊಂದಿಬಿಟ್ಟರೆ ವಸ್ತುಸ್ಥಿತಿ ಕೊನೆಗೂ ತಿಳಿವುದಿಲ್ಲ. ಶ್ರದ್ಧಾ ಇವನ ಕೃತ್ಯಕ್ಕೆ ಬಲಿಪಶುವಾದರೆ, ಇವನು ಇವನ ಮನಸ್ಥಿತಿಯ ಬಲಿಪಶು. ಆದರೆ ಅಂತ ಮನಸ್ಥಿತಿಗೆ ಕಾರಣವೇನು ಎಂದು ತಿಳಿಯಲೇ ಬೇಕಲ್ಲಾ!

ಯೋಗೇಶ ಮಾಸ್ಟರ್, ಪ್ರಖ್ಯಾತ ಲೇಖಕರು, ಚಿಂತಕರು, ಬೆಂಗಳೂರು