ಹಂಸ ಕ್ರೌಂಚ ಚಕ್ರವಾಕದಂತಹ ಶತ ಶತ ಪಕ್ಷಿಸಂಕುಲ….

By admin

ಡಾ. ಅರ್ಜುನ ಯ. ಪಂಗಣ್ಣವರ, ಪ್ರಖ್ಯಾತ ಮಹರ್ಷಿ ವಾಲ್ಮೀಕಿ ಸಾಹಿತ್ಯ ಚಿಂತಕರು, ಬೆಳಗಾವಿ.

ಹಂಸ ಕ್ರೌಂಚ ಚಕ್ರವಾಕದಂತಹ ಶತ ಶತ ಪಕ್ಷಿಸಂಕುಲI
ಮರಳು-ನಡುಗಡ್ಡೆ ಅಲಂಕರಿಸಿವೆ, II
ಅರಳಿದ ಕೆಂಪು ಕಮಲಗಳು, ಮೊಗ್ಗಗಳುI
ತುಂಬಿದ ಮನಮೋಹಕ ದೃಶ್ಯ,ನೋಡು ಲಕ್ಷ್ಮಣಾ, II
ಇಲ್ಲಿಯೇ ವಾಸಿಸೋಣ, ಲಕ್ಷ್ಮಣಾI
ಮನೋಲ್ಲಾಸಿತ ಸೊಬಗು ನೀಡುವ ತಾಣ, II
ಕಿಷ್ಕಿಂಧವೂ ದೂರವಿಲ್ಲ ,ಕೇಳಿಸುವವುI
ದ್ವನಿ ನಾದ, ಕಿಷ್ಕಿಂಧ ಸಂಭ್ರಮದ, II
ಪತ್ನಿ ಹಿಂಪಡೆದ ಸುಗ್ರೀವ ಪಟ್ಟಕೇರುತಿಹನುI
ತನ್ನವರ ಮಧ್ಯೆ ಸಂಭ್ರಮದಿ”;II
ನುಡಿಯುತ ರಾಘವ ಲಕ್ಷ್ಮಣನೊಂದಿಗೆI
ಪ್ರಸವನ ಪರ್ವತ-ಗುಹೆ ಸೇರಿದ, II
ಪೂರ್ವದ ಬೆಟ್ಟದ್ಮೇಲೆ ಕಂಡು ಚಂದ್ರೋದಯI
ನೆನಪಿಸಿ ಸೀತೆಯನು, ಕಳಕೊಂಡ ಅಮೌಲ್ಯವನು,II
ಹೊಸಕಿತು ರಾಮನ ನೆಮ್ಮದಿ ಸೀತೆ ನೆನಪುI
ರಾತ್ರಿಕಳೆದರೂ ನಿದ್ರೆ ಬರಲಿಲ್ಲ,ರಾಮನಿಗೆ, II
ಅಣ್ಣನ ಮನದ ದುಗುಡು ತಿಳಿದ ಲಕ್ಷ್ಮಣ ನುಡಿದ:I
“ ಓ ಶೂರನೇ, ಸಾಕು ಶೋಕ, ನೆನಪುಗಳುII
ತರುತ್ತವೆ ಕೆವಲ ದುಃಖದುಸಿರು,I
ದುಃಖದಲಿ ನೀನೇ ಮುಳುಗಿದರೆ II
ಆ ರಾಕ್ಷಸನನ್ನು ವಧಿಸುವದ್ಹೇಗೆ? ಶರತ ಋತು ಆಗಮನ ಕಾಯುI
ರಾವಣ ವ ಅವನ ಸೈನ್ಯ ಸಂಹರಿಸೋಣ”;II
ಲಕ್ಷ್ಮಣನ ಸಾಂತ್ವನ ಶಬ್ದ-ಲಾಲಿಸಿ ನುಡಿದ ಲಕ್ಷ್ಮಣನಿಗೆ ರಾಘವಾ:I
“ಮನದಾಳದ ವಾತ್ಸಲ್ಯದ ಮಾತುಗಳನಾಡಿದಿ, II
ನಿನ್ನ ಶಬ್ದದಗಳಂತೆ ನಿನ್ನ ಧೈರ್ಯವು ಸತ್ಯ,I
ಶೋಕವು ದುರ್ಬಲಗೊಳಿಸುವದು,ಹೌದು, II
ಬರುವ ವಿಜಯಕ್ಕಾಗಿ ಶೋಕವನು ತೊರೆಯುವೆ,I
ಕಾಯುವೆ ಶರದೃತು ದಾರಿ , II
ಸುಗ್ರೀವ ವ ನದಿಯ ಕರುಣೆಯನ,I
ನಿನ್ನ ಮಾತು ಪಾಲಿಸಿ, II
ಉಪಕಾರಕೆ ಪ್ರತ್ಯುಪಕಾರ ಲೇಸು,I
ಉಪಕಾರಕ್ಕೆ ಅಪಕಾರ ಹೃದಯ ಘಾಸಿಸುವದು”;II
ರಾಮನ ದಿಟನುಡಿ ಕೇಳಿ ಮುಗಿದು ಕೈI
ಲಕ್ಷ್ಮಣ, ನುಡಿದ ರಾಮನಿಗೆ ಮನಶಾಂತಿ ಮಾತು: II
“ ಓ ಪ್ರಭುವೇ, ನಿನ್ನೀಚ್ಚೆಯಂತೆ ನಡೆದುಕೊಳ್ಳುನುI
ಸುಗ್ರೀವ, ತಡೆ ಶರತೃತು ಬರುವತನಕ.”II
ಕಿಷ್ಕಿಂಧಕಾಂಡ ರಾಮಾಯಣ

ರಾಮನು ಲಕ್ಷ್ಮಣನೊಂದಿಗೆ ಪ್ರಸವನ-ಪರ್ವತದತ್ತ ನಡೆದ ಮತ್ತು ಪ್ರಸವನ-ಪರ್ವತ ಪ್ರದೇಶದ ಸೊಬಗನ್ನು ವರ್ಣಿಸಿದ, ಅದರ ಮಧ್ಯೆ ಸೀತೆಯನ್ನು ನೆನಪಿಸಿ ರಾಮನು ನೊಂದ ಮತ್ತು ರಾಮನಿಗೆ ಲಕ್ಷ್ಮಣನು ಸಾಂತ್ವನ ಹೇಲಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ಅಲಂಕಾರಮಯವಾಗಿ ಬಣ್ಣಿಸಿರುವರು, ಅದರಲ್ಲಿ ಮೂಡಿ ಬರುವ ಅಂಶಗಳು (1) ತಿಮಿದ  ವಕುಲ  ಕೆತಕ ತಿನಿಶ ನೀಪ ವಿಭಿನ್ನ ವೃಕ್ಷಗಳು ಬೆಳೆದು ನದಿಗುಂಟ ಹಾರದಂತೆ ಸೊಬಗು ನೀಡಿರುವ ದೃಶ್ಯ, ಹಂಸ ಕ್ರೌಂಚ ಚಕ್ರವಾಕದಂತಹ ಶತ ಶತ (ನೂರು ನೂರರಹಿಂಡು) ಪಕ್ಷಿಸಂಕುಲ  ಮರಳು-ನಡುಗಡ್ಡೆ ಅಲಂಕರಿಸಿದ ದೃಶ್ಯ, ಅರಳಿದ ಕೆಂಪು ಕಮಲಗಳು, ಮೊಗ್ಗಗಳು ತುಂಬಿದ ಮನಮೋಹಕ ದೃಶ್ಯ ಮನೋಲ್ಲಾಸಿತ ಸೊಬಗು ನೀಡುವ ತಾಣ ಮತ್ತು ಅದು ಅಲ್ಲಿಂದ ಕಿಷ್ಕಿಂಧಕ್ಕೆ ಸಮೀಪ ಇರುವ, ಕಿಷ್ಕಿಂಧ ಸಂಭ್ರಮದ ದ್ವನಿ ನಾದ ಕೇಳಿಸುವ ತಾಣವು ತಮಗೆ ವಾಸಿಸಲು ಯೋಗ್ಯ ಗುಹೆ ಎಂದು ರಾಮನು ಲಕ್ಷಣನಿಗೆ ಪುನಃ ಹೇಳಿದನ್ನುವಿವರಿಸುವ ಮೂಲಕ ಆದಿಕವಿ ಆ ತಾಣದ ಸೌಂದರ್ಯವನ್ನು ವಿವರಿಸಿರುವರು, ಆ ಪರಿಸರ ಇಂದಿಗೂ ಹಂಪಿ-ಆನೆಗೊಂದಿಯಲ್ಲಿ ಅನುಭವಕ್ಕೆ ಬರುವದು, (2)  ಅದೇವೇಳೆ ಪೂರ್ವದ ಬೆಟ್ಟದ್ಮೇಲೆ ಚಂದ್ರೋದಯವನ್ನು ಕಂಡು ರಾಮನು ಕಳಕೊಂಡ ಅಮೌಲ್ಯ ವಸ್ತುವಿನಂತೆ ಸೀತೆಯನ್ನು ನೆನಪಿಸಿಕೊಂಡ, ಸೀತೆಯ ನೆನಪು  ರಾಮನ ನೆಮ್ಮದಿಯನ್ನು ಹಾಳುಮಾಡಿದ, ರಾತ್ರಿಕಳೆದರೂ ರಾಮನಿಗೆ ನಿದ್ರೆ ಬಾರದ ಮತ್ತು ಅಣ್ಣನ ಮನದ ದುಗುಡು (ದುಃಖ) ತಿಳಿದ ಲಕ್ಷ್ಮಣನು ರಾಮನಿಗೆ  ಸಾಕು ಶೋಕ, ನೆನಪುಗಳು ಕೆವಲ ದುಃಖದುಸಿರು ತರುತ್ತವೆ,   ದುಃಖದಲಿ ನೀನೇ ಮುಳುಗಿದರೆ ಆ ರಾಕ್ಷಸನನ್ನು ವಧಿಸುವದ್ಹೇಗೆ? ಶರತ ಋತುವಿನ ಆಗಮನವನ್ನು ಕಾಯು, ರಾವಣ ಮತ್ತು ಅವನ ಸೈನ್ಯವನ್ನು ಸಂಹರಿಸೋಣ ಎಂದು ಸಮಾದಾನದ ಮಾತುಗಳನ್ನು ಆಡಿದ ಸನ್ನಿವೇಶವನ್ನು ಆದಿಕವಿ ಮನದಟ್ಟುವಂತೆ ವಿವರಿಸರುವರು, ಅದರಂತೆ ನೆನಪು, ಮನುಷ್ಯನನ್ನು ದುರ್ಬಲಗೊಳಿಸುವದು— ಎಷ್ಟೇ ಮನ್ಮೋಹಕ ಉಲ್ಲಾಸಕರ ಪರಿಸರದಲ್ಲಿದ್ದರೂ ಬೆಟ್ಟದಲ್ಲಿಯ ಚಂದ್ರೋದಯ ದೃಶ್ಯವು ಸೀತೆಯನ್ನು ನೆನಪಿಸುವ ಮೂಲಕ ರಾಮನ ನೆಮ್ಮದಿಯನ್ನು ಹಾಳುಮಾಡಿತು; ನೆನಪುಗಳು ಕೆವಲ ದುಃಖದುಸಿರು ತರುತ್ತವೆ ಮತ್ತು ಶೋಕಕ್ಕೆ ಕಾರಣವಾಗುವದು, ಹೀಗೆ  ಶೋಕವು ಮನುಷ್ಯನನ್ನು ದುರ್ಬಲಗೊಳಿಸುವದು ಎಂಬ ಬದುಕಿನ ವಾಸ್ತವಿಕ ಸತ್ಯವನ್ನು ಆದಿಕವಿ ತಿಳಿಸಿರುವರು,  (3)  ಲಕ್ಷ್ಮಣನ ಸಾಂತ್ವನದ ಮಾತುಗಳನ್ನು ಕೇಳಿ ರಾಮನು ಲಕ್ಷ್ಮಣನಿಗೆ “ಮನದಾಳದ ವಾತ್ಸಲ್ಯದ ಮಾತುಗಳನಾಡಿರುವೆ, ನಿನ್ನ ಶಬ್ದದಗಳಂತೆ ನಿನ್ನ ಧೈರ್ಯವು ಸತ್ಯ, ಶೋಕವು ಮನುಷ್ಯನನ್ನು ದುರ್ಬಲಗೊಳಿಸುವದು,ನೀನು ಹೇಳುವದು ಸರಿ, ನಾನು ಬರುವ ವಿಜಯಕ್ಕಾಗಿ ಶೋಕವನು ತೊರೆಯುವೆನು, ನಾನು ಶರದ ಋತುವಿನ ದಾರಿ ಕಾಯುವೆ, ಅದರಂತೆ ನಿನ್ನ ಮಾತು ಪಾಲಿಸಿ ಸುಗ್ರೀವನ (ಮಳೆಗಾಲ ಮುಗಿದ ಬಳಿಕ ಹೊರ ಬರುವದನ್ನು) ಮತ್ತು ನದಿಯ ಕರುಣೆಯನ್ನೂ (ಮಹಾಪೂರ ಇಳಿಯವದನ್ನು) ಕಾಯುವೆ; ಉಪಕಾರಕ್ಕೆ ಪ್ರತ್ಯುಪಕಾರ ಲೇಸು, ಉಪಕಾರಕ್ಕೆ ಅಪಕಾರ ಹೃದಯ ಘಾಸಿಸುವದು”ಎಂದು ತಾನು ತಾಳುವ ಸೂಚನೆ ಮಾತಗಳನ್ನು ಆಡುವನು, ದುಃಖ ವನ್ನು ತಾಳಿದವನೇ ಬಾಳುವನು ಎಂಬ ಸಂದೇಶವನ್ನು ಆದಿಕವಿ ಈ ಮೂಲಕ ಜಗಕ್ಕೆ ತಿಳಿಸಿರುವರು,(4)  ರಾಮನ ದಿಟ  ಮಾತುಗಳನ್ನು ಕೇಳಿ ರಾಮನಿಗೆ ಕೈ ಮುಗಿದು ಲಕ್ಷ್ಮಣನು ರಾಮನ ಮುಂದೆ ಸುಗ್ರೀವನು ಕೊಟ್ಟ ವಚನ ಪಾಲಿಸುವ ವ್ಯಕ್ತಿ, ತಾವು ಶರದ ಋತು ಬರುವತನಕ ಕಾಯಬೇಕು ಎಂದು ಸುಗ್ರೀವನ ಬಗ್ಗೆ ಸಂದೇಹ ಮಾಡದಂತೆ ಮನಶಾಂತಿ ಮಾತುಗಳನ್ನು ಹೇಳಿದನು, ಉಪಕಾರಕ್ಕೆ ಪ್ರತ್ಯುಪಕಾರ ಲೇಸು, ಉಪಕಾರಕ್ಕೆ ಅಪಕಾರ ಹೃದಯ ಘಾಸಿಸುವದು— ಮಳೆಗಾಲದುದ್ದಕ್ಕೂ ಅಂತಪುರ ಸುಖಗಳಲ್ಲಿ ಸುಗ್ರೀವನು ತನ್ನ ವಚನ ಮರೆಯಬಹುದೆ ಎಂಬ ಸಂದೇಹವು ರಾಮನಲ್ಲಿ ಮೊಳೆತದ್ದು ರಾಮನ  ಮಾತುಗಳಿಂದ ಸ್ಪಷ್ಟವಾದದ್ದು ಮನುಷ್ಯನ ಸಹಜ ಸಂಶಯ-ಗುಣವನ್ನು ಆದಿಕವಿ ಇಲ್ಲಿ ವ್ಯಕ್ತ ಪಡಿಸಿರುವರು.

-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ, ಬೆಳಗಾವಿ.