
ಜಿ.ನಾಗರಾಜು ಗಾಣದಹುಣಸೆ, ಖ್ಯಾತ ಬರಹಗಾರರು
ಚಿತ್ರದುರ್ಗವೆಂದರೆ ಮದಕರಿನಾಯಕ, ಮದಕರಿನಾಯಕ ಎಂದರೆ ಚಿತ್ರದುರ್ಗ ಎಂದು ಪ್ರಖ್ಯಾತಿಯಾಗಿದೆ. ಈ ನಾಡಿಗೆ ಮದಕರಿನಾಯಕರ ಕೊಡುಗೆ ಅಪಾರವಾಗಿದೆ. ಮದಕರಿ ನಾಯಕರು ಕೆರೆ, ಕಟ್ಟೆ, ಮಠ, ಮಂದಿರಗಳನ್ನು ನಿರ್ಮಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.
ಹಿಂದಿನ ಚುನಾವಣಾ ಪೂರ್ವದಲ್ಲಿ ಅಮಿತ್ ಷಾ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಮುಖಂಡರು ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಬಿಜೆಪಿ ಮುಖಂಡರೆಲ್ಲ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಸಮಾಜದ ಮುಖಂಡರು ಅಂದು ಭರವಸೆ ನೀಡಿದ್ದ ಬಿಜೆಪಿ ಮುಖಂಡರಿಗೆ ನೆನಪು ಮಾಡಲು ಈ ವಿಷಯವಾಗಿ ಅಭಿಯಾನ ಮಾಡಬೇಕು.
ಮಹಾನ್ ನಾಯಕರನ್ನು ಜಾತಿ-ಧರ್ಮಕ್ಕೆ ಸೀಮಿತಗೊಳಿಸದೆ ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಿಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ.

ಯಾವುದೇ ತಂತ್ರಜ್ಞಾನ, ವಿಜ್ಞಾನ ವ್ಯವಸ್ಥೆ ಇಲ್ಲದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಲ್ಲು, ಬಂಡೆಗಳನ್ನಿಟ್ಟು ಬೃಹತ್ ಕೋಟೆ ನಿರ್ಮಾಣ ಮಾಡಿರುವುದು ಅದ್ಭುತಗಳಲ್ಲಿ ಒಂದು. ಇಂದು ಎಲ್ಲ ರೀತಿಯ ತಂತ್ರಜ್ಞಾನ ಹಾಗೂ ಬೃಹತ್ ಯಂತ್ರೋಕರಣಗಳಿದ್ದರೂ ಅಂತಹ ಕೋಟೆ ನಿರ್ಮಾಣ ಮಾಡುವುದು ಅಸಾಧ್ಯ.

ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ಅಭಿವೃದ್ಧಿಯಾದರೆ ಇಡೀ ಜಿಲ್ಲೆ ಪ್ರವಾಸೋದ್ಯಮದಲ್ಲಿ ಪ್ರಗತಿ ಸಾಧಿಸಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ನಡೆಸಿ ಕೋಟೆಗೆ ಕಾಯಕಲ್ಪ ಒದಗಿಸಬೇಕು. ಹಂಪಿಗೆ ಸಿಕ್ಕ ವಿಶ್ವ ಮಾನ್ಯತೆ ಚಿತ್ರದುರ್ಗದ ಕೋಟೆಗೆ ಸಿಗುವಂತಾಗಬೇಕು.
ಚಿತ್ರದುರ್ಗದ ಇತಿಹಾಸ ಉಳಿಸಲು ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣ ಮಾಡಿ ನಾಡಪ್ರಭು ಮದಕರಿನಾಯಕರ ಕೊಡುಗೆ ಸ್ಮರಿಸಬೇಕು.
– ಜಿ.ನಾಗರಾಜು ಗಾಣದಹುಣಸೆ, ಖ್ಯಾತ ಬರಹಗಾರರು
ವಾಲ್ಮೀಕಿ ಕರ್ನಾಟಕ. 9035169758
