
ಯಾದಗಿರಿ : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಬೆಂಬಲಿಸಿ ಜಿಲ್ಲಾ ಬಿಜೆಪಿ ಸೇರಿದಂತೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ಶನಿವಾರ ಸಂಜೆ ಮೈಲಾಪುರ ಬೇಸ್ ನಿಂದ ಗಾಂಧಿ ವೃತ್ತದ ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ಗಾಂಧಿ ವೃತದಲ್ಲಿ ಸಮಾವೇಶಗೊಂಡ ಯಾತ್ರೆಯಲ್ಲಿ ಸಾವಿರಾರು ನಾಗರಿಕರು ಭಾರತ್ ಮಾತಾ ಕೀ ಜೈ, ಭಾರತೀಯ ಸೈನಿಕರಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಭಾರತೀಯ ಮಾಜಿ ಯೋಧರ ಸಂಘದ ಜಿಲ್ಲಾದ್ಯಕ್ಷ ಲಿಂಗನಗೌಡ ಮಾಲೀಪಾಟೀಲ್ ಮಾತನಾಡಿ, ಈ ಆಪರೇಷನ್ ಸಿಂಧೂರ್ ಮುಗಿದಿಲ್ಲ. ಇನ್ನೊಮ್ಮೆ ನಡೆದರೆ ಪಾಕಿಸ್ತಾನ ನಿರ್ಣಾಮವಾಗಲಿದೆ. ಪಿಒಕೆ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು. ಪಾಕಿಸ್ತಾನಕ್ಕೆ ಮಹಿಳೆಯರು ಸಮರ್ಥ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.
ನಮ್ಮ ಯುವಕರು ದೇಶಾಭಿಮಾನ ಬೆಳಸಿಕೊಳ್ಳುವ ಅಗತ್ಯವಿದೆ. ದೇಶದ ಸುರಕ್ಷತೆಗೆ ನಮ್ಮಇಡೀ ಸೈನ್ಯ ತಮ್ಮ ಕುಟುಂಬ ತೊರೆದು ಗಡಿಯಲ್ಲಿ ಶತೃಗಳೊಂದಿಗೆ ನಿರಂತರ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೈನ್ಯ ಮತ್ತು ಸೈನಿಕರಿಗೆ ಅಪಮಾನಗೊಳಿಸುವ ಮಾತನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮಿಗಳು ಯಾತ್ರೆಗೆ ಚಾಲನೆ ನೀಡಿದರು. 20ಕ್ಕೂ ಹೆಚ್ಚು ಮಾಜಿ ಯೋಧರು ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ,ಯುಡ ಅಧ್ಯಕ್ಷ ವಿನಾಯಕ ಮಾಲಿಪಾಟೀಲ,ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ನಾಗರತ್ನ ಕುಪ್ಪಿ,ಡಾ.ಶರಣಭೂಪಾಲರಡ್ಡಿ,ಚೇಂಬರ್ಸ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ದೀನೇಶ ದೋಕಾ,ಅಕ್ಕಿ ಗಿರಣಿ ಮಾಲೀಕ ಸಂಘ ಜಿಲ್ಲಾಧ್ಯಕ್ಷ ಹನಮಾನ ದಾಸ ಮುಂಡಸು,ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ ಎನ್ ಭೀಮನು ನಾಯಕ, ಬಂಗಾರ ವರ್ತಕರು ಅಧ್ಯಕ್ಷ ವಿಜಯ್ ಬಟಡ,ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಶಿವು ಸಂಕೂಲರ,ಭಾರತೀಯ ವೈದ್ಯ ಸಂಘದ ಜಿಲ್ಲಾಧ್ಯಕ್ಷ ಡಾ. ಪದಾಧಿಕಾರಿಗಳು ,ಯಿಮ್ಸ ವೈದ್ಯಕೀಯ ವಿದ್ಯಾರ್ಥಿಗಳು, ಲಿಂಗಪ್ಪ ಹತ್ತಿಮನಿ,ಮಾಜಿ ಯೋಧ ರಾಜಶೇಖರಬಾಪುರೆ,ತೀಪ್ಪಣ್ಣಗೌಡ,ಮಡಿವಾಳಪ್ಪ,ವಿಶ್ವರಾಜ ಬಿರಾದಾರ, ಅಮೀನ ರೆಡ್ಡಿ ಯಾಳಗಿ , ನ್ಯಾಯವಾದಿ ಸಂಘದ ಅಧ್ಯಕ್ಷ ಸಿ.ಎಸ್ ಮಾಲಿಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು….
