“ಕೊಪ್ಪಳ| ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ನೀಡಲು ಹಿಂದೇಟು ಹಾಕುತ್ತಿರುವ ವಿಶ್ವವಿದ್ಯಾಲಯಗಳ ಧೋರಣೆ ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ”

Contents
“ಕೊಪ್ಪಳ| ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ನೀಡಲು ಹಿಂದೇಟು ಹಾಕುತ್ತಿರುವ ವಿಶ್ವವಿದ್ಯಾಲಯಗಳ ಧೋರಣೆ ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ” • ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ : ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸೇರಿ ಹಲವು ವಿಶ್ವವಿದ್ಯಾಲಯಗಳ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಹಿಂದೇಟು ಹಾಕುತ್ತಿರುವ ವಿಶ್ವವಿದ್ಯಾಲಯಗಳ ಧೋರಣೆ ಖಂಡಿಸಿ ಎಸ್ ಎಫ್ ಐ ನೇತೃತ್ವದಲ್ಲಿ ನಗರದ ಅಶೋಕ ವೃತ್ತದಿಂದ ತಹಸೀಲ್ದಾರ ಕಚೇರಿವರೆಗೆ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಬೇಡಿಕೆಯ ಮನವಿ ಪತ್ರವನ್ನು ಕೊಪ್ಪಳ ತಹಸೀಲ್ದಾರ ಅವರ ಮೂಲಕ ಸಿ.ಎಂ.ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷ ಶಿವುಕುಮಾರ್ ಅವರು ಮಾತನಾಡಿ, ವಿದ್ಯಾರ್ಥಿಗಳ ಅಂಕಪಟ್ಟಿ ಶುಲ್ಕವನ್ನು ಕಟ್ಟಿ ಪರೀಕ್ಷೆ ಬರೆದು ಪಾಸ್ ಆಗಿದ್ದರೂ, ಹಲವಾರು ವರ್ಷಗಳಿಂದ ಮೂಲ ಮಾರ್ಕ್ಸ್ ಕಾರ್ಡ್ ಶೀಟ್/ಅಂಕಪಟ್ಟಿ ಗಳನ್ನು ನೀಡದೇ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದಾರೆ ಎಂದು ದೂರಿದರು.ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ ,ಪ್ರತ್ಯೇಕವಾಗಿ ಅಂಕಪಟ್ಟಿ ಶುಲ್ಕ ಕಟ್ಟಿದ್ದರು ಕೂಡ ಆನ್‌ಲೈನ್‌ನಲ್ಲಿ ಡಿಜಿಟಲ್ ಮಾರ್ಕ್ಸ್ ಕಾರ್ಡ್ ಮಾತ್ರ ಕೊಡುತ್ತಾರೆ.ಆದರೆ ಅದು ಸರ್ಕಾರಿ ಉದ್ಯೋಗ, ಉನ್ನತ ವಿದ್ಯಾಭ್ಯಾಸ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಅವರು ಉದ್ಯೋಗ ಅಥವಾ ಮುಂದಿನ ಓದಿಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶೀಘ್ರದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದೆ ಸಂಘಟನೆಯಿಂದ ಬೃಹತ್ ಪ್ರತಿಭಟನೆ ಕೈಗೊಂಡು ವಿಶ್ವ ವಿದ್ಯಾಲಯ ಗಳ ಮುತ್ತಿಗೆ ಹಾಕುತ್ತೇವೆ ಎಂದು ಈ ಪ್ರತಿಭಟನೆ ಮೂಲಕ ಎಸ್ ಎಫ್ ಐ ಜಿಲ್ಲಾ ಸಮಿತಿಯು ಎಚ್ಚ್‌ರಿಕೆ ನೀಡುತ್ತದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶರೀಫ್ ಎಂ, ನಾಗರಾಜ್. ಯು, ಜಂಟಿ ಕಾರ್ಯದರ್ಶಿ ಬಸಯ್ಯ , ಮುಖಂಡರಾದ ಮಂಜುನಾಥ್ ಚಳ್ಳಾರಿ, ಯಮನೂರ ಸಿ, ದೊಡ್ಡಬಸವ,ಹುಲಿಗೆಮ್ಮ ಇಂದರಾಗಿ, ಪೂಜಾ, ಅಮೃತ ಸೇರಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
