BIG NEWS : ಕೊಪ್ಪಳ| “ಸರ್ವಾಂಗೀಣ ಅಭಿವೃದ್ದಿಗಾಗಿ ಒತ್ತಾಯಿಸಿ : ಕುಕನೂರು ಪಟ್ಟಣ ಸಂಪೂರ್ಣ ಬಂದ್ ಯಶಸ್ವಿ”

By admin

” ಕೊಪ್ಪಳ| ಸರ್ವಾಂಗೀಣ ಅಭಿವೃದ್ದಿಗಾಗಿ ಒತ್ತಾಯಿಸಿ : ಕುಕನೂರು ಪಟ್ಟಣ ಸಂಪೂರ್ಣ ಬಂದ್ ಯಶಸ್ವಿ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕುಕನೂರ:

 ತಾಲ್ಲೂಕು ಆಡಳಿತ ಸೌಧ, ನ್ಯಾಯಾಲಯ ಸಂಕೀರ್ಣ ಮತ್ತು ಬುದ್ಧ ಬಸವ ಅಂಬೇಡ್ಕರ್ ಭವನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳಿಗಾಗಿ ಆಗ್ರಹಿಸಿ ಕುಕನೂರ ತಾಲ್ಲೂಕು ಅಭಿವೃದ್ದಿ ಸಮಿತಿ,  ವಕೀಲರ ಸಂಘ, ಕನ್ನಡಪರ ಸಂಘಟನೆಗಳು, ಹಮಾಲರ ಸಂಘ, ಕ್ರೀಡಾ ಪ್ರೇಮಿಗಳ ಸಂಘ, ಕಟ್ಟಡ ಕಾರ್ಮಿಕರ ಸಂಘ, ದಲಿತ ಸಂಘಟನೆಗಳು ಹಾಗೂ ಆಲ್ ಇಂಡಿಯಾ ಬಂಜಾರ ಸೇನೆ, ವರ್ತಕರ ಸಂಘ,ರೈತಪರ ಸಂಘಟನೆಗಳು, ಸುಡುಗಾಡ ಸಿದ್ಧರ ಸಂಘ ಸೇರಿ ಹಲವು ಸಂಘ ಸಂಸ್ಥೆಗಳು ಕುಕನೂರ್‌ ಪಟ್ಟಣ ಸ್ವಯಂ ಪ್ರೇರಿತ್‌ ಬಂದ್‌ ಕರೆಗೆ  ಬೆಂಬಲ ನೀಡಿ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಈ ಬಂದ್ ನಿಂದಾಗಿ ಸಾಕಷ್ಟು ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಪ್ರತಿಭಟನಾನಿರತರು ರಸ್ತೆ ಮಧ್ಯದಲ್ಲಿ ಪ್ರಮುಖ ವೃತ್ತಗಳಲ್ಲಿ ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಅಲ್ಲದೇ ಪಟ್ಟಣದಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆಗಳು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿದ್ದು ಪರಿಣಾಮ ವ್ಯಾಪರ ವಹಿವಾಟು ಸ್ಥಗಿತಗೊಂಡಿತ್ತು, ಶಾಲಾ ಕಾಲೇಜುಗಳು ಸಹ ಮುಚ್ಚಿದು, ಬಂದ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣದ ಎಪಿಎಂಸಿ ಯಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಅಲ್ಲಿಂದ  ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಶಿರೂರ ವೀರಭದ್ರಪ್ಪ ಸರ್ಕಲ್‌ ನಿಂದ ತೇರಿನ ಗಡ್ಡಿ ವೃತ್ತ ಮಾರ್ಗವಾಗಿ ಕೋಳಿಪೇಟೆ ,ಅಂಬೇಡ್ಕರ್‌ ಸರ್ಕಲ್‌ ನಿಂದ ಮರಳಿ  ಶಿರೂರ ವೀರಭದ್ರಪ್ಪ ಸರ್ಕಲ್‌ ನಲ್ಲಿ ಆಗಮಿಸಿ ಬೃಹತ್‌ ಪ್ರತಿಭಟನೆ ನಡೆಸಿದರು. ಬಳಿಕ ಸಹಾಯಕ ಆಯುಕ್ತ ಕ್ಯಾಪ್ಟನ್‌ ಮಹೇಶ್‌ ಮಾಲಗತ್ತಿ ಅವರಿಗೆ ಮನವಿ ನೀಡಿ, ಪ್ರಮುಖ ಬೇಡಿಕೆಗಳು ಬಗೆಹರಿಸುವಂತೆ ಒತ್ತಾಯಿಸಿದರು. 

ಪಟ್ಟಣದಲ್ಲಿ ಪ್ರತಿಭಟನೆಯ ಬಿಸಿಯಿಂದ  ಶುಭಕಾರ್ಯಗಳಿಗೆ ಹೋಗಬೇಕಾದ ಸಾರ್ವಜನಿಕರು ಬಸ್ಸಿನ ವ್ಯವಸ್ಥೆಯಿಲ್ಲದೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು. ಸುತ್ತಮುತ್ತಲಿನ ಊರುಗಳಿಗೆ ಹೋಗುವ ಜನರು, ಹಿರಿಯರು, ಮಕ್ಕಳನ್ನು ಕರೆದುಕೊಂಡು ನಡೆದುಕೊಂಡೆ ಹೋಗುವ ಪರಿಸ್ಥಿತಿ ಕೂಡ ಕಂಡು ಬಂತು.

ತಾಲ್ಲೂಕು ಕೇಂದ್ರವಾಗಿ ಸುಮಾರು ಎಂಟು ವರ್ಷ ಕಳೆದರೂ ಸಹ ಸರ್ಕಾರಿ ಕಾರ್ಯಗಳು ಸಮರ್ಪಕವಾಗಿ ಕಾರ್ಯಾರಂಭ ಮಾಡಿರುವುದಿಲ್ಲ ಮತ್ತು ಸೂಕ್ತ ಕಟ್ಟಡ ನಿರ್ಮಿಸಿ ತಾಲೂಕ ಕಾರ್ಯಾಲಯಗಳನ್ನು ಪ್ರಾರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕುಕನೂರು ಬಂದ್ ನಡೆಯಿತು.

ಹಿರಿಯ ಹೋರಾಟಗಾರ ಸತ್ಯನಾರಾಯಣ ಅವರು ಮಾತನಾಡಿ, ಆಡಳಿತ ಸೌಧಕ್ಕಾಗಿ 30 ಕೋಟಿ, ನ್ಯಾಯಾಲಯಗಳ ಸಂಕೀರ್ಣ50 ಕೋಟಿ ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 15 ಕೋಟಿ ರೂಪಾಯಿಗಳನ್ನು ಈಗಾಗಲೇ ಮಂಜೂರು ಮಾಡಿ ಪಟ್ಟಣದ ಗುದ್ನೆಪ್ಪನಮಠ ಪ್ರದೇಶದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಜಾಗವನ್ನು ಸರ್ವೆ ನಂಬರ್ 78ರ ಗುರುತಿಸಿದ್ದು ಸರ್ಕಾರದಿಂದ ಅನುಮೋದನೆ ಸಹ ದೊರೆತಿರುತ್ತದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಸರ್ಕಾರಿ ಕಾರ್ಯಾಲಯ ನಿರ್ಮಿಸಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಷೆ ತಂದಿರುವುದು ತಾಲೂಕಿನ ಸರ್ವಾಂಗೀನ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಿದೆ ಎಂದು ಕಿಡಿಕಾರಿದರು.

 ಪ್ರತಿಭಟನೆಯಲ್ಲಿ ಪ್ರಮುಖರಾದ ಈರಪ್ಪ ಕುಡುಗುಂಟಿ, ಅಶೋಕ ತೋಟದ, ಗಗನ ನೋಟಗಾರ, ರಾಮಣ್ಣ ಬಂಕದ ಮನೆ, ಸಂಗಮೇಶ ಗುತ್ತಿ, ರೆಹಮಾನ್ ಸಾಬ್ ಮಕಪ್ಪನವರ್, ಬಸವರಾಜ ಜಂಗ್ಲಿ, ರಮೇಶ್ ಗಜಕೋಶ, ಪ್ರಶಾಂತ್ ಆರು ಬೆರಳಿನ,ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರಲೆಕೊಪ್ಪ, ಸಿದ್ದು ವಾಲ್ಮೀಕಿ, ರವಿ ನಾಲ್ವಡ, ರಘು ಕಾತರಕಿ ಸೇರಿದಂತೆ ನೂರಾರು ಜನ  ಪಾಲ್ಗೊಂಡಿದ್ದರು.

ತಾಲೂಕ ಕ್ರೀಡಾಂಗಣ ನಿರ್ಮಾಣ ವೇದಿಕೆಯ ಪ್ರಮುಖರಾದ ಚಂದ್ರಕಾಂತ ಗುಡಿಮನಿ ಮಾತನಾಡಿ, ಪಟ್ಟಣವು 30ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಂದೇ ಒಂದು ಕ್ರೀಡಾಂಗಣವನ್ನು ಸಹ ಹೊಂದಿರುವುದಿಲ್ಲ. ಇದಕ್ಕೆ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಾಗಿ ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿದ್ದು ಪೊಲೀಸ್ ಹಾಗೂ ಸೇನೆ ಸೇರುವ ಉದ್ದೇಶ ಹೊಂದಿರುವ ಯುವಕರು ದೈಹಿಕ ಸಾಮರ್ಥ್ಯ ಉದ್ದೇಶದಿಂದ ಕ್ರೀಡಾ ಚಟುವಟಿಕೆಗಾಗಿ ಬೇರೆ ಬೇರೆ ಕಡೆ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಆದ್ದರಿಂದ ಶೀಘ್ರದಲ್ಲಿ ತಾಲೂಕ ಕ್ರೀಡಾಂಗಣ ನಿರ್ಮಾಣಗೊಳ್ಳಲಿ ಎಂದು ಆಗ್ರಹಿಸಿದರು.

“ಮಂಗಳೂರು ಮತ್ತು ಕುಕುನೂರು ಹೋಬಳಿ ಒಳಗೊಂಡಂತೆ ಕುಕನೂರು ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಿ ಸುಮಾರು ಎಂಟು ವರ್ಷಗಳು ಕಳೆದರೂ ಸಹ ಇಂದಿಗೂ ಪಟ್ಟಣದಲ್ಲಿ ಸಂಪೂರ್ಣವಾಗಿ ತಾಲೂಕ ಕೇಂದ್ರದಲ್ಲಿ ಆಡಳಿತ ಮಾಡಿಸಬೇಕಾದ ಸರ್ಕಾರಿ ಕಾರ್ಯಾಲಯಗಳು ಕಾರ್ಯ ಆರಂಭ ಮಾಡದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ”.
– ಸಿದ್ದಯ್ಯ ಕಳ್ಳಿಮಠ,ಹೋರಾಟಗಾರ