“ಗಂಗಾವತಿ| ಪೊಲೀಸರ ಭರ್ಜರಿ ದಾಳಿ: 2.80 ಲಕ್ಷ ಮೌಲ್ಯದ ಗಾಂಜಾ ವಶ, ನಾಲ್ವರು ಬಂಧನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ,ಗಂಗಾವತಿ :
ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ತಂಡ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 5.77 ಕೆ.ಜಿ. ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ತಿಳಿಸಿದ್ದಾರೆ.
ಚಿಕ್ಕಜಂತಕಲ್ಲ ಗ್ರಾಮದ ಮಾರಮ್ಮ ದೇವಿ ದೇವಸ್ಥಾನದ ಸಮೀಪ ವಾಹನ ತಪಾಸಣೆ ನಡೆಸಿದ ವೇಳೆ ಗಾಂಜಾ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ಅಡ್ಡಗಟ್ಟಿದರು. ಬಂಧಿತರನ್ನು ಆಂಧ್ರಪ್ರದೇಶದ ಗುಂತಕಲ್ ಮೂಲದ ಗೋಪಾಲ್ ವಾಲ್ಮೀಕಿ (32), ಮಸ್ತಾನ್ (31), ಶೇಖ್ ಮಹಿಬೂಬ್ ಪಾಷಾ (23) ಹಾಗೂ ಶೇಖರ್ ಶೆಟ್ಟಿ (39) ಎಂದು ಗುರುತಿಸಲಾಗಿದೆ. ಇವರು ಗಾಂಜಾವನ್ನು ಆಂಧ್ರಪ್ರದೇಶದಿಂದ ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ಎಸ್‌ಪಿಯವರು ತಿಳಿಸಿದ್ದಾರೆ.
“ಜಿಲ್ಲೆಯಲ್ಲಿ ಮಾದಕ ವಸ್ತು ಮುಕ್ತ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ದಂಧೆಗಾರರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರೂ ಇಂತಹ ಅಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು,” ಎಂದು ಎಸ್‌ಪಿಯವರು ಮನವಿ ಮಾಡಿದರು.
ವಶಕ್ಕೆ ಪಡೆದ ಗಾಂಜಾದ ಮೌಲ್ಯ ಸುಮಾರು 2.80 ಲಕ್ಷ ರೂ. ಆಗಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ ಪೊಲೀಸರಿಗೆ ಬಹುಮಾನ ಘೋಷಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಪ್ರಕಾಶ್ ನಾಳೆ, ರಂಗಪ್ಪ ದೊಡ್ಡಮನಿ ಮತ್ತು ತನಿಖಾ ತಂಡದ ಸಿಬ್ಬಂದಿ ಪಾಲ್ಗೊಂಡಿದ್ದರು.